ಪತಿ, ಗರ್ಭಿಣಿ ಪತ್ನಿ, ಎಂಟು ವರ್ಷದ ಪುತ್ರನನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು

Update: 2019-10-10 12:30 GMT

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಜಿಯಾಗಂಜ್ ಎಂಬ ಪಟ್ಟಣದಲ್ಲಿನ 35 ವರ್ಷದ ಶಾಲಾ ಶಿಕ್ಷಕ, ಆತನ ಗರ್ಭಿಣಿ ಪತ್ನಿ ಹಾಗೂ ಎಂಟು ವರ್ಷದ ಪುತ್ರನನ್ನು ಆಗಂತುಕರು ಅವರ ಮನೆಯಲ್ಲಿ ಬರ್ಬರವಾಗಿ ಕೊಲೆಗೈದಿದ್ದಾರೆ.

ಮೃತರನ್ನು ಬಂಧು ಪ್ರಕಾಶ್ ಪಾಲ್, ಆತನ ಪತ್ನಿ ಬ್ಯೂಟಿ (30) ಹಾಗೂ ಪುತ್ರ ಆರ್ಯ ಎಂದು ಗುರುತಿಸಲಾಗಿದೆ. ಮನೆಯ ವಿವಿಧ ಭಾಗಗಳಲ್ಲಿ ಅವರ ರಕ್ತಸಿಕ್ತ ಮೃತದೇಹಗಳು ವಿಜಯದಶಮಿ ದಿನ ಪತ್ತೆಯಾಗಿದ್ದವು. ಘಟನೆ ಸಂಬಂಧ ಇಲ್ಲಿಯ ತನಕ ಯಾರನ್ನೂ ಬಂಧಿಸಲಾಗಿಲ್ಲ, ಆದರೆ ಮೂವರಿಗೂ ಅಮಲು ಬರಿಸುವ ವಸ್ತು ನೀಡಿ ನಂತರ ಕೊಲೆಗೈಯ್ಯಲಾಗಿದೆ ಎಂಬ ಶಂಕೆಯಿದೆ.

ಇದೀಗ ಈ ಮೂವರ ಕೊಲೆ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಕೊಲೆಗೀಡಾದ ಪ್ರಕಾಶ್ ಪಾಲ್ ಇತ್ತೀಚೆಗಷ್ಟೇ ಆರೆಸ್ಸೆಸ್ ಸೇರಿದ್ದ ಎಂದು ಬಿಜೆಪಿ ಮತ್ತು ಆರೆಸ್ಸೆಸ್ ಹೇಳಿಕೊಂಡಿವೆ. ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಘಟನೆಯ ಬಗ್ಗೆ ವೀಡಿಯೋದೊಂದಿಗೆ ಟ್ವೀಟ್ ಮಾಡಿ ಆರೆಸ್ಸೆಸ್  ಕಾರ್ಯಕರ್ತನ ಕುಟುಂಬವನ್ನು ಕೊಲೆಗೈಯ್ಯಲಾಗಿದೆ ಎಂದು ಬರೆದಿದ್ದಾರೆ.

ಪ್ರಕಾಶ್ ಪಾಲ್ ಕುಟುಂಬ ಎರಡು ವರ್ಷಗಳಿಂದ ಈ ಪಟ್ಟಣದಲ್ಲಿ ನೆಲೆಸಿತ್ತು. ಆದರೆ ಘಟನೆಗೆ ಮತೀಯ ಅಥವಾ ರಾಜಕೀಯ ಕಾರಣವಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಕೊಲೆಗೆ ಆಸ್ತಿ ವಿವಾದ ಅಥವಾ ವೈಯಕ್ತಿಕ ದ್ವೇಷ ಕಾರಣವಾಗಿರಬಹುದೇ ಎಂಬ ಅಂಶವನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ವಿಜಯದಶಮಿ ಪೂಜೆಗೆ ಕುಟುಂಬ ಹಾಜರಾಗದೇ ಇದ್ದುದನ್ನು ಕಂಡು ಅವರ ಮನೆಗೆ ಬಂದ ಸ್ಥಳೀಯರು ಮನೆ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿದ್ದನ್ನು  ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕೊಲೆಗೀಡಾದ ಪ್ರಕಾಶ್ ಆರೆಸ್ಸೆಸ್ಸಿನ ಸಾಪ್ತಾಹಿಕ ಮಿಲನ್ ಸಬೆಯಲ್ಲಿ ಭಾಗವಹಿಸಿದ್ದ ಎಂದು ಆರೆಸ್ಸೆಸ್ ಪಶ್ಚಿಮ ಬಂಗಾಳ ಕಾರ್ಯದರ್ಶಿ ಜಿಷ್ಣು ಬಸು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News