ಜ.1ರೊಳಗೆ ಕೆವೈಸಿ ನವೀಕರಿಸಲು ಎಲ್ಲಾ ಬ್ಯಾಂಕ್ ಗ್ರಾಹಕರಿಗೆ ಸೂಚನೆ

Update: 2019-10-10 17:32 GMT

ಹೊಸದಿಲ್ಲಿ, ಅ.10: ಆರ್‌ಬಿಐ ತನ್ನ ಕೆವೈಸಿ ಮಾರ್ಗದರ್ಶಿ ಸೂತ್ರವನ್ನು ಪರಿಷ್ಕರಿಸಿದ್ದು ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಪ್ರತಿಯೊಬ್ಬರೂ ತಮ್ಮ ಕೆವೈಸಿಯನ್ನು 2020ರ ಜನವರಿ 1ಕ್ಕಿಂತ ಮೊದಲು ನವೀಕರಿಸದಿದ್ದರೆ ಅಂತಹ ಬ್ಯಾಂಕ್ ಖಾತೆಗಳು ರದ್ದಾಗಬಹುದು ಎಂದು ತಿಳಿಸಿದೆ.

  ಪ್ರತೀ ಬ್ಯಾಂಕ್‌ಗಳೂ ‘ಹೈ ರಿಸ್ಕ್’ ಗ್ರಾಹಕರ ಕೆವೈಸಿ(ನಿಮ್ಮ ಗ್ರಾಹಕರ ಬಗ್ಗೆ ಅರಿಯಿರಿ)ಯನ್ನು 2 ವರ್ಷಕ್ಕೊಮ್ಮೆ ನವೀಕರಿಸಬೇಕಿದೆ. ಮಧ್ಯಮ ರಿಸ್ಕ್ ಗ್ರಾಹಕರ ಕೆವೈಸಿ 8 ವರ್ಷಕ್ಕೊಮ್ಮೆ, ಕಡಿಮೆ ರಿಸ್ಕ್‌ನ ಗ್ರಾಹಕರ ಕೆವೈಸಿ 10 ವರ್ಷಕ್ಕೊಮ್ಮೆ ನವೀಕರಿಸಬೇಕು.

 ಸಾಮಾನ್ಯ ಬ್ಯಾಂಕ್ ಖಾತೆಯನ್ನು ಹೊಂದಿರುವವರಿಗೆ ಜನವರಿ 1 ಅಂತಿಮ ದಿನವಾಗಿದ್ದರೆ, ಫೋನ್‌ಪೆ, ಪೇಟಿಎಂ, ಅಮಝಾನ್ ಪೇ ಮತ್ತಿತರ ವ್ಯಾಲೆಟ್‌ಗಳನ್ನು ಬಳಸುವ ಗ್ರಾಹಕರಿಗೆ ಕೆವೈಸಿ ನವೀಕರಿಸಲು 2020ರ ಫೆಬ್ರವರಿ 29ರವರೆಗೆ ಅವಕಾಶವಿರುತ್ತದೆ. ಆರ್‌ಬಿಐಯ ಸೂಚನೆಯನ್ನು ಗ್ರಾಹಕರಿಗೆ ನೆನಪಿಸಲು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಇ-ಮೇಲ್ ಮೂಲಕ ಜ್ಞಾಪಕಪತ್ರ, ಅಧಿಸೂಚನೆಗಳನ್ನು ರವಾನಿಸುತ್ತಿವೆ.

ಅಂತಿಮ ದಿನಾಂಕ ಮೀರಿದ ಬಳಿಕ ಕೆವೈಸಿ ನವೀಕರಿಸದ ಬ್ಯಾಂಕ್ ಖಾತೆ ರದ್ದಾಗುವ ಸಾಧ್ಯತೆಯಿದೆ. ಖಾತೆ ರದ್ದಾದರೆ ಆ ಖಾತೆಯ ಮೂಲಕ ಬ್ಯಾಂಕಿಂಗ್ ವ್ಯವಹಾರ ನಡೆಸಲು ಆಗುವುದಿಲ್ಲ.

  ವಂಚನೆ ಮತ್ತು ದುರುಪಯೋಗ ತಡೆಯುವ ನಿಟ್ಟಿನಲ್ಲಿ ಬ್ಯಾಂಕ್‌ಗಳು ತನ್ನ ಗ್ರಾಹಕರ ಗುರುತು ಮತ್ತು ವಿಳಾಸ ಪತ್ತೆ ಹಚ್ಚಲು ಕೆವೈಸಿ ಪ್ರಕ್ರಿಯೆ ಕಡ್ಡಾಯವಾಗಿ ನಡೆಸಬೇಕೆಂದು ಆರ್‌ಬಿಐ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News