ಸಾವಿರಾರು ಬುಡಕಟ್ಟು ಜನರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲು ಹಕ್ಕುಗಳ ಸಂಘಟನೆ ಮನವಿ
ಹೊಸದಿಲ್ಲಿ,ಅ.11: ಪತಲ್ಗಡಿ ಪ್ರತಿಭಟನೆಗೆ ಸಂಬಂಧಿಸಿದಂತೆ ಕುಂತಿಯ ಸಾವಿರಾರು ಅನಾಮಧೇಯ ನಿವಾಸಿಗಳ ವಿರುದ್ಧ ದಾಖಲಿಸಲಾಗಿರುವ ಎಲ್ಲ ಪ್ರಕರಣಗಳನ್ನು ಕೈಬಿಡುವಂತೆ ಅನೇಕ ಸಾಮಾಜಿಕ ಚಳವಳಿಗಳು ಮತ್ತು ಸಂಘಟನೆಗಳ ಜಾಲ ಜಾರ್ಖಂಡ್ ಜನಾಧಿಕಾರ ಮಹಾಸಭಾ ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ.
ಜೊತೆಗೆ, ಎಫ್‌ಐಆರ್‌ನಲ್ಲಿ ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿ ದಾಖಲಿಸಲಾಗಿರುವ ಪ್ರಕರಣಗಳ ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ಅಂತಹ ಪ್ರಕರಣಗಳನ್ನು ದಾಖಲಿಸಲು ಆಧಾರವಾಗಿ ಬಳಸಲಾದ ಸಾಕ್ಷಿಯಾದರೂ ಯಾವುದು ಎನ್ನುವುದನ್ನು ಪೊಲೀಸರು ಸಾರ್ವಜನಿಕಗೊಳಿಸಬೇಕು ಎಂದು ಮಹಾಸಭಾ ಆಗ್ರಹಿಸಿದೆ.
ಕಳೆದ ಎರಡು ವರ್ಷಗಳಲ್ಲಿ ಜಾರ್ಖಂಡ್ ನ ನೂರಾರು ಹಳ್ಳಿಗಳಲ್ಲಿ ಹರಡಿರುವ ಸಾಮಾಜಿಕ ಚಳವಳಿಯನ್ನು ಸಂಕ್ಷಿಪ್ತವಾಗಿ ಪತಲ್ಗಡಿ ಪ್ರತಿಭಟನೆ ಎಂದು ಕರೆಯಲಾಗುತ್ತದೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ಜಮೀನಿನ ಒತ್ತಾಯಪೂರ್ವಕ ಸ್ವಾಧೀನತೆಯ ವಿರುದ್ಧ ಮತ್ತು ಸಾಂಪ್ರದಾಯಿಕ ಗ್ರಾಮಸಭೆ ಮತ್ತು ಆದಿವಾಸಿ ಆಡಳಿಯ ವ್ಯವಸ್ಥೆಯನ್ನು ಮರುಸ್ಥಾಪಿಸಲು ಆಗ್ರಹಿಸಿ ಈ ಚಳವಳಿಯನ್ನು ನಡೆಸಲಾಗುತ್ತಿದೆ. ಮಹಾಸಭಾ ತನ್ನ ಹೇಳಿಕೆಯಲ್ಲಿ, ಹೋರಾಟಗರರು, ಶಿಕ್ಷಣತಜ್ಞರು ಮತ್ತು ನ್ಯಾಯವಾದಿಗಳನ್ನು ಒಳಗೊಂಡ ನಿಜಾಂಶ ಪತ್ತೆ ತಂಡ ರಾಜ್ಯದ ಕುಂತಿ ಜಿಲ್ಲೆಯ ಕೆಲವೊಂದು ಪತಲ್ಗಡಿ ಗ್ರಾಮಗಳಿಗೆ ಭೇಟಿ ನೀಡಿತ್ತು. ಈ ವೇಳೆ, ಪತಲ್ಗಡಿ ಪ್ರತಿಭಟನೆಗೆ ಸರಕಾರ ತೀವ್ರ ಹಿಂಸಾತ್ಮಕ ಮತ್ತು ದಮನಕಾರಿ ಪ್ರತಿಕ್ರಿಯೆ ನೀಡಿರುವುದು ಕಂಡುಬಂದಿದೆ. ಕೆಲವು ಗ್ರಾಮಗಳಲ್ಲಿ ಆದಿವಾಸಿಗಳ ಮೇಲೆ ಹಲ್ಲೆ ನಡೆಸಲಾಗಿದೆ, ಮನೆಗಳ ಮೇಲೆ ದಾಳಿ ನಡೆಸಿ ಹಾನಿಗೊಳಿಸಲಾಗಿದೆ ಎಂದು ತಿಳಿಸಿದೆ.
ಗಾಗ್ರ ಗ್ರಾಮದಲ್ಲಿ ಪೊಲೀಸರಿಂದ ಏಟು ತಿಂದ ಗರ್ಭಿಣಿ ಅಶ್ರಿತಾ ಮುಂಡ ಕೆಲವಾರಗಳ ನಂತರ ದೈಹಿಕ ಅಂಗವೈಕಲ್ಯ ಹೊಂದಿದ್ದ ಮಗುವಿಗೆ ಜನ್ಮ ನೀಡಿದ್ದರು ಎಂದು ಮಹಾಸಭಾ ಆರೋಪಿಸಿದೆ.