ಪೀಟರ್ ಹಾಂಡ್ಕಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ವಿರುದ್ಧ ಹಲವು ದೇಶಗಳಲ್ಲಿ ಆಕ್ರೋಶ
ಬೆಲ್ಗ್ರೇಡ್ (ಸರ್ಬಿಯ), ಅ. 11: ಆಸ್ಟ್ರಿಯದ ಸಾಹಿತಿ ಪೀಟರ್ ಹಾಂಡ್ಕಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ನೀಡಿರುವುದಕ್ಕೆ ಆಲ್ಬೇನಿಯ, ಬೋಸ್ನಿಯ ಮತ್ತು ಕೊಸೊವೊ ದೇಶಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ದೇಶಗಳಲ್ಲಿ ಹಾಂಡ್ಕಿರನ್ನು ಸರ್ಬಿಯದ ದಿವಂಗತ ನಾಯಕ ಸ್ಲೊಬೊದನ್ ಮಿಲೊಸೆವಿಚ್‌ರ ಅಭಿಮಾನಿ ಎಂಬುದಾಗಿ ವ್ಯಾಪಕವಾಗಿ ಪರಿಗಣಿಸಲಾಗಿದೆ.
1990ರ ದಶಕದಲ್ಲಿ, ಈ ಹಿಂದಿನ ಯುಗೊಸ್ಲಾವಿಯ ದೇಶ ವಿಭಜನೆಗೊಂಡ ಸಂದರ್ಭದಲ್ಲಿ ನಡೆದ ರಕ್ತಪಾತದ ವೇಳೆ ಹಾಂಡ್ಕಿ ಸರ್ಬಿಯನ್ನರ ಪ್ರಬಲ ಸಮರ್ಥಕರಾಗಿದ್ದರು. ಅಷ್ಟೇ ಅಲ್ಲದೆ, ಅವರು ಸರ್ಬಿಯನ್ನರನ್ನು ನಾಝಿ ಆಡಳಿತದ ಅಡಿಯಲ್ಲಿ ಇದ್ದ ಯಹೂದಿಗಳಿಗೆ ಹೋಲಿಸಿದ್ದರು. ಬಳಿಕ, ಅವರು ಈ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.
ಅವರ 1996ರ ಪ್ರಯಾಣ ಕಥನ ‘ವಿ ಜರ್ನಿ ಟು ದ ರಿವರ್ಸ್: ಜಸ್ಟೀಸ್ ಫಾರ್ ಸರ್ಬಿಯ’ ಭಾರೀ ಬಿರುಗಾಳಿಯನ್ನು ಎಬ್ಬಿಸಿತ್ತು. ಬೆಲ್ಗ್ರೇಡ್ ಮೇಲೆ ನ್ಯಾಟೊ ನಡೆಸಿದ ದಾಳಿಯನ್ನು ಖಂಡಿಸಿ 1999ರಲ್ಲಿ ಅವರು ಜರ್ಮನಿಯ ಪ್ರತಿಷ್ಠಿತ ‘ಬೂಕರ್’ ಪ್ರಶಸ್ತಿಯನ್ನು ಹಿಂದಿರುಗಿಸಿದ್ದರು.
‘‘ನೊಬೆಲ್ ಪ್ರಶಸ್ತಿಯೊಂದರ ಕಾರಣಕ್ಕಾಗಿ ವಾಂತಿ ಮಾಡಬೇಕಾಗಿ ಬರುತ್ತದೆ ಎನ್ನುವುದನ್ನು ನಾನೆಂದೂ ಯೋಚಿಸಿಲ್ಲ’’ ಎಂದು ಆಲ್ಬೇನಿಯದ ಪ್ರಧಾನಿ ಎಡಿ ರಮ ಟ್ವೀಟ್ ಮಾಡಿದ್ದಾರೆ.
‘‘ನೊಬೆಲ್ ಅಕಾಡೆಮಿಯಂಥ ಶ್ರೇಷ್ಠ ನೈತಿಕ ಪ್ರಾಧಿಕಾರವೊಂದು ಮಾಡಿರುವ ಅವಮಾನಕಾರಿ ಆಯ್ಕೆಯನ್ನು ಗಮನಿಸಿದರೆ, ನಾಚಿಕೆಗೆಡುವುದೇ ಹೊಸ ಮೌಲ್ಯ ಎಂಬಂತಾಗಿದೆ. ಇಲ್ಲ, ಜನಾಂಗವಾದ ಮತ್ತು ಜನಾಂಗೀಯ ಹತ್ಯೆಗೆ ನಾವು ಇಷ್ಟೊಂದು ಸಂವೇದನಾರಹಿತರಾಗಿರಲು ಸಾಧ್ಯವಿಲ್ಲ’’ ಎಂದು ಅವರು ಹೇಳಿದ್ದಾರೆ.
ವಿವಾದಾಸ್ಪದ, ನಾಚಿಕೆಗೇಡು: ಬೋಸ್ನಿಯದ ಸಹ ಅಧ್ಯಕ್ಷ ಸೆಫಿಕ್ ಝಫೆರೊವಿಚ್
ಹಾಂಡ್ಕಿಗೆ ನೊಬೆಲ್ ಪ್ರಶಸ್ತಿ ನೀಡಿರುವುದು ‘‘ವಿವಾದಾಸ್ಪದ ಮತ್ತು ನಾಚಿಕೆಗೇಡು’’ ಎಂದು ಬೋಸ್ನಿಯದ ಸಹ ಅಧ್ಯಕ್ಷ ಸೆಫಿಕ್ ಝಫೆರೊವಿಚ್ ಬಣ್ಣಿಸಿದ್ದಾರೆ.
‘‘ಸ್ಲೊಬೊದನ್ ಮಿಲೊಸೆವಿಚ್ ಮತ್ತು ಅವರ ಹಿಂಬಾಲಕರನ್ನು ಹಾಂಡ್ಕಿ ಸಮರ್ಥಿಸುತ್ತಿದ್ದರು ಮತ್ತು ರಕ್ಷಿಸುತ್ತಿದ್ದರು ಎನ್ನುವ ವಾಸ್ತವವನ್ನು ನೊಬೆಲ್ ಪ್ರಶಸ್ತಿ ಸಮಿತಿ ಸುಲಭವಾಗಿ ನಿರ್ಲಕ್ಷಿಸಿರುವುದು ನಾಚಿಕೆಗೇಡು’’ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಜನಾಂಗೀಯ ಹತ್ಯೆ ಸೇರಿದಂತೆ ಗಂಭೀರ ಯುದ್ಧಾಪರಾಧಗಳಿಗಾಗಿ ಮಿಲೊಸೆವಿಚ್‌ರ ಸೇನಾ ಮುಖ್ಯಸ್ಥ ರಾಟ್ಕೊ ಮಲಾಡಿಕ್‌ಗೆ ವಿಶ್ವಸಂಸ್ಥೆಯ ನ್ಯಾಯಾಲಯವೊಂದು ಜೈಲು ಶಿಕ್ಷೆ ವಿಧಿಸಿದೆ.