ಹಾಂಕಾಂಗ್ ಪ್ರತಿಭಟನಕಾರರ ಪರ ಆ್ಯಪನ್ನು ಹಿಂದಕ್ಕೆ ಪಡೆದುಕೊಂಡ ಗೂಗಲ್

Update: 2019-10-11 18:31 GMT

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಅ. 11: ಹಾಂಕಾಂಗ್ ಪ್ರತಿಭಟನಕಾರನಂತೆ ಆಡಲು ಜನರಿಗೆ ಅವಕಾಶ ನೀಡುವ ಮೊಬೈಲ್ ಗೇಮ್ ಒಂದನ್ನು ತನ್ನ ಆನ್‌ಲೈನ್ ಮಾರುಕಟ್ಟೆಯಿಂದ ಗೂಗಲ್ ಗುರುವಾರ ಹಿಂದಕ್ಕೆ ಪಡೆದುಕೊಂಡಿದೆ. ಸಂಘರ್ಷಗಳಿಂದ ಲಾಭ ಮಾಡಿಕೊಳ್ಳುವುದನ್ನು ವಿರೋಧಿಸುವ ನೀತಿಯನ್ನು ಈ ಗೇಮ್ ಉಲ್ಲಂಘಿಸಿದೆ ಎಂದು ಅದು ಹೇಳಿದೆ.

 ಹಾಂಕಾಂಗ್‌ನಲ್ಲಿ ಪೊಲೀಸರ ಚಲನವಲನಗಳ ಮೇಲೆ ಗಮನವಿಡಲು ಪ್ರತಿಭಟನಕಾರರಿಗೆ ಅವಕಾಶ ನೀಡುವ ಆ್ಯಪೊಂದನ್ನು ಆ್ಯಪಲ್ ಹಿಂದಕ್ಕೆ ಪಡೆದ ಬಳಿಕ ಗೂಗಲ್ ಕೂಡ ಇಂಥದೇ ಕ್ರಮವನ್ನು ತೆಗೆದುಕೊಂಡಿದೆ.

ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವ ಪರ ಚಳವಳಿಗೆ ಬೆಂಬಲ ನೀಡುತ್ತಿರುವಂತೆ ಕಂಡುಬರುವ ವಿದೇಶಿ ಕಂಪೆನಿಗಳ ಮೇಲಿನ ಒತ್ತಡವನ್ನು ಚೀನಾ ಹೆಚ್ಚಿಸುತ್ತಿದೆ.

 ಪ್ಲೇ ಸ್ಟೋರ್‌ನಿಂದ ‘ದ ರೆವಲೂಶನ್ ಆಫ್ ಅವರ್ ಟೈಮ್ಸ್’ ಗೇಮನ್ನು ತೆಗೆಯುವ ನಿರ್ಧಾರಕ್ಕೆ ಪೊಲೀಸರು ಅಥವಾ ಕ್ಯಾಲಿಫೋರ್ನಿಯದಲ್ಲಿರುವ ಕಂಪೆನಿಗೆ ಹೊರತಾದ ಯಾವುದೇ ಸಂಸ್ಥೆ ಅಥವಾ ಸಂಘಟನೆಯಿಂದ ಬಂದ ಮನವಿ ಕಾರಣವಲ್ಲ ಎಂದು ಜಾಗತಿಕ ತಂತ್ರಜ್ಞಾನ ದೈತ್ಯ ಗೂಗಲ್ ಹೇಳಿದೆ.

ಆ್ಯಪಲ್ ಕಂಪೆನಿಯು ತನ್ನ ಆ್ಯಪಲ್ ಸ್ಟೋರ್‌ನಿಂದ ‘ಎಚ್‌ಕೆಮ್ಯಾಪ್.ಲೈವ್’ ಎಂಬ ಆ್ಯಪನ್ನು ಈಗಾಗಲೇ ಹಿಂದಕ್ಕೆ ಪಡೆದಿದೆ. ಅದು ಪೊಲೀಸರನ್ನು ಅಪಾಯಕ್ಕೆ ಗುರಿ ಮಾಡುತ್ತದೆ ಎಂದು ಆ್ಯಪಲ್ ಹೇಳಿದೆ. ಚೀನಾವು ಎಚ್ಚರಿಕೆ ನೀಡಿದ ಬಳಿಕ ಆ್ಯಪಲ್ ಈ ಕ್ರಮವನ್ನು ತೆಗೆದುಕೊಂಡಿದೆ.

ಚೀನಾದ ಒತ್ತಡಕ್ಕೆ ಮಣಿದು ಈ ಜಾಗತಿಕ ಕಂಪೆನಿಗಳು ತಮ್ಮ ಆ್ಯಪ್‌ಗಳನ್ನು ತೆಗೆದಿವೆ ಎಂಬ ಟೀಕೆಗಳು ವ್ಯಕ್ತವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News