‘ಸ್ವದೇಶಿ’ ನಾಟಕಕ್ಕೆ ತೆರೆ: ಭಾರತೀಯ ಲಿಂಚಿಂಗ್‌ಗೆ ಕರೆ

Update: 2019-10-11 18:35 GMT

ವಿಶೇಷವೆಂದರೆ ಈ ವರ್ಷ, ಭಾಗವತರ ಭಾಷಣದಲ್ಲಿರುವ ‘ಒಳಗೊಳ್ಳುವ’ ಅಂಶಗಳನ್ನು ಕಾಣಲು ಹಲವಾರು ಜಾತ್ಯತೀತ ಹಾಗೂ ಪ್ರಗತಿಪರ ಪತ್ರಕರ್ತರು ಮತ್ತು ಬುದ್ಧಿಜೀವಿಗಳೂ ಇದ್ದಕ್ಕಿದ್ದಂತೆ ಪೈಪೋಟಿ ತೋರುತ್ತಿದ್ದಾರೆ. ಅದಕ್ಕೆ ಮೋದಿ ಸರಕಾರದ ಭಿನ್ನಮತದ ಬಗ್ಗೆ ಮೂಡಿಸಿರುವ ಭೀತಿ ಹಾಗೂ ಶರಣಾದರೆ ನೀಡುವ ಪ್ರಲೋಭನೆಗಳು ಮಾತ್ರವೇ ಕಾರಣವೆಂದು ಆರೋಪಿಸಲಾಗದು. ಈ ಕಾರಣಗಳಿಗಾಗಿಯೂ ಭಾಗವತರ ಭಾಷಣ ಮತ್ತು ಅದರ ಹೂರಣವನ್ನು ಇನ್ನಷ್ಟು ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ಆರೆಸ್ಸೆಸ್‌ನ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಮೊನ್ನೆ ವಿಜಯದಶಮಿಯಂದು ಮಾಡಿರುವ ವಾರ್ಷಿಕ ಸಾರ್ವಜನಿಕ ಭಾಷಣ ಹಲವಾರು ಕಾರಣಗಳಿಂದ ಚರ್ಚೆಗೆ ಗುರಿಯಾಗಿದೆ. ಪ್ರತಿ ವಿಜಯದಶಮಿಯಂದು ಆರೆಸ್ಸೆಸ್‌ನ ಸರಸಂಘಚಾಲಕರು ಮಾಡುವ ಭಾಷಣವು ದೇಶದ ಪರಿಸ್ಥಿತಿಯ ಬಗ್ಗೆ ಸಂಘದ ಗ್ರಹಿಕೆಯನ್ನು ಮತ್ತು ಹಾಲಿ ಸಂದರ್ಭದಲ್ಲಿ ಸಂಘದ ಗುರಿಯಾದ ‘ಹಿಂದೂರಾಷ್ಟ್ರ’ ಸಾಧನೆಯ ನೀಲನಕ್ಷೆಯನ್ನೂ ಒದಗಿಸುತ್ತದೆ. 2014ರಿಂದ ದೇಶದಲ್ಲಿ ಆರೆಸ್ಸೆಸ್ ಸರಕಾರವೇ ಅಧಿಕಾರದಲ್ಲಿದೆ. ಅದರಲ್ಲೂ 2019ರಲ್ಲಿ ಮೋದಿ ಸರಕಾರ ಆರೆಸ್ಸೆಸ್‌ನ ಹಿಂದುತ್ವವಾದಿ ಅಜೆಂಡಾಗಳನ್ನೇ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಭಾಗವತರ ಈ ವರ್ಷದ ವಿಜಯದಶಮಿ ಭಾಷಣ ಮುಂದಿನ ಐದು ವರ್ಷಗಳ ಕಾಲ ಭಾರತ ಸರಕಾರದ ನಡೆಗಳನ್ನೂ ಹಾಗೂ ಅರೆಸ್ಸೆಸ್‌ನ ಕಾರ್ಯಸೂಚಿಯನ್ನೂ ಅರ್ಥಮಾಡಿಕೊಳ್ಳಲು ಕೀಲಕವಾದ ಮುನ್ಸೂಚನೆಗಳನ್ನು ನೀಡುತ್ತದೆ. ವಿಶೇಷವೆಂದರೆ ಈ ವರ್ಷ, ಭಾಗವತರ ಭಾಷಣದಲ್ಲಿರುವ ‘ಒಳಗೊಳ್ಳುವ’ ಅಂಶಗಳನ್ನು ಕಾಣಲು ಹಲವಾರು ಜಾತ್ಯತೀತ ಹಾಗೂ ಪ್ರಗತಿಪರ ಪತ್ರಕರ್ತರು ಮತ್ತು ಬುದ್ಧಿಜೀವಿಗಳೂ ಇದ್ದಕ್ಕಿದ್ದಂತೆ ಪೈಪೋಟಿ ತೋರುತ್ತಿದ್ದಾರೆ. ಅದಕ್ಕೆ ಮೋದಿ ಸರಕಾರದ ಭಿನ್ನಮತದ ಬಗ್ಗೆ ಮೂಡಿಸಿರುವ ಭೀತಿ ಹಾಗೂ ಶರಣಾದರೆ ನೀಡುವ ಪ್ರಲೋಭನೆಗಳು ಮಾತ್ರವೇ ಕಾರಣವೆಂದು ಆರೋಪಿಸಲಾಗದು. ಈ ಕಾರಣಗಳಿಗಾಗಿಯೂ ಭಾಗವತರ ಭಾಷಣ ಮತ್ತು ಅದರ ಹೂರಣವನ್ನು ಇನ್ನಷ್ಟು ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಪದ, ಅರ್ಥ ಹಾಗೂ ಸಂವಿಧಾನಗಳ ಲಿಂಚಿಂಗ್:

ಮೋಹನ್ ಭಾಗವತರು ವಿಜಯದಶಮಿಯಂದು ಮಾಡಿದ ಒಂದುಗಂಟೆಗೂ ಹೆಚ್ಚಿನ ಅವಧಿಯ ಭಾಷಣದಲ್ಲಿ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಎಂದಿನಂತೆ ‘‘ಹಿಂದುತ್ವ ಎಂದರೆ ಧರ್ಮವಲ್ಲ. ಅದು ಭಾರತೀಯತೆ. ಇಲ್ಲಿ ವಾಸಿಸುವವರು ಯಾವುದೇ ಧರ್ಮವನ್ನು ಅನುಸರಿಸಿದರೂ ಪರವಾಗಿಲ್ಲ. ಇಲ್ಲಿನ ಸಂಸ್ಕೃತಿ, ಪರಂಪರೆ, ಇತಿಹಾಸಗಳಿಗೆ ಬದ್ಧರಾಗಿದ್ದರೆ ಸಾಕು’’- ಇತ್ಯಾದಿ ಹಳೆಯ ಸಾವರ್ಕರ್ ಸರಕುಗಳನ್ನು ಭಾಗವತರು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

 ಆದರೆ ಈ ಬಾರಿಯ ವಿಶೇಷವೇನೆಂದರೆ ತಮ್ಮ ಈ ವಿವರಣೆಗಳ ಹಿಂದಿರುವ ಬಹಿರಂಗ ಆಕ್ರಮಣವನ್ನು ಮರೆಮಾಚಲು ‘‘ಹಿಂದುತ್ವವೆಂದರೆ ಅಂಬೇಡ್ಕರ್ ಹೇಳುವ ಭ್ರಾತೃತ್ವ’’ ಎಂದೂ ಅಪ್ಪಟ ಸುಳ್ಳು ಹೊಸೆದಿದ್ದಾರೆ. ಮತ್ತು ಅದರಿಂದ ಗೊಂದಲಕ್ಕೀಡಾಗಲು ಸಿದ್ಧರಾಗಿರುವವರನ್ನು ಗೊಂದಲಕ್ಕೆ ಕೆಡವಿದ್ದಾರೆ.ಜೊತೆಗೆ ಇತ್ತೀಚಿನ ದಿನಗಳಲ್ಲಿ ಸಂಘಪರಿವಾರವು ‘ಹಿಂದೂ’ ಎಂಬ ಪದಕ್ಕೆ ಬದಲಾಗಿ ಭಾರತೀಯತೆ ಎಂದು ಬಳಸಲು ಒಪ್ಪುತ್ತಿರುವುದನ್ನು ಕೆಲವರು ಸಂಘದ ‘ಒಳಗೊಳ್ಳುವಿಕೆ’ಗೆ ಉದಾಹರಣೆಯಾಗಿ ಉಲ್ಲೇಖಿಸುತ್ತಿದರು. ಆದರೆ ಈ ಬಾರಿ ಚುನಾವಣೆಯಲ್ಲಿ ಹಿಂದುತ್ವಕ್ಕೆ ಸಿಕ್ಕಿರುವ ಬೆಂಬಲದಿಂದ ಉತ್ತೇಜಿತರಾಗಿರುವ ಭಾಗವತರು ತಮ್ಮ ಭಾಷಣದಲ್ಲಿ ಉದಾರವಾದಿಗಳಿಗಿದ್ದ ಇಂತಹ ಭ್ರಮೆಗಳನ್ನು ನಿವಾರಿಸಿದ್ದಾರೆ. ‘‘ಈ ನೆಲದ ದೇಶೀಯತೆಯನ್ನು ಕೆಲವರು ‘ಇಂಡಿಕ್’ ಎಂದೂ ಕೆಲವರು ‘ಭಾರತೀಯತೆ’ ಎಂದು ಕರೆಯಲು ಬಯಸುತ್ತಾರೆ. ಆದರೆ ಅವೆಲ್ಲಕ್ಕಿಂತ ‘ಹಿಂದೂ’ ಎಂಬ ಪದವೇ ಹೆಚ್ಚಿನ ಸಮಗ್ರತೆಯುಳ್ಳ ಪದವಾಗಿದೆ’’ ಎಂದು ಅವರು ಖಚಿತಪಡಿಸಿದ್ದಾರೆ.

 ಈ ದೇಶದ ಜನರು ಎಲ್ಲಾ ಸ್ವರೂಪದ ದೈವಾರಾಧನೆಗಳನ್ನೂ (ಏಕದೈವ ಅಥವಾ ಬಹುದೈವ) ಅತ್ಯಂತ ಸಹಿಷ್ಣುಗಳಾಗಿ ಸ್ವಾಗತಿಸಿದ್ದಾರೆ ಎಂಬ ಉದಾರವಾದಿ ಮಾತುಗಳನ್ನಾಡಿದ ಭಾಗವತರು, ಇಸ್ಲಾಂ ಮಾತ್ರ ಈ ದೇಶಕ್ಕೆ ಬಂದದ್ದು ದಾಳಿಕೋರರ ಜೊತೆಗೆ ಎಂಬ ಅಪ್ಪಟ ಸುಳ್ಳನ್ನೂ ಹದವಾಗಿ ಬೆರೆಸಿದರು. ಈ ದೇಶದ ‘ಜನರಿಗೆ’ ಮುಸ್ಲಿಮರ ಬಗ್ಗೆ ಅಸಮಾಧಾನ ಇರುವುದು ಈ ಕಾರಣಕ್ಕೆ ಎಂದು ಹೇಳುತ್ತಾ ಭಾಗವತ್ ಅವರು ಆರೆಸ್ಸೆಸ್‌ಗಿರುವ ರಾಜಕೀಯವನ್ನು ಇಡೀ ದೇಶದ್ದು ಎಂದು ಸಮೀಕರಿಸಿಬಿಟ್ಟರು. ಆದರೆ ‘‘ನಿಧಾನಕ್ಕೆ ಈ ವಿರೋಧ ಕಡಿಮೆಯಾಗುತ್ತಿದೆ ಹಾಗೂ ಕ್ರಮೇಣ ಅದು ಇಲ್ಲವಾಗಬಹುದು’’ ಎಂದು ಕೂಡಾ ಹೇಳಿದರು. ಆದರೆ ಅವರ ಇಡೀ ಒಂದು ಗಂಟೆ ಭಾಷಣದಲ್ಲಿ ಅವರು ಎಲ್ಲೂ ಮುಸ್ಲಿಮರನ್ನು ಈ ದೇಶದಲ್ಲಿ ಅತಂತ್ರರನ್ನಾಗಿಸುವ ಉದ್ದೇಶದಿಂದಲೇ ಜಾರಿಗೆ ತರುತ್ತಿರುವ ಎನ್‌ಆರ್‌ಸಿ ಮತ್ತು ಸಿಟಿಜನ್‌ಶಿಪ್ ಅಮೆಂಡ್‌ಮೆಂಟ್ ಬಿಲ್‌ಗಳ ಬಗ್ಗೆ ಒಂದು ಮಾತನ್ನೂ ಆಡದೆ, ಮುಸ್ಲಿಮರ ಬಗ್ಗೆ ಸಂಘದ ಅಸಲಿ ಅಜೆಂಡಾವನ್ನು ಸ್ಪಷ್ಟಗೊಳಿಸಿದರು. ಮುಂದುವರಿದು, ‘‘ಈ ದೇಶವು ಶಕ್ತಿಶಾಲಿಯಾಗಬೇಕು. ಆರ್ಥಾತ್ ಹುಲಿಯಾಗಬೇಕೇ ವಿನಾ ಕುರಿಯಾಗಬಾರದು’’ ಎಂದು ಹೇಳಿದ ಭಾಗವತರು ‘‘ಶಕ್ತಿಯು ಶೀಲ ಮತ್ತು ಕರುಣೆಯೊಂದಿಗೆ ಕೂಡಿರಬೇಕು’’ ಎಂಬ ಬುದ್ಧ ಹಾಗೂ ಅಂಬೇಡ್ಕರರ ಮಾತನ್ನು ಅದಕ್ಕೆ ಹೊಲಿದರು. ಆದರೆ ಅದೇ ಸಮಯದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ದೇಶಾದ್ಯಂತ ಬಲಿಷ್ಠ ಹಿಂದುತ್ವವಾದಿಗಳು ಯಾವುದೇ ‘ಶೀಲ ಅಥವಾ ಕರುಣೆಯಿಲ್ಲದೆ’ ದುರ್ಬಲರ ಮೇಲೆ ನಡೆಸುತ್ತಿರುವ ಲಿಂಚಿಂಗ್ ಕೊಲೆಗಡುಕತನವನ್ನು ಮಾತ್ರ ಅತ್ಯಂತ ನಾಜೂಕಾಗಿ ಸಮರ್ಥಿಸಿಕೊಂಡುಬಿಟ್ಟರು. ‘‘ಲಿಂಚಿಂಗ್ ಎನ್ನುವುದು ನಮ್ಮ ದೇಶದ ಪದವೇ ಅಲ್ಲ. ಆದ್ದರಿಂದ ಅದು ನಮ್ಮ ದೇಶದಲ್ಲಿ ನಡೆದಿರಲು, ನಡೆಯುತ್ತಿರಲು ಮತ್ತು ಮುಂದೆಯೂ ನಡೆಯಲು ಸಾಧ್ಯವಿಲ್ಲ’’ವೆಂದು ಭಾಗವತರು ಲಿಂಚಿಂಗ್ ಅನ್ನು ಅತ್ಯಂತ ಕ್ರೂರವಾಗಿ ಸಮರ್ಥಿಸಿಕೊಂಡರು ಮತ್ತು ಆ ಮೂಲಕ ತಬ್ರೇಝ್ ಅನ್ಸಾರಿ, ಪೆಹ್ಲೂ ಖಾನ್, ಅಖ್ಲಾಕ್, ಸುಭೋಧ್ ಸಿಂಗ್, ರಾಠೋಡರನ್ನು ಭಾಗವತರು ಮತ್ತೊಮ್ಮೆ ಬಹಿರಂಗವಾಗಿ ಲಿಂಚಿಂಗ್ ಮಾಡಿಬಿಟ್ಟರು. ಅಷ್ಟು ಮಾತ್ರವಲ್ಲ. ಕೀಳ್ವೇಲ್ಮಣಿಯಿಂದ ಹಿಡಿದು ಬೆಲ್ಚಿ, ಪಿಪ್ರಾ, ಕರಂಚೇಡು, ಕಂಬಾಲಪಲ್ಲಿ, ಖೈರ್ಲಾಂಜಿಗಳಿಂದ ಹಿಡಿದು ಮೊನ್ನೆ ಬಹಿರ್ದೆಸೆಗೆ ಕೂತಿದ್ದ ಇಬ್ಬರು ದಲಿತ ಬಾಲಕರನ್ನು ಬಡಿದು ಕೊಂದ ಲಿಂಚಿಂಗ್‌ಗಳ ಇತಿಹಾಸದ ಮೇಲೆ ಮನುವಾದಿ ಹೊದಿಕೆಯನ್ನು ಹೊದಿಸಿಬಿಟ್ಟರು. ಅಲ್ಲದೆ ಲಿಂಚಿಂಗ್ ಘಟನೆಗಳು ಎರಡೂ ಕಡೆಯಿಂದಲೂ ನಡೆಯುತ್ತದೆ ಹಾಗೂ ಮಾಧ್ಯಮಗಳು ಸುಳ್ಳುಗಳನ್ನು ಬೆರೆಸುತ್ತವೆ ಎಂದು ಕೂಡಾ ಲಜ್ಜೆಗೇಡಿ ಸಮರ್ಥನೆ ಮಾಡಿಕೊಂಡರು.

ಇದರ ಜೊತೆಗೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ತೀವ್ರ ವಿಷಾದವನ್ನು ವ್ಯಕ್ತಪಡಿಸಿದ ಭಾಗವತರು ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಮಹಿಳೆಯರಿಗೆ ‘ರಕ್ಷಣೆ’ಯನ್ನೂ ಮತ್ತು ಸಮಾಜದಲ್ಲಿ ತಮ್ಮ ಪಾತ್ರವನ್ನು ನಿಭಾಯಿಸಲು ‘ಉತ್ತೇಜನವನ್ನು’ ನೀಡಬೇಕೆಂದೂ ಸಹ ಮಾತನಾಡಿದ್ದಾರೆ. ಆದರೆ ಇದೇ ಭಾಗವತರೇ ತಿಂಗಳ ಹಿಂದೆ ‘‘ಭಾರತೀಯ ಮಹಿಳೆಯರ ಪ್ರಧಾನ ಪಾತ್ರ ಉತ್ತಮ ಕುಟುಂಬದಲ್ಲಿ’’ ಎಂದು ಪ್ರತಿಪಾದಿಸಿದ್ದರು ಎಂಬುದು ನೆನಪಿನಲ್ಲಿದ್ದರೆ ಭಾಗವತರ ಈ ಹೊಸ ವರಸೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಕುಟುಂಬದಲ್ಲಿ ಸೂಕ್ತವಾದ ಮತ್ತು ಸಮವಾದ ಪಾತ್ರ ಕೊಡಬೇಕಾದವರೂ ಮೊದಲು ತಮ್ಮ ಪರಿವಾರದಲ್ಲಿ ಕೊಡಬೇಕಲ್ಲವೇ? ಮಹಿಳೆಯರಿಗೆ ಸಂಘದಲ್ಲಿ ಪಾತ್ರ ಕೊಡಲು ಸಾಧ್ಯವಿಲ್ಲ ಎಂಬ ಪುರುಷ ಶ್ರೇಷ್ಠ ತಿಳುವಳಿಕೆಯ ಹಿನ್ನೆಲೆಯಲ್ಲೇ ‘ರಾಷ್ಟ್ರೀಯ ಸೇವಿಕಾ ಸಮಿತಿ’ಯನ್ನು ಸ್ಥಾಪಿಸಲಾಯಿತಲ್ಲವೇ? ಭಾಗವತರ ಭಾಷಣದಲ್ಲಿ ಆರೆಸ್ಸೆಸ್ಸಿನೊಳಗೆ ಮಹಿಳೆಯರಿಗೆ ಸರಿಯಾದ ಅಥವಾ ಸರಿಸಮವಾದ ಪಾತ್ರ ಕೊಡುವುದರ ಬಗ್ಗೆ ಇರಲಿ ಸೇರಿಸಿಕೊಳ್ಳುವ ಮಾತೂ ಸಹ ಇರಲಿಲ್ಲ!

ಇದನ್ನು ಹೇಳುತ್ತಿರುವ ಆರೆಸ್ಸೆಸ್ ಅಥವಾ ಭಾಗವತರ ಬಗ್ಗೆ ಆಶ್ಚರ್ಯಪಡುವಂಥದ್ದೇನೂ ಇಲ್ಲ, ಆದರೆ ‘ಆರೆಸ್ಸೆಸ್ ಒಳಗೊಳ್ಳುವ’ ನೀತಿಯನ್ನು ಅನುಸರಿಸುವ ಕಡೆಗೆ ಮುಂದಾಗಿದೆ ಎಂದು ನಂಬಲು ಹಾತೊರೆಯುತ್ತಿರುವ ಬುದ್ಧಿಜೀವಿಗಳ ಬಗ್ಗೆ ಮಾತ್ರ ಸಖೇದಾಶ್ಚರ್ಯವಾಗುತ್ತದೆ. ದೇಶದ ಸಾಮಾಜಿಕ ಸಾಮರಸ್ಯ, ವಿವಿಧತೆಗಳಲ್ಲಿ ಏಕತೆ ಇತ್ಯಾದಿಗಳನ್ನು ಹೇಳುತ್ತಲೇ ಏಕರೂಪತೆ ಮತ್ತು ಹಿಂದೂ ಶ್ರೇಷ್ಠತೆಯನ್ನು ಅವುಗಳಿಗೆ ಬೆಸೆದಿರುವುದು ಕಾಣದಿದ್ದರೆ ಅದಕ್ಕೆ ಭಾಗವತರ ಭಾಷಾ ಕೌಶಲ್ಯಕ್ಕಿಂತ ಕೇಳುಗರು ಹೇರಿಕೊಂಡಿರುವ ಜಾಣ ಕಿವುಡಗಳೇ ಕಾರಣ. ಸ್ವದೇಶಿ ನಾಟಕಕ್ಕೆ ತೆರೆ:

  ಭಾಗವತರ ಈ ವಿಜಯದಶಮಿ ಭಾಷಣದಲ್ಲಿ ಹೊಸದೇನಾದರೂ ಇದ್ದರೆ ಅದು ಈವರೆಗೆ ಆರೆಸ್ಸೆಸ್ ಹಾಗೂ ಬಿಜೆಪಿ ಆಡಿಕೊಂಡು ಬಂದಿರುವ ಸ್ವದೇಶಿ ನಾಟಕಕ್ಕೆ ತೆರೆ ಬಿದ್ದಿರುವುದು. ತಮ್ಮ ಭಾಷಣದಲ್ಲಿ ಭಾಗವತರು ಸ್ವದೇಶಿ ಎಂದರೆ ಜಾಗತೀಕರಣದ ವಿರೋಧಿಯಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಹಾಗೂ ಅಂತರ್‌ರಾಷ್ಟ್ರೀಯ ವಾಣಿಜ್ಯ ಮತ್ತು ಆರ್ಥಿಕತೆಯ ಅಭಿವೃದ್ಧಿಗೆ ವಿದೇಶಿ ಬಂಡವಾಳ ಅಗತ್ಯವಿದೆ ಎಂದು ಘೋಷಿಸಿದ್ದಾರೆ. ಅದರೆ ಅದರಲ್ಲಿ ಚೀನಾದಂತಹ ದೇಶಗಳು ಪರೋಕ್ಷವಾಗಿ ನಮ್ಮ ದೇಶದ ಕಂಪೆನಿಗಳಲ್ಲಿ ಮೇಲುಗೈ ಸಾಧಿಸದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ. ಆದರೆ ಈಗಾಗಲೇ ಭಾರತದ ಕಲ್ಲಿದ್ದಲಿನಂತಹ ಕೀಲಕ ಸಾರ್ವಜನಿಕ ಕ್ಷೇತ್ರಗಳಲ್ಲಿ ಮತ್ತು ಬಡಮಧ್ಯಮ ವರ್ಗವೇ ಹೆಚ್ಚಿರುವ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲೂ ಶೇ.100ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಮೋದಿ ಸರಕಾರ ಅವಕಾಶ ಕೊಟ್ಟಿರುವುದರ ಬಗ್ಗೆ ಭಾಗವತರು ಚಕಾರವೆತ್ತಿಲ್ಲ. ಏಕೆಂದರೆ ಆ ಕ್ಷೇತ್ರಗಳಲ್ಲಿ ಚೀನಾಗಿಂತ ಪಾಶ್ಚಿಮಾತ್ಯ ದೇಶಗಳ ಅದರಲ್ಲೂ ವಿಶೇಷವಾಗಿ ಅಮೆರಿಕದ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆಯಿದ್ದು ಅದಕ್ಕೆ ಆರೆಸ್ಸೆಸ್‌ನ ಆಕ್ಷೇಪಣೆ ಈ ಹಿಂದೆಯೂ ಇರಲಿಲ್ಲ. ಹಾಗೆ ನೋಡಿದರೆ ಮೊದಲಿಂದಲೂ ಆರೆಸ್ಸೆಸ್‌ನ ಮತ್ತು ಅದರ ಶಾಖೆಯಾದ ಸ್ವದೇಶಿ ಜಾಗರಣ್ ಮಂಚ್‌ನ ಸ್ವದೇಶಿ ಅಭಿಯಾನ ಅಥವಾ ವಿದೇಶಿ ವಿರೋಧ ಮತ್ತು ಅದರ ‘ಬಂಡವಾಳಶಾಹಿ ಅಥವಾ ಕಮ್ಯೂನಿಸಂ’ ಎರಡರಿಂದಲೂ ದೂರವಿರುವ ‘ಮೂರನೇ ಸಮಗ್ರ ಸಾಮರಸ್ಯದ’ ಹಿಂದೂ ಮಾದರಿಯೂ ಅಪಾರ ಹಿಪಾಕ್ರಸಿಯಿಂದ ಕೂಡಿದೆ. ಭಾಗವತರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಬಿಜೆಪಿಯ ನಾಯಕರಾದ ದತ್ತೋಪಂತ ತೇಂಗಡಿಯವರು ಈ ಬಗೆಯ ಹಿಪಾಕ್ರಟಿಕ್ ಸ್ವದೇಶಿ ತತ್ವದ ಜನಕರು. ಅವರ ಶತಮಾನೋತ್ಸವವನ್ನೂ ಸಹ ಆರೆಸ್ಸೆಸ್ ಈ ವರ್ಷ ಆಚರಿಸಲಿದೆ. ಪ್ರಾರಂಭದಲ್ಲಿ ಆರೆಸ್ಸೆಸ್ ಹಾಗೂ ಬಿಜೆಪಿ ಮತ್ತು ಅದರ ಈ ಹಿಂದಿನ ಅವತಾರವಾದ ಭಾರತೀಯ ಜನ ಸಂಘದ ಬೆಂಬಲಿಗರು ಮೇಲ್ಜಾತಿ ಉದ್ಯೋಗಿಗಳು ಹಾಗೂ ಮೇಲ್ಜಾತಿಗೆ ಸೇರಿದ ಸಣ್ಣ ಹಾಗೂ ಮಧ್ಯಮ ವರ್ತಕ ವರ್ಗವೇ ಆಗಿತ್ತು. ಇದರ ಜೊತೆಗೆ 1990ರವರೆಗೆ ಉತ್ತರ ಭಾರತದ ಮೇಲ್ಜಾತಿ ಭೂಮಾಲಕರೂ ಸಹ ಸೈದ್ಧಾಂತಿಕವಾಗಿ ಬಿಜೆಪಿ ಜೊತೆಗೂ ರಾಜಕೀಯವಾಗಿ ಕಾಂಗ್ರೆಸ್ ಮತ್ತು ಆಗಾಗ ಬಿಜೆಪಿಯ ಜೊತೆ ಕೈಗೂಡಿಸುತ್ತಿದ್ದರು. ಹೀಗಾಗಿ ಬಿಜೆಪಿ ಮತ್ತು ಆರೆಸ್ಸೆಸ್ ಪ್ರಧಾನವಾಗಿ ಆ ಶಕ್ತಿಗಳ ಆಸಕ್ತಿಗಾಗಿ ಹೋರಾಡುತ್ತಿದ್ದರೂ ದೇಶದ ದೊಡ್ಡ ಬಂಡವಾಳಶಾಹಿ ಶಕ್ತಿಗಳನ್ನು ಆಗಲೂ ವಿರೋಧಿಸುತ್ತಿರಲಿಲ್ಲ.

ಆದರೆ 1990ರ ನಂತರ ಕಾಂಗ್ರೆಸ್ ಪಕ್ಷವು ಜಾಗತೀಕರಣ ನೀತಿಯನ್ನು ಆಕ್ರಮಣಕಾರಿಯಾಗಿ ಪ್ರಾರಂಭಿಸಿದಾಗ ಭಾರತದ ದೊಡ್ಡ ಬಂಡವಾಳಶಾಹಿಗಳ ಒಂದು ಸಣ್ಣ ವರ್ಗ ಜಾಗತೀಕರಣದ ರೀತಿ ಮತ್ತು ಗತಿಗಳು ತಮಗೆ ಪೂರಕವಾಗಿರುವಂತೆ ನಿಬಂಧನೆಗಳನ್ನು ಹಾಕುವುದು ಉತ್ತಮ ಎಂದು ಕ್ಷೀಣ ಧ್ವನಿಯಲ್ಲಿ ಹೇಳುತ್ತಿತ್ತು. ಬಿಜೆಪಿಯು ಕಾಂಗ್ರೆಸ್‌ನ ವಿರುದ್ಧವಾಗಿ ತಾನು ಆ ವರ್ಗದ ಧ್ವನಿಯಾಗಬಯಸಿತು. ಅದಕ್ಕಾಗಿ 1992ರಲ್ಲಿ ‘ಸ್ವದೇಶಿ ಜಾಗರಣ್ ಮಂಚ್’ ಅನ್ನೂ ಸ್ಥಾಪಿಸಿತು. ಆದರೆ ಅದು ಎಂದೂ ಜಾಗತೀಕರಣದ ವಿರುದ್ಧವಾಗಲೀ ಅಥವಾ ಖಾಸಗೀಕರಣದ ವಿರುದ್ಧವಾಗಲೀ ದೊಡ್ಡ ಧ್ವನಿಯನ್ನೇನೂ ಎತ್ತಲಿಲ್ಲ. 1991ರ ನಂತರದ ರಾಜಕಾರಣದಲ್ಲಿ ಬಿಜೆಪಿಯು ತನ್ನ ದ್ವೇಷಪೂರಿತ ಹಿಂದೂ ಕೋಮುವಾದಿ ರಾಜಕಾರಣದ ಮೂಲಕ ದೊಡ್ಡ ಜನಬೆಂಬಲವುಳ್ಳ ಪಕ್ಷವಾಗಿ ಹೊರಹೊಮ್ಮುತ್ತಿದ್ದಂತೆ ಭಾರತದ ದೊಡ್ಡ ಬಂಡವಾಳಶಾಹಿ ವರ್ಗವೂ ಸಹ ಕಾಂಗ್ರೆಸ್‌ಗಿಂತ ಬಿಜೆಪಿಯ ಮೇಲೆಯೇ ಮೇಲೆ ಹೆಚ್ಚು ವಿಶ್ವಾಸವಿಡತೊಡಗಿತು.

ಅದರ ಪರಿಣಾಮವಾಗಿ ವಿದೇಶಿ ಬಂಡವಾಳದ ಬಗ್ಗೆ ಬಿಜೆಪಿಯ ಹಾಗೂ ಆರೆಸ್ಸೆಸ್‌ನ ಅಧಿಕೃತ ನಿಲುವುಗಳೂ ಬದಲಾಗತೊಡಗಿತು. ಇದಕ್ಕೆ ನಿಚ್ಚಳವಾದ ಉದಾಹರಣೆಯೆಂದರೆ ಎನ್ರಾನ್ ಪ್ರಕರಣ. 1992ರಲ್ಲಿ ಸ್ಥಾಪನೆಯಾದ ‘ಸ್ವದೇಶಿ ಜಾಗರಣ್ ಮಂಚ್’ ಇದ್ದಿದ್ದರಲ್ಲಿ ದೊಡ್ಡ ಸದ್ದು ಮಾಡಿದ್ದೇ ಮಹಾರಾಷ್ಟ್ರದಲ್ಲಿ ಅಮೆರಿಕದ ಎನ್ರಾನ್ ವಿದ್ಯುತ್ ಸಂಸ್ಥೆಗೆ ಸರಕಾರಗಳು ಕೊಟ್ಟ ಅನುಮತಿ ಮತ್ತು ರಿಯಾಯತಿಗಳ ಬಗ್ಗೆ.

ಆದರೆ 1996ರಲ್ಲಿ 13 ದಿನಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿ ನೇತೃತ್ವದ ವಾಜಪೇಯಿ ಸರಕಾರ ರಾಜೀನಾಮೆ ಕೊಡುವ ಗಂಟೆಗಳ ಮುನ್ನ ಎನ್ರಾನ್ ಕಂಪೆನಿಯ ಎಲ್ಲಾ ಅವಮಾನಕಾರಿ ಶರತ್ತುಗಳಿಗೂ ಒಪ್ಪಿಗೆ ನೀಡಿತ್ತು. ಆದರೆ ಅದರ ವಿರುದ್ಧ ಸ್ವದೇಶಿ ಮಂಚ್ ಯಾವುದೇ ವಿರೋಧವನ್ನು ವ್ಯಕ್ತಪಡಿಸಲಿಲ್ಲ.

 2002ರ ನಂತರದಲ್ಲಂತೂ ಗುಜರಾತಿನಲ್ಲಿ ಮೋದಿ ಸರಕಾರ ಒಂದು ಕಡೆ ಸಂಪೂರ್ಣವಾಗಿ ವಿದೇಶಿ ಬಂಡವಾಳದ ಪರವಾದ ಹಾಗೂ ದೊಡ್ಡ ಬಂಡವಾಳಿಗರ ಪರವಾದ ಆರ್ಥಿಕ ನೀತಿಗಳನ್ನು ಮತ್ತೊಂದು ಕಡೆ ಅತ್ಯಂತ ಆಕ್ರಮಣಕಾರಿ ಹಿಂದುತ್ವವಾದಿ ಸಾಮಾಜಿಕ ನೀತಿಯನ್ನೂ ಏಕಕಾಲದಲ್ಲಿ ಜಾರಿಗೆ ತಂದ ‘ಗುಜರಾತ್ ಮಾದರಿ’ಯನ್ನು ದೇಶಕ್ಕೆ ಪರಿಚಯಿಸಿತು.

ಪ್ರಾಯಶಃ ಈ ಭಾರತೀಯ ಫ್ಯಾಶಿಸ್ಟ್ ಮಾದರಿಯೇ ಇಡೀ ಭಾರತದ ಭವಿಷ್ಯದ ನಡೆಯಾಯಿತು. ಮೋದಿ ಆಡಳಿತಕ್ಕೆ ಪ್ರಾರಂಭದಲ್ಲಿ ಸ್ವದೇಶಿ ಜಾಗರಣ್ ಮಂಚ್ ವಿರೋಧವನ್ನು ವ್ಯಕ್ತಪಡಿಸಿದರೂ ಭಾರತದ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಆರೆಸ್ಸೆಸ್‌ನ ಅಂಗಸಂಸ್ಥೆಗಳ ಅತ್ಯಂತ ಉಗ್ರ ಹಿಂದುತ್ವವಾದಿ ವರ್ಗಗಳು ಮೋದಿಯನ್ನು ಬೆಂಬಲಿಸಿ 2007ರಲ್ಲಿ ಎರಡನೇ ಬಾರಿ ಮೋದಿಯನ್ನು ಗುಜರಾತಿನ ಮುಖ್ಯಮಂತ್ರಿಯನ್ನಾಗಿ ಮಾಡಿದರು. 2010ರಲ್ಲಿ ಹಾಲಿ ಸರಸಂಘಚಾಲಕರಾದ ಮೋಹನ್ ಭಾಗವತರು ಅಧಿಕಾರ ಸ್ವೀಕರಿಸಿದ ಮೇಲೆ ಭಾರತದಲ್ಲಿ ಬಂಡವಾಳ ಹೂಡಲು ಆಸಕ್ತಿ ಹೊಂದಿರುವ ಬಹುರಾಷ್ಟ್ರೀಯ ಕಂಪೆನಿಗಳು, ಅವರಿಗೆ ಪೂರಕವಾಗಿರುವ ಈ ದೇಶದ ದೊಡ್ಡ ಕಾರ್ಪೊರೇಟ್ ಬಂಡವಾಳಶಾಹಿ ವರ್ಗ ಹಾಗೂ ಬಿಜೆಪಿ ಮತ್ತು ಆರೆಸ್ಸೆಸ್ ನಡುವೆ ಎಲ್ಲಾ ವೈರುಧ್ಯಗಳು ಬಗೆಹರಿದು ಅತ್ಯಂತ ಸುಮಧುರ ಬಾಂಧವ್ಯ ರೂಪುಗೊಂಡಿದೆ.

ಆದ್ದರಿಂದಲೇ 2002ರಲ್ಲಿ ಗುಜರಾತ್ ಹತ್ಯಾಕಾಂಡ ನಡೆದಾಗ ಭಾರತದ ಕಾರ್ಪೊರೇಟ್ ಲೋಕವೂ (ವಿಶೇಷವಾಗಿ ಅನು ಆಗಾ, ದೀಪಕ್ ಪರೇಖ್, ಅಜೀಂ ಪ್ರೇಂಜಿ, ರತನ್ ಟಾಟಾ ಇನ್ನಿತರರು) ಮೋದಿಯನ್ನು ಖಂಡಿಸಿದ್ದರೂ 2013ರಲ್ಲಿ ಕೆಲವರನ್ನು ಹೊರತುಪಡಿಸಿ ಇಡೀ ಕಾರ್ಪೊರೇಟ್ ಲೋಕವೇ ಮೋದಿಯನ್ನು ಅತ್ಯುತ್ತಮ ಪ್ರಧಾನಿ ಅಭ್ಯರ್ಥಿ ಎಂದು ಬಹಿರಂಗವಾಗಿಯೇ ಘೋಷಿಸಿತು. ಅದೇ ರೀತಿ ಮೋದಿಯವರನ್ನು ಇಡೀ ಆರೆಸ್ಸೆಸ್ ಪರಿವಾರ ಸರ್ವ ಸಮ್ಮತ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿತು. ಸಹಜವಾಗಿಯೇ ಅಲ್ಲಿಂದಾಚೆಗೆ ‘ಸ್ವದೇಶಿ ಜಾಗರಣ’ದ ಅಭಿಯಾನಗಳು ಕಡಿಮೆಯಾಗುತ್ತಾ, ಭಾಗವತರ ವಿಜಯದಶಮಿ ಭಾಷಣದೊಂದಿಗೆ ಸಂಘಪರಿವಾರದ ‘ಸ್ವದೇಶಿ’ ನಾಟಕಕ್ಕೆ ಅಂತಿಮ ತೆರೆಯನ್ನು ಎಳೆಯಲಾಗಿದೆ. ಹೀಗೆ ಒಟ್ಟಾರೆಯಾಗಿ ಭಾಗವತರ ವಿಜಯದಶಮಿ ಭಾಷಣ ಭಾರತದ ನವ ಉದಾರವಾದಿ ಹಿಂದುತ್ವದ ಅರ್ಥಾತ್ ಭಾರತದ ಫ್ಯಾಶಿಸಂನ ವಿಕಾಸದ ಇಂದಿನ ಸ್ವರೂಪವನ್ನು ಸಷ್ಟವಾಗಿ ತೆರೆದಿಟ್ಟಿದೆ.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News