ವಿಶ್ವಸಂಸ್ಥೆಯ ಎಲ್ಲ ದೇಣಿಗೆಗಳನ್ನು ಭಾರತ ಪಾವತಿಸಿದೆ: ಭಾರತೀಯ ನಿಯೋಗದ ಮುಖ್ಯಸ್ಥ

Update: 2019-10-12 16:38 GMT

ವಿಶ್ವಸಂಸ್ಥೆ, ಅ. 12: ವಿಶ್ವಸಂಸ್ಥೆಗೆ ನೀಡಬೇಕಾಗಿರುವ ಎಲ್ಲ ದೇಣಿಗೆಗಳನ್ನು ಭಾರತ ಪಾವತಿಸಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತೀಯ ನಿಯೋಗದ ಮುಖ್ಯಸ್ಥ ಸೈಯದ್ ಅಕ್ಬರುದ್ದೀನ್ ಶುಕ್ರವಾರ ಹೇಳಿದ್ದಾರೆ. ಅದೇ ವೇಳೆ, 193 ಸದಸ್ಯ ದೇಶಗಳ ಪೈಕಿ, ಕೇವಲ 35 ದೇಶಗಳು ತಮ್ಮ ದೇಣಿಗೆಗಳನ್ನು ಪಾವತಿಸಿವೆ ಎಂಬುದಾಗಿಯೂ ಅವರು ಹೇಳಿದ್ದಾರೆ.

ವಿಶ್ವಸಂಸ್ಥೆಯ ದೇಣಿಗೆಗಳನ್ನು ಪೂರ್ಣವಾಗಿ ಪಾವತಿಸಿರುವ ದೇಶಗಳ ಪಟ್ಟಿಯೊಂದನ್ನೂ ಅವರು ಟ್ವೀಟ್ ಮಾಡಿದ್ದಾರೆ. ‘‘ನಮ್ಮ ದೇಣಿಗೆಯನ್ನು ನಾವು ಸಂಪೂರ್ಣವಾಗಿ ಪಾವತಿಸಿದ್ದೇವೆ. ಇಂದಿನ ಮಟ್ಟಿಗೆ 193 ದೇಶಗಳ ಪೈಕಿ ಕೇವಲ 35 ದೇಶಗಳು

ವಿಶ್ವಸಂಸ್ಥೆಗೆ ನೀಡಬೇಕಾಗಿರುವ ದೇಣಿಗೆಗಳನ್ನು ಸಂಪೂರ್ಣವಾಗಿ ಪಾವತಿಸಿವೆ’’ ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಹತ್ತು ವರ್ಷಗಳಲ್ಲೇ ಅತ್ಯಂತ ತೀವ್ರ ಆರ್ಥಿಕ ಬಿಕ್ಕಟ್ಟನ್ನು ವಿಶ್ವಸಂಸ್ಥೆ ಎದುರಿಸುತ್ತಿದೆ ಎಂದು ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಮಂಗಳವಾರ ಎಚ್ಚರಿಸಿದ್ದರು.

ವಿಶ್ವಸಂಸ್ಥೆಯ ಹಣ ಮತ್ತು ಮೀಸಲು ನಿಧಿಯು ತಿಂಗಳ ಕೊನೆಯ ವೇಳೆಗೆ ಖಾಲಿಯಾಗುವ ಅಪಾಯವಿದೆ ಹಾಗೂ ಸಿಬ್ಬಂದಿಗೆ ವೇತನ ಪಾವತಿ ಮತ್ತು ಸರಕುಗಳ ಪೂರೈಕೆದಾರರಿಗೆ ಹಣ ಪಾವತಿ ಮಾಡಲು ಅಸಾಧ್ಯವಾಗುವ ಪರಿಸ್ಥಿತಿಯೊಂದನ್ನು ವಿಶ್ವಸಂಸ್ಥೆ ಎದುರಿಸುತ್ತಿದೆ ಎಂದು ಗುಟೆರಸ್ ಎಚ್ಚರಿಸಿದ್ದರು.

ಈ ಬಾರಿಯ ಬಜೆಟ್‌ನಲ್ಲಿ 9,950 ಕೋಟಿ ರೂ. ಕೊರತೆ

 ಸೆಪ್ಟಂಬರ್ ಕೊನೆಯ ವೇಳೆಗೆ ವಿಶ್ವಸಂಸ್ಥೆಯು 230 ಮಿಲಿಯ ಡಾಲರ್ (ಸುಮಾರು 1,634 ಕೋಟಿ ರೂಪಾಯಿ) ಕೊರತೆಯನ್ನು ಎದುರಿಸಿದೆ ಎಂದು ವಿಶ್ವಸಂಸ್ಥೆಯ ಕಾರ್ಯಾಲಯದಲ್ಲಿರುವ 37,000ಕ್ಕೂ ಅಧಿಕ ಉದ್ಯೋಗಿಗಳಿಗೆ ಸೋಮವಾರ ಬರೆದ ಪತ್ರವೊಂದರಲ್ಲಿ ಗುಟೆರಸ್ ಹೇಳಿದ್ದರು ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ವರ್ಷದ ಕಾರ್ಯನಿರ್ವಹಣಾ ಬಜೆಟ್‌ನಲ್ಲಿ ವಿಶ್ವಸಂಸ್ಥೆಯು 1.4 ಬಿಲಿಯ ಡಾಲರ್ (ಸುಮಾರು 9,950 ಕೋಟಿ ರೂಪಾಯಿ) ಕೊರತೆ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಸುಮಾರು 60 ಸದಸ್ಯ ದೇಶಗಳು ತಮ್ಮ ದೇಣಿಗೆಗಳನ್ನು ವಿಳಂಬವಾಗಿ ಪಾವತಿಸುತ್ತಿರುವುದು ಈ ಪರಿಸ್ಥಿತಿಗೆ ಕಾರಣ ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News