ಭಾರತದ ‘ಆ್ಯನಿಮೇಷನ್ ಪಿತಾಮಹ’ ರಾಮಮೋಹನ್ ನಿಧನ

Update: 2019-10-12 17:27 GMT

 ಹೊಸದಿಲ್ಲಿ, ಅ.12: ಹಲವು ಚಲನಚಿತ್ರಗಳಿಗೆ ಆ್ಯನಿಮೇಷನ್ ಪ್ರಸಂಗಗಳನ್ನು ರೂಪಿಸಿರುವ ಭಾರತದ ಆ್ಯನಿಮೇಷನ್ ಪಿತಾಮಹ ಎಂದೇ ಹೆಸರಾಗಿರುವ ರಾಮಮೋಹನ್ 88ನೇ ವಯಸ್ಸಿನಲ್ಲಿ ನಿಧನರಾದರು. 2014ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

1956ರಲ್ಲಿ ಸರಕಾರದ ಚಲನಚಿತ್ರ ವಿಭಾಗದ ಕಾರ್ಟೂನ್ ಫಿಲ್ಮ್ ಘಟಕದಲ್ಲಿ ತನ್ನ ವೃತ್ತಿ ಜೀವನ ಆರಂಭಿಸಿದ ರಾಮಮೋಹನ್ 1968ರಲ್ಲಿ ಚಲನಚಿತ್ರ ವಿಭಾಗದ ಕೆಲಸಕ್ಕೆ ರಾಜೀನಾಮೆ ನೀಡಿ ಪ್ರಸಾದ್ ಪ್ರೊಡಕ್ಷನ್ಸ್‌ನ ಆ್ಯನಿಮೇಷನ್ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡರು. 1972ರಲ್ಲಿ ಸ್ವಂತ ನಿರ್ಮಾಣ ಸಂಸ್ಥೆ ‘ರಾಮಮೋಹನ್ ಬಯೊಗ್ರಫಿಕ್ಸ್’ ಸ್ಥಾಪಿಸಿದರು. ಈ ಸಂಸ್ಥೆಯ ಮೂಲಕ ‘ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ’ ಎಂಬ ಆ್ಯನಿಮೇಷನ್ ಸಿನೆಮಾ ನಿರ್ಮಿಸಿ 1992ರಲ್ಲಿ ಬಿಡುಗಡೆಗೊಳಿಸಿದರು. ಹಲವು ಜಾಹೀರಾತುಗಳಿಗೆ ತಮ್ಮ ಸಂಸ್ಥೆಯ ಮೂಲಕ ಆ್ಯನಿಮೇಷನ್ ಕಾರ್ಯ ನಿರ್ವಹಿಸಿದ್ದರು.

    ಬಿಆರ್ ಚೋಪ್ರಾರ ಸಿನೆಮ ‘ಪತಿ ಪತ್ನಿ ಔರ್ ವೋ’ನಲ್ಲಿ ಆ್ಯನಿಮೇಷನ್ ಹಾಡು, ಸತ್ಯಜಿತ್ ರೇಯವರ ಸಿನೆಮ ‘ಶತ್ರಂಜ್ ಕೆ ಕಿಲಾಡಿ’ಗೆ ಶೀರ್ಷಿಕೆ ಗೀತೆ, ಮೃಣಾಲ್ ಸೇನ್‌ರ ಹಿಂದಿ ಸಿನೆಮ ‘ಭುವನ್ ಶೋಮ್’ಗೆ ಆ್ಯನಿಮೇಷನ್ ಅನುಕ್ರಮ ರಚಿಸಿದ್ದರು. 1995ರಲ್ಲಿ ಮುಂಬೈಯಲ್ಲಿ ಆರಂಭವಾದ ‘ಗ್ರಾಫಿಟಿ ಮಲ್ಟಿಮೀಡಿಯಾ’ ಆ್ಯನಿಮೇಷನ್ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಸೃಜನಶೀಲ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. 2006ರಲ್ಲಿ ಗ್ರಾಫಿಟಿ ಸ್ಕೂಲ್ ಆಫ್ ಆ್ಯನಿಮೇಷನ್ ಆರಂಭಿಸಿದ್ದರು. ರಾಮಮೋಹನ್ ನಿಧನಕ್ಕೆ ಭಾರತೀಯ ಆ್ಯನಿಮೇಷನ್ ಉದ್ಯಮ ತೀವ್ರ ಸಂತಾಪ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News