ನ.8ರಂದು ಪ್ರಧಾನಿಯಿಂದ ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆ: ಕೌರ್

Update: 2019-10-12 17:35 GMT

ಹೊಸದಿಲ್ಲಿ, ಅ.12: ಕರ್ತಾರ್‌ಪುರ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8ರಂದು ಉದ್ಘಾಟಿಸಲಿದ್ದಾರೆ ಎಂದು ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಶನಿವಾರ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದಲ್ಲಿರುವ ಸಿಖ್ಖರ ಯಾತ್ರಾಸ್ಥಳ ಕರ್ತಾರ್‌ಪುರ್ ಸಾಹಿಬ್ ಮತ್ತು ಪಂಜಾಬ್‌ನಲ್ಲಿರುವ ಗುರ್ದಾಸ್‌ಪುರದ ಮಧ್ಯೆ ಸಂಪರ್ಕ ಕಲ್ಪಿಸುವ ಕಾರಿಡಾರ್‌ಗೆ ಭಾರತದ ಯಾತ್ರಾರ್ಥಿಗಳು ವೀಸಾ ಇಲ್ಲದೆ ಪ್ರಯಾಣಿಸಬಹುದು. ಅಲ್ಲಿರುವ ಮಂದಿರವನ್ನು ಸಂದರ್ಶಿಸಲು ಅನುಮತಿ ಪತ್ರ ಹೊಂದಿದ್ದರೆ ಸಾಕಾಗುತ್ತದೆ. ಕರ್ತಾರ್‌ಪುರ ಮಂದಿರವನ್ನು ಮುಕ್ತ ಸಂದರ್ಶಿಸುವ ಅವಕಾಶ ಗುರುನಾನಕ್ ದೇವರ ಆಶೀರ್ವಾದದಿಂದ ಕಡೆಗೂ ಸಾಧ್ಯವಾಗಿದೆ.

ನವೆಂಬರ್ 8ರಂದು ಕರ್ತಾರ್‌ಪುರ ಕಾರಿಡಾರ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸುವುದರೊಂದಿಗೆ ಇತಿಹಾಸ ನಿರ್ಮಾಣವಾಗಲಿದೆ ಎಂದು ಕೌರ್ ಟ್ವೀಟ್ ಮಾಡಿದ್ದಾರೆ. ಕರ್ತಾರ್‌ಪುರ ಕಾರಿಡಾರ್ ಅನ್ನು ನವೆಂಬರ್ 9ರಂದು ಭಾರತೀಯ ಯಾತ್ರಿಗಳಿಗೆ ಮುಕ್ತವಾಗಿಸಲಾಗುತ್ತದೆ ಎಂದು ಕಳೆದ ತಿಂಗಳು ಪಾಕಿಸ್ತಾನದ ಅಧಿಕಾರಿಗಳು ಹೇಳಿಕೆ ನೀಡಿದ್ದರು. ಆದರೆ ಬಳಿಕ ಮತ್ತೊಂದು ಹೇಳಿಕೆ ನೀಡಿದ್ದ ಪಾಕ್ ಅಧಿಕಾರಿಗಳು, ಉದ್ಘಾಟನಾ ಸಮಾರಂಭದ ದಿನಾಂಕ ನಿಗದಿಯಾಗಿಲ್ಲ ಎಂದಿದ್ದರು. ನವೆಂಬರ್ 9ರಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಯಾತ್ರಾರ್ಥಿಗಳ ಪ್ರಥಮ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರು. ಅಲ್ಲದೆ ನವೆಂಬರ್ 12ರಂದು ಗುರು ನಾನಕರ 550ನೇ ಜನ್ಮದಿನಾಚರಣೆಯ ಅಂಗವಾಗಿ ಈ ತಂಡ ಸುಲ್ತಾನ್‌ಪುರ ಲೋಧಿಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಈ ತಂಡದ ಜೊತೆಗಿರುತ್ತಾರೆ. ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೂ ಆಹ್ವಾನ ನೀಡಲಾಗಿದೆ ಎಂದು ಅಮರೀಂದರ್ ಸಿಂಗ್ ಹೇಳಿದ್ದರು.

ಪಾಕಿಸ್ತಾನದಲ್ಲಿ ನಡೆಯುವ ಕಾರಿಡಾರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ತಂಡ ಪಾಲ್ಗೊಳ್ಳುವುದಿಲ್ಲ.ಮಂದಿರಕ್ಕೆ ಭೇಟಿ ನೀಡುವುದು ನಮ್ಮ ಉದ್ದೇಶವಾಗಿದೆ ಎಂದವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News