ತಾಕತ್ತಿದ್ದರೆ ವಿಧಿ 370 ಮತ್ತೆ ಮರುಸ್ಥಾಪಿಸಿ: ಪ್ರತಿಪಕ್ಷಗಳಿಗೆ ಪ್ರಧಾನಿ ಸವಾಲು

Update: 2019-10-13 16:16 GMT

ಜಳಗಾಂವ(ಮಹಾರಾಷ್ಟ್ರ),ಅ.13: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯ ರದ್ದತಿಯ ಕುರಿತು ಕಾಂಗ್ರೆಸ್ ಮತ್ತು ಎನ್‌ಸಿಪಿ ವಿರುದ್ಧ ದಾಳಿಯನ್ನು ರವಿವಾರ ತೀವ್ರಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರು,ಈ ವಿಧಿಯನ್ನು ಮತ್ತೆ ತರುವುದಾಗಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸುವಂತೆ ಅವುಗಳಿಗೆ ಸವಾಲು ಹಾಕಿದ್ದಾರೆ.

 ಅ.21ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ತನ್ನ ಮೊದಲ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ಜಮ್ಮು-ಕಾಶ್ಮೀರವು ಕೇವಲ ಒಂದು ಭೂಭಾಗವಲ್ಲ,ಅದು ಭಾರತದ ಕಿರೀಟವಾಗಿದೆ ಎಂದರು. ಕಳೆದ 40 ವರ್ಷಗಳಿಂದಲೂ ಅಲ್ಲಿದ್ದ ಸ್ಥಿತಿಯು ಸಹಜತೆಗೆ ಬರಲು ನಾಲ್ಕು ತಿಂಗಳುಗಳಿಗಿಂತ ಹೆಚ್ಚಿನ ಸಮಯ ಬೇಕಿಲ್ಲ ಎಂದು ಭರವಸೆ ನೀಡಿದರು.

ವಿಧಿ 370 ವಿಷಯವನ್ನು ಪ್ರತಿಪಕ್ಷಗಳು ರಾಜಕೀಯಗೊಳಿಸುತ್ತಿವೆ ಮತ್ತು ನಮ್ಮ ನೆರೆಯ ರಾಷ್ಟ್ರದ ಧಾಟಿಯಲ್ಲಿ ಮಾತನಾಡುತ್ತಿವೆ ಎಂದು ಪಾಕಿಸ್ತಾನವನ್ನು ಹೆಸರಿಸದೆ ಆರೋಪಿಸಿದರು.

ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರಕಾರದ ಐದು ವರ್ಷಗಳ ಸಾಧನೆಯನ್ನು ಪ್ರಶಂಸಿಸಿದ ಮೋದಿ,ಅದು ಭ್ರಷ್ಟಾಚಾರ ಮುಕ್ತವಾಗಿತ್ತು ಹಾಗೂ ರೈತರು ಮತ್ತು ಕೈಗಾರಿಕೆಗಳು ಸೇರಿದಂತೆ ಎಲ್ಲರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿತ್ತು ಎಂದರು.

ಕಾಂಗ್ರೆಸ್ ಮತ್ತು ಎನ್‌ಸಿಪಿ ವಿರುದ್ಧ ದಾಳಿ ನಡೆಸಿದ ಅವರು,370ನೇ ವಿಧಿಯನ್ನು ರದ್ದುಗೊಳಿಸಿದ ಅಭೂತಪೂರ್ವ ನಿರ್ಣಯವನ್ನು ಅವು ರಾಜಕೀಯಗೊಳಿಸುತ್ತಿವೆ. ಈ ಪಕ್ಷಗಳ ನಾಯಕರ ಚಿಂತನೆಗಳು ಜಮ್ಮು-ಕಾಶ್ಮೀರದ ಕುರಿತು ಇಡೀ ದೇಶವು ಹೊಂದಿರುವ ಭಾವನೆಗಳಿಗೆ ತದ್ವಿರುದ್ಧವಾಗಿವೆ ಎಂದರು.

ವಿಧಿ 370 ರದ್ದತಿ ಕ್ರಮವನ್ನು ಪ್ರಶಂಸಿಸಿದ ಅವರು,ಇಂತಹ ನಿರ್ಧಾರವೊಂದನ್ನು ತೆಗೆದುಕೊಳ್ಳಬಹುದು ಎನ್ನುವುದು ಮೊದಲು ಚಿಂತಿಸಲೂ ಸಾಧ್ಯವಿಲ್ಲವಾಗಿತ್ತು,ವರ್ಷಗಳ ಕಾಲ ಜಮ್ಮು-ಕಾಶ್ಮೀರದಲ್ಲಿ ಕೇವಲ ಪ್ರತ್ಯೇಕತಾವಾದ ಮತ್ತು ಭೀತಿವಾದಗಳೇ ಹರಡಿಕೊಂಡಿದ್ದವು. ಬಡವರು,ಮಹಿಳೆಯರು,ದಲಿತರು ಮತ್ತು ಶೋಷಿತ ವರ್ಗಗಳ ಅಭಿವೃದ್ಧಿಗೆ ಅವಕಾಶ ತೀರ ವಿರಳವಾಗಿತ್ತು ಎಂದು ಬೆಟ್ಟು ಮಾಡಿದರು.

‘ ಜಮ್ಮು,ಕಾಶ್ಮೀರ ಮತ್ತು ಲಡಾಖ್‌ಗಳಲ್ಲಿಯ ವಾಲ್ಮೀಕಿ ಸಮುದಾಯದ ಜನರು ತಮ್ಮ ಮಾನವ ಹಕ್ಕುಗಳಿಂದಲೂ ವಂಚಿತರಾಗಿದ್ದರು. ನನ್ನ ಆ ಸೋದರರನ್ನು ಅಪ್ಪಿಕೊಳ್ಳುವ ಭಾಗ್ಯ ನನಗೆ ಸಿಕ್ಕಿದೆ ಎಂದು ನಾನಿಂದು ಭಗವಾನ್ ವಾಲ್ಮೀಕಿಯವರ ಮುಂದೆ ತಲೆ ಬಾಗಿ ಹೇಳಬಲ್ಲೆ ’ಎಂದರು.

ತ್ರಿವಳಿ ತಲಾಖ್ ನಿಷೇಧ ಕುರಿತಂತೆಯೂ ಪ್ರತಿಪಕ್ಷಗಳ ವಿರುದ್ಧ ದಾಳಿ ನಡೆಸಿದ,ಮುಸ್ಲಿಂ ಮಹಿಳೆಯರಿಗೆ ನ್ಯಾಯ ದೊರಕದಂತೆ ಅವು ಪ್ರಯತ್ನಿಸಿದ್ದವು. ಆದರೆ ನಾನು ಮುಸ್ಲಿಂ ಮಾತೆಯರು ಮತ್ತು ಸೋದರಿಯರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇನೆ ಎಂದರು. ತ್ರಿವಳಿ ತಲಾಖ್ ಪದ್ಧತಿಯನ್ನು ಮರಳಿ ತರುವಂತೆಯೂ ಅವರು ಪ್ರತಿಪಕ್ಷಕ್ಕೆ ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News