ಮಾನವಹಕ್ಕುಗಳ ಬಗ್ಗೆ ಪಾಶ್ಚಿಮಾತ್ಯ ಮಾನದಂಡ ಭಾರತಕ್ಕೆ ಅನ್ವಯಿಸುವುದಿಲ್ಲ ಎಂದ ಅಮಿತ್ ಶಾ

Update: 2019-10-13 14:16 GMT

ಹೊಸದಿಲ್ಲಿ, ಅ.13: ಮಾನವ ಹಕ್ಕು ಕುರಿತ ಪಾಶ್ಚಿಮಾತ್ಯ ಮಾನದಂಡ ಭಾರತಕ್ಕೆ ಅನ್ವಯಿಸುವುದಿಲ್ಲ. ಮಹಿಳೆಯರಿಗೆ ಶೌಚಾಲಯಕ್ಕೆ ಪ್ರವೇಶ ಇಲ್ಲದಿರುವುದು, ಮಹಿಳೆಯರಿಗೆ ಸುರಕ್ಷಿತ ಅಡುಗೆ ಸೌಲಭ್ಯ ಕಲ್ಪಿಸದಿರುವುದು ಮಾನವ ಹಕ್ಕಿನ ವಿಷಯವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ರಾಷ್ಟ್ರೀಯ ಮಾನವಹಕ್ಕು ಆಯೋಗದ 26ನೇ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಸಹನೀಯ ಪರಿಸ್ಥಿತಿಯಲ್ಲಿದ್ದ ಮಿಲಿಯಾಂತರ ಜನರ ಬದುಕನ್ನು ಮೋದಿ ಸರಕಾರ ಸುಧಾರಿಸಿದೆ ಎಂದವರು ಹೇಳಿದ್ದಾರೆ.

ಭಾರತದಲ್ಲಿ ಪೊಲೀಸರ ಕ್ರೌರ್ಯ ಮತ್ತು ಕಸ್ಟಡಿ ಸಾವಿನ ಪ್ರಕರಣಗಳಿಗೆ ನೀಡುವಷ್ಟೇ ಮಹತ್ವವನ್ನು ಉಗ್ರವಾದಿಗಳಿಂದ ಹತ್ಯೆಯಾಗುವ ನಾಗರಿಕರ ಪ್ರಕರಣಗಳಿಗೂ ನೀಡಬೇಕು. ಮಾವೋವಾದಿ ಗುಂಪುಗಳು ಮತ್ತು ಭಯೋತ್ಪಾದಕ ತಂಡಗಳು ನಡೆಸುತ್ತಿರುವ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳನ್ನು ಭಾರತೀಯ ದೃಷ್ಟಿಕೋನದಿಂದ ನೋಡಬೇಕಾಗಿದೆ. ಮಾನವಹಕ್ಕು ಕುರಿತ ಸಾಂಪ್ರದಾಯಿಕ ಪರಿಕಲ್ಪನೆಯ ಬದಲು ಹೊಸದಾದ ಪರಿಕಲ್ಪನೆ  ರೂಪಿಸುವ ಅಗತ್ಯವಿದೆ. ಮಾನವ ಹಕ್ಕು ಎಂದಾಕ್ಷಣ ಪೊಲೀಸ್ ದೌರ್ಜನ್ಯ ಮತ್ತು ಕಸ್ಟಡಿ ಸಾವಿನ ಪ್ರಕರಣ ಎಂದು ಜನತೆ ಭಾವಿಸುವಂತಾಗಿದೆ. ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಇದಕ್ಕೆ ಇತರ ಹಲವು ಆಯಾಮಗಳಿದ್ದು ಅದನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಬೇಕು ಎಂದು ಶಾ ಹೇಳಿದರು.

ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಎಚ್‌ಎಲ್ ದತ್ತು ಮಾತನಾಡಿ, ಆಯೋಗದ ಜವಾಬ್ದಾರಿಯನ್ನು ನೆರವೇರಿಸಲು ಕೇಂದ್ರ ಸರಕಾರ ಪೂರ್ಣ ಸಹಕಾರ ನೀಡುತ್ತಿದೆ. ಜೀತ ಪದ್ಧತಿ, ಕಸ್ಟಡಿ ಸಾವಿನಂತಹ ಪ್ರಕರಣಗಳನ್ನು ಆಯೋಗ ಸೂಕ್ತವಾಗಿ ನಿರ್ವಹಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News