ನಾಳೆ ಅಂತಿಮ ಹಂತ ಪ್ರವೇಶಿಸಲಿರುವ ಸುದೀರ್ಘ ಅಯೋಧ್ಯೆ ವಿವಾದ ವಿಚಾರಣೆ

Update: 2019-10-13 14:29 GMT

ಹೊಸದಿಲ್ಲಿ,ಅ.13: ರಾಜಕೀಯವಾಗಿ ಸೂಕ್ಷ್ಮವಾಗಿರುವ,ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದ ಕುರಿತು ಸುದೀರ್ಘ ವಿಚಾರಣೆಯು ಸೋಮವಾರ ನಿರ್ಣಾಯಕ ಅಂತಿಮ ಹಂತವನ್ನು ಪ್ರವೇಶಿಸಲಿದೆ. ಒಂದು ವಾರದ ದಸರಾ ರಜೆಗಳ ಬಳಿಕ ಸರ್ವೋಚ್ಚ ನ್ಯಾಯಾಲಯವು ವಿಚಾರಣೆಯನ್ನು ಪುನರಾರಂಭಿಸಲಿದೆ.

ವಿವಾದಕ್ಕೆ ರಾಜಿ ಪರಿಹಾರವನ್ನು ಕಂಡುಕೊಳ್ಳಲು ಸಂಧಾನ ಪ್ರಕ್ರಿಯೆಗಳು ವಿಫಲಗೊಂಡ ಬಳಿಕ ಆ.6ರಂದು ದೈನಂದಿನ ವಿಚಾರಣೆಯನ್ನು ಆರಂಭಿಸಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಕಲಾಪಗಳನ್ನು ಪೂರ್ಣಗೊಳಿಸಲು ಅಂತಿಮ ಗಡುವನ್ನು ಪರಿಷ್ಕರಿಸಿ,ಅ.17ಕ್ಕೆ ನಿಗದಿಗೊಳಿಸಿತ್ತು.

 ಅಯೋಧ್ಯೆಯಲ್ಲಿನ ವಿವಾದಿತ 2.77 ಎಕರೆ ನಿವೇಶನವನ್ನು ಸುನ್ನಿ ವಕ್ಫ್ ಮಂಡಳಿ,ನಿರ್ಮೋಹಿ ಅಖಾಡಾ ಮತ್ತು ರಾಮ ಲಲ್ಲಾ ನಡುವೆ ಸಮಾನವಾಗಿ ಹಂಚಿಕೆಯಾಗಬೇಕೆಂದು ಅಲಹಾಬಾದ್ ಉಚ್ಚ ನ್ಯಾಯಾಲಯವು 2010ರಲ್ಲಿ ನಾಲ್ಕು ಸಿವಿಲ್ ಮೊಕದ್ದಮೆಗಳಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಒಟ್ಟು 14 ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು.

ಆರಂಭದಲ್ಲಿ ಕೆಳ ನ್ಯಾಯಾಲಯದಲ್ಲಿ ಐದು ಮೊಕದ್ದಮೆಗಳು ದಾಖಲಾಗಿದ್ದರೂ,ಬಳಿಕ ಪರಮಹಂಸ ರಾಮಚಂದ್ರ ದಾಸ ಅವರು ತಾನು ದಾಖಲಿಸಿದ್ದ ಮೊಕದ್ದಮೆಯನ್ನು ಹಿಂದೆಗೆದುಕೊಂಡಿದ್ದರು.

1992,ಡಿ.6ರಂದು ವಿವಾದಿತ ರಾಮ ಜನ್ಮಭೂಮಿ-ಬಾಬರಿ ಮಸೀದಿ ಕಟ್ಟಡ ಧ್ವಂಸವು ದೇಶಾದ್ಯಂತ ಕೋಮುದಂಗೆಗಳಿಗೆ ಕಾರಣವಾಗಿತ್ತು. ಬಳಿಕ ಎಲ್ಲ ಮೊಕದ್ದಮೆಗಳನ್ನು ವಿಚಾರಣೆಗಾಗಿ ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.

 ಪೂರ್ವ ನಿಗದಿತ ಅ.18ರ ಬದಲು ಅ.17ಕ್ಕೇ ವಿಚಾರಣೆಯನ್ನು ಪೂರ್ಣಗೊಳಿಸುವುದಾಗಿ ಈ ಹಿಂದೆ ತಿಳಿಸಿದ್ದ, ನ್ಯಾಯಮೂರ್ತಿಗಳಾದ ಎಸ್.ಎ.ಬೋಬ್ಡೆ,ಡಿ.ವೈ.ಚಂದ್ರಚೂಡ,ಅಶೋಕ ಭೂಷಣ್ ಮತ್ತು ಎಸ್.ಎ.ನಝೀರ್ ಅವರನ್ನೊಳಗೊಂಡ ಸಂವಿಧಾನ ಪೀಠವು ಸುದೀರ್ಘ ವಾದವಿವಾದಗಳ ಅಂತಿಮ ಹಂತದ ವೇಳಾಪಟ್ಟಿಯನ್ನು ನಿಗದಿಗೊಳಿಸಿತ್ತು. ಪ್ರಕರಣದಲ್ಲಿಯ ಮುಸ್ಲಿಂ ಕಕ್ಷಿದಾರರ ಪರ ವಾದಗಳನ್ನು ಅ.14ರಂದು ಪೂರ್ಣಗೊಳಿಸಲು ಮತ್ತು ಬಳಿಕ ಅ.16ರವರೆಗೆ ಎರಡು ದಿನಗಳ ಕಾಲ ಹಿಂದು ಕಕ್ಷಿದಾರರ ಪರ ವಾದಗಳನ್ನು ಮಂಡಿಸಲು ಅವಕಾಶ ನೀಡುವುದಾಗಿ ತಿಳಿಸಿತ್ತು.

ಅ.17ರಂದು ಕಲಾಪವನ್ನು ಪೂರ್ಣಗೊಳಿಸಲಾಗುವುದು ಮತ್ತು ಅಂದು ಕಕ್ಷಿಗಳು ತಾವು ಕೋರಿರುವ ಪರಿಹಾರದ ಕುರಿತು ಅಂತಿಮ ವಾದವಿವಾದಗಳನ್ನು ಮಂಡಿಸಬೇಕು ಎಂದು ನ್ಯಾಯಾಲಯವು ಹೇಳಿತ್ತು.

ಭಾರತದ ಮುಖ್ಯ ನ್ಯಾಯಾಧೀಶ ರಂಜನ ಗೊಗೊಯಿ ಅವರು ನ.17ರಂದು ನಿವೃತ್ತರಾಗಲಿದ್ದು,ಅಂದೇ ಈ ಪ್ರಕರಣದ ತೀರ್ಪು ಹೊರಬೀಳುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News