ನಿರ್ಭಯಾ ಅತ್ಯಾಚಾರ ಪ್ರಕರಣ: ಸಂದರ್ಶನಗಳಿಂದ ಲಕ್ಷಾಂತರ ರೂ. ಗಳಿಸಿದ ಸಂತ್ರಸ್ತೆಯ ಸ್ನೇಹಿತ

Update: 2019-10-13 17:30 GMT
ನಿರ್ಭಯಾರ ಸ್ನೇಹಿತ

ಹೊಸದಿಲ್ಲಿ, ಅ.13: ನಿರ್ಭಯಾ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಗೆಳೆಯ ಸಂದರ್ಶನಗಳಲ್ಲಿ ಭಾಗವಹಿಸಿ ಲಕ್ಷಾಂತರ ರೂ.  ರೂಪಾಯಿಗಳನ್ನು ಗಳಿಸಿದ್ದಾರೆ ಎಂದು ಹಿರಿಯ ಪತ್ರಕರ್ತ ಅಜಿತ್ ಅಂಜುಮ್ ಆರೋಪಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಸಂದರ್ಶನಕ್ಕಾಗಿ ಹಣದ ಬೇಡಿಕೆಯಿಟ್ಟ ಹಾಗು ಹಣ ಸ್ವೀಕರಿಸಿದ ನಿರ್ಭಯಾಳ ಸ್ನೇಹಿತನ ಬಗ್ಗೆ ತಾನು ಹೇಗೆ ಕುಟುಕು ಕಾರ್ಯಾಚರಣೆ ನಡೆಸಿದ್ದೆ ಎನ್ನುವುದನ್ನು ಬರೆದಿದ್ದಾರೆ.

"ಇದು 2013ರ ಸೆಪ್ಟಂಬರ್ ನ ಘಟನೆ. ನ್ಯಾಯಾಲಯವೊಂದು ನಿರ್ಭಯಾ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ವಿಧಿಸಿತ್ತು. ಎಲ್ಲಾ ಚಾನೆಲ್ ಗಳು ನಿರ್ಭಯಾ ಪ್ರಕರಣದ ಬಗ್ಗೆ ವರದಿ ಪ್ರಸಾರ ಮಾಡುತ್ತಿದ್ದವು. ಇದೇ ಸಮಯ ನಿರ್ಭಯಾರ ಸ್ನೇಹಿತ ಕೆಲ ಚಾನೆಲ್ ಗಳಲ್ಲಿ ಈ ಹೀನಕೃತ್ಯದ ಬಗ್ಗೆ ವಿವರಿಸುತ್ತಿದ್ದರು" ಎಂದು ಅಜಿತ್ ಅಂಜುಮ್ ಹೇಳಿದ್ದಾರೆ.

ಸಂದರ್ಶನಕ್ಕಾಗಿ ನಿರ್ಭಯಾರ ಸ್ನೇಹಿತನನ್ನು ಚಾನೆಲ್ ಗೆ ಕರೆತರುವಂತೆ ತಾನು ವರದಿಗಾರರಿಗೆ ಹೇಳಿದ್ದೆ. ನಂತರ ಟಿವಿ ಚಾನೆಲ್ ಗಳ ಸಂದರ್ಶನದಲ್ಲಿ ಭಾಗವಹಿಸಲು ಆತ ಹಣ ಕೇಳುತ್ತಿದ್ದಾರೆ ಎಂದು ತಿಳಿದು ಬಂತು ಎಂದವರು ಆರೋಪಿಸಿದ್ದಾರೆ.

"ನಾನಿದನ್ನು ಮೊದಲು ನಂಬಿರಲಿಲ್ಲ. ಇದು ಹುಚ್ಚುತನ. ಯಾರ ಮುಂದೆ ಆಕೆಯ ಸಾಮೂಹಿಕ ಅತ್ಯಾಚಾರ ನಡೆಯಿತೋ, ಆ ಕಥೆಯನ್ನು ಹೇಳಲು ಚಾನೆಲ್ ಗಳೊಂದಿಗೆ ಆತ ಡೀಲ್ ಗಳನ್ನು ಮಾಡುತ್ತಿದ್ದಾನೆ. ನಾನು ಆತನನ್ನು ನಿರಂತರವಾಗಿ ಟಿವಿ ಚಾನೆಲ್ ಗಳಲ್ಲಿ ನೋಡುತ್ತಿದ್ದೆ. ಆತನ ಕಣ್ಣುಗಳಲ್ಲಿ ನೋವಿರಲಿಲ್ಲ" ಎಂದು ಅವರು ಟ್ವೀಟ್ ಮಾಡಿದ್ದಾರೆ.

"ನಾನು ಆತನ ಕುಟುಕು ಕಾರ್ಯಾಚರಣೆ ನಡೆಸಲು ನಿರ್ಧರಿಸಿದೆ. ನನ್ನ ವರದಿಗಾರ ನನ್ನ ಮುಂದೆ ಕುಳಿತು ನಿರ್ಭಯಾರ ಸ್ನೇಹಿತನ ಚಿಕ್ಕಪ್ಪನಿಗೆ ಕರೆ ಮಾಡಿದ. ಸ್ಟುಡಿಯೋಗೆ ಬರಲು ಆ ವ್ಯಕ್ತಿ 1 ಲಕ್ಷ ರೂ.ಗಳ ಬೇಡಿಕೆಯಿಟ್ಟ, ಸ್ಟುಡಿಯೋ ಸಂದರ್ಶನಕ್ಕಾಗಿ ಸ್ನೇಹಿತನ ಎದುರಲ್ಲೇ ಹಣ ನೀಡಲಾಯಿತು. ಎಲ್ಲವೂ ರೆಕಾರ್ಡ್ ಆಗಿದೆ. ನಂತರ ಆತನನ್ನು ಸ್ಟುಡಿಯೋಗೆ ಕರೆದೊಯ್ಯಲಾಯಿತು. 10 ನಿಮಿಷಗಳ ನಂತರ ಸಂದರ್ಶನದಲ್ಲಿ ಆತನಲ್ಲಿ ನಿರ್ಭಯಾರ ಕಥೆ ಹೇಳಲು ಚಾನೆಲ್ ಗಳಿಂದ ಹಣ ಪಡೆಯುವುದೇಕೆ ಎಂದು ಪ್ರಶ್ನಿಸಲಾಯಿತು. ಆದರೆ ಆತ ಸಂದರ್ಶನದಲ್ಲಿ ಭಾಗವಹಿಸಲು ಹಣ ಪಡೆಯುತ್ತೇನೆ ಎನ್ನುವುದನ್ನು ನಿರಾಕರಿಸಿದ. ನಂತರ ರೆಕಾರ್ಡಿಂಗ್ ಆಗುತ್ತಿದ್ದಂತೆ ಆತನಿಗೆ ಕುಟುಕು ಕಾರ್ಯಾಚರಣೆಯ ವಿಡಿಯೋ ತೋರಿಸಲಾಯಿತು. ಆತ ನಂತರ ಕ್ಯಾಮರಾಗಳ ಮುಂದೆ ಕ್ಷಮೆಯಾಚಿಸಿದ" ಎಂದು ಅಜಿತ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News