ಜಪಾನ್‌ಗೆ ಅಪ್ಪಳಿಸಿದ ‘ಹಗಿಬಿಸ್’ ಚಂಡಮಾರುತ

Update: 2019-10-13 17:59 GMT

ಟೋಕಿಯೊ, ಅ. 13: ‘ಹಗಿಬಿಸ್’ ಚಂಡಮಾರುತ ಜಪಾನ್‌ಗೆ ಅಪ್ಪಳಿಸಿದ ಬಳಿಕ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ ಹಾಗೂ ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ ಎಂದು ಜಪಾನ್ ಅಧಿಕಾರಿಗಳು ರವಿವಾರ ಹೇಳಿದ್ದಾರೆ.

ಚಂಡಮಾರುತದ ಪರಿಣಾಮವಾಗಿ ಸೃಷ್ಟಿಯಾಗಿರುವ ಭಾರೀ ಪ್ರಮಾಣದ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಜನರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಬೃಹತ್ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಚಂಡಮಾರುತದ ಪರಿಣಾಮವಾಗಿ ಸುರಿದ ‘ಅಭೂತಪೂರ್ವ’ ಜಡಿಮಳೆಯಿಂದಾಗಿ ಬೃಹತ್ ಭೂಕುಸಿತಗಳು ಸಂಭವಿಸಿವೆ ಹಾಗೂ ನದಿಗಳ ದಂಡೆಗಳು ಒಡೆದಿವೆ.

ರವಿವಾರ ಬೆಳಗ್ಗಿನ ವೇಳೆಗೆ ಸಾಕಷ್ಟು ದುರ್ಬಲಗೊಂಡ ಬಿರುಗಾಳಿ ಭೂಮಿಯ ಮೇಲಿನ ಪಥವನ್ನು ಬದಲಿಸಿ ಸಮುದ್ರದತ್ತ ತಿರುಗಿದೆ. ಆದರೆ, ಮಧ್ಯ ಜಪಾನ್‌ನ ನಂಗಾನೊ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಗಂಭೀರ ಪ್ರವಾಹ ಪರಿಸ್ಥಿತಿ ತಲೆದೋರಿದೆ.

ರಕ್ಷಣೆಗಾಗಿ 27,000 ಸೈನಿಕರ ನಿಯೋಜನೆ

ರಕ್ಷಣಾ ಕಾರ್ಯಾಚರಣೆಗಾಗಿ ಜಪಾನ್ ಸೇನೆಯು 27,000 ಸೈನಿಕರನ್ನು ನಿಯೋಜಿಸಿದೆ. ಹೆಲಿಕಾಪ್ಟರ್‌ಗಳು ಹಾರಾಟ ನಡೆಸಿ ನಗಾನೊ ನಗರದಲ್ಲಿ ನೆರೆ ನೀರಿನಿಂದಾವೃತ ಮನೆಗಳ ಮೇಲ್ಛಾವಣಿ ಮತ್ತು ಬಾಲ್ಕನಿಗಳಲ್ಲಿ ಸಿಲುಕಿಕೊಂಡಿದ್ದ ಜನರನ್ನು ರಕ್ಷಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News