ಅಂತಿಮ ಟೆಸ್ಟ್ ಗೆ ಕೇಶವ ಮಹಾರಾಜ್ ಅಲಭ್ಯ

Update: 2019-10-13 18:26 GMT

ಮುಂಬೈ, ಅ.13: ಭುಜನೋವಿನಿಂದ ಬಳಲುತ್ತಿರುವ ಎಡಗೈ ಸ್ಪಿನ್ನರ್ ಕೇಶವ ಮಹಾರಾಜ್ ಭಾರತ ವಿರುದ್ಧ ರಾಂಚಿಯಲ್ಲಿ ಅ.19ರಿಂದ ಆರಂಭವಾಗಲಿರುವ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ರವಿವಾರ ತಿಳಿಸಿದೆ.

ಪುಣೆಯಲ್ಲಿ ರವಿವಾರ ಕೊನೆಗೊಂಡ ಎರಡನೇ ಟೆಸ್ಟ್ ನ ಎರಡನೇ ದಿನದಾಟದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಮಹಾರಾಜ್ ಅವರ ಬಲ ಭುಜಕ್ಕೆ ಗಾಯವಾಗಿತ್ತು. ಆದಾಗ್ಯೂ ಅವರು ಎರಡೂ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ್ದರು.

ನಾಲ್ಕನೇ ದಿನದ ಆಟಕ್ಕೆ ಮೊದಲು ಕೇಶವ್‌ರನ್ನು ಪರೀಕ್ಷಿಸಲಾಗಿದ್ದು, ಶನಿವಾರದಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಕೇಶವ್ ಫಿಟ್ ಆಗುವ ಸಾಧ್ಯತೆಯಿಲ್ಲ. ಎಂಆರ್‌ಐ ಸ್ಕಾನಿಂಗ್‌ನಲ್ಲಿ ಕೇಶವ್ ಅವರ ಬಲ ಭುಜ ಮಾಂಸಖಂಡದಲ್ಲಿ ಗಾಯವಾಗಿರುವುದು ದೃಢಪಟ್ಟಿದೆ. ರವಿವಾರ ಬೆಳಗ್ಗೆ ಅವರನ್ನು ಪರೀಕ್ಷಿಸಲಾಗಿದೆ. ಅವರ ಗಾಯದ ಪ್ರಮಾಣವನ್ನು ನೋಡಿದರೆ 14ರಿಂದ 21 ದಿನಗಳ ಬಳಿಕ ಸಕ್ರಿಯ ಕ್ರಿಕೆಟ್‌ಗೆ ವಾಪಸಾಗಬಹುದು’’ ಎಂದು ದ.ಆಫ್ರಿಕಾದ ಟೀಮ್ ವೈದ್ಯರಾದ ರಾಮ್‌ಜೀ ಹಶ್ರೇಂದ್ರ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ ಗಾಯಗೊಂಡಿರುವ ಕೇಶವ ಮಹಾರಾಜ್ ಬದಲಿಗೆ ಚೊಚ್ಚಲ ಪಂದ್ಯದ ನಿರೀಕ್ಷೆಯಲ್ಲಿರುವ ಎಡಗೈ ಸ್ಪಿನ್ನರ್ ಜಾರ್ಜ್ ಲಿಂಡೆ ಅವರನ್ನು ಆಯ್ಕೆ ಮಾಡಿದೆ. 29ರ ಹರೆಯದ ಮಹಾರಾಜ್ ಭಾರತ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಒಟ್ಟು ಆರು ವಿಕೆಟ್‌ಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News