ಬಿಸಿಸಿಐ ಸಾರಥ್ಯಕ್ಕೆ ಭಾರತದ ಈ ಮಾಜಿ ನಾಯಕ ಸಜ್ಜು

Update: 2019-10-14 08:31 GMT

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನೂತನ ಅಧ್ಯಕ್ಷ ಹುದ್ದೆಗೆ ಸರ್ವಸಮ್ಮತ ಅಭ್ಯರ್ಥಿಯಾಗಿ ಆಯ್ಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ.

ಬ್ರಿಜೇಶ್ ಪಟೇಲ್ ಅವರು ಈ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎಂಬ ನಿರೀಕ್ಷೆಯ ನಡುವೆಯೇ ಅಚ್ಚರಿಯ ಬೆಳವಣಿಗೆ ನಡೆದಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ನೂತನ ಕಾರ್ಯದರ್ಶಿಯಾಗಲಿದ್ದು, ಅರುಣ್ ಧಮಾಲ್ ನೂತನ ಖಜಾಂಚಿಯಾಗಲಿದ್ದಾರೆ. ಧಮಾಲ್ ಅವರು ಹಣಕಾಸು ಖಾತೆ ರಾಜ್ಯ ಸಚಿವ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರ ತಮ್ಮ.

"ಗಂಗೂಲಿ ಇದೀಗ ಅಧ್ಯಕ್ಷ ಅಭ್ಯರ್ಥಿ. ನಾಳೆ ನಮಪತ್ರ ಸಲ್ಲಿಸಲಿದ್ದಾರೆ. ಎಲ್ಲ ಪ್ರತಿನಿಧಿಗಳ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಗಂಗೂಲಿಯವರ ಆಪ್ತ ಮೂಲಗಳು ಹೇಳಿವೆ.

ನಾಮಪತ್ರ ಸಲ್ಲಿಕೆಗೆ ಸೋಮವಾರ ಕೊನೆಯ ದಿನವಾಗಿದ್ದು, ಒಂದು ವಾರದ ನಿರಂತರ ಲಾಬಿ ಬಳಿಕ ಎಲ್ಲ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗುವ ಸಂಭವ ಇರುವುದರಿಂದ ಮತದಾನ ನಡೆಯುವ ಸಾಧ್ಯತೆ ಕಡಿಮೆ.

2021ರಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುವುದನ್ನು ಗಂಗೂಲಿ ದೃಢಪಡಿಸದ ಹಿನ್ನೆಲೆಯಲ್ಲಿ, ತಮಿಳುನಾಡಿನ ಪ್ರಬಲ ವ್ಯಕ್ತಿ ಎನ್.ಶ್ರೀನಿವಾಸನ್ ಬೆಂಬಲಿತ ಬೃಜೇಶ್ ಪಟೇಲ್ ಅಧ್ಯಕ್ಷರಾಗುವುದು ಬಹುತೇಕ ನಿಚ್ಚಳವಾಗಿತ್ತು. ಆದರೆ ಈ ಹೊಂದಾಣಿಕೆಯನ್ನು ಬಹುತೇಕ ರಾಜ್ಯಗಳು ವಿರೋಧಿಸಿದ ಹಿನ್ನೆಲೆಯಲ್ಲಿ ಗಂಗೂಲಿ ಕೊನೆ ಕ್ಷಣದಲ್ಲಿ ಸರ್ವಸಮ್ಮತ ಅಭ್ಯರ್ಥಿಯಾಗಿ ಹೊರಹೊಮ್ಮಿದರು. ಪಟೇಲ್ ಐಪಿಎಲ್ ಅಧ್ಯಕ್ಷರಾಗುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News