ಭಾರತೀಯ-ಅಮೆರಿಕನ್ ಅಭಿಜಿತ್ ಬ್ಯಾನರ್ಜಿ ಸೇರಿ ಮೂವರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ

Update: 2019-10-14 17:49 GMT

ಸ್ಟಾಕ್‌ಹೋಮ್, ಅ.14: ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಹಾಗೂ ಅವರ ಫ್ರೆಂಚ್-ಅಮೆರಿಕನ್ ಮೂಲದ ಪತ್ನಿ ಎಶ್ತರ್ ದಫ್ಲೊ ಸೇರಿದಂತೆ ಮೂವರು ಅಮೆರಿಕನ್ ಅರ್ಥಶಾಸ್ತ್ರಜ್ಞರು 2019ರ ಸಾಲಿನ ಪ್ರತಿಷ್ಠಿತ ಅರ್ಥಶಾಸ್ತ್ರ ನೊಬೆಲ್ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಶಿಕ್ಷಣ ಹಾಗೂ ಆರೋಗ್ಯಪಾಲನೆ ಕ್ಷೇತ್ರದಲ್ಲಿ ನೂತನ ದೃಷ್ಟಿಕೋನಗಳ ಅವಿಷ್ಕಾರ ಸೇರಿದಂತೆ ಬಡತನದ ವಿರುದ್ಧ ಹೋರಾಟದಲ್ಲಿ ಪ್ರಾಯೋಗಿಕ ವಿಧಾನ ಮಂಡಿಸಿದ್ದಕ್ಕಾಗಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರೆತಿದೆ.

ಅಮೆರಿಕದ ಇನ್ನೋರ್ವ ಅರ್ಥಶಾಸ್ತ್ರ ತಜ್ಞ ಮೈಕೆಲ್ ಕ್ರೆಮೆರ್ ಕೂಡಾ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತರಾಗಿದ್ದಾರೆ.

ಈ ವರ್ಷದ ಅರ್ಥಶಾಸ್ತ್ರ ನೊಬೆಲ್ ಪುರಸ್ಕೃತರು ಜಾಗತಿಕ ಬಡತನದ ವಿರುದ್ಧ ಹೋರಾಡಲು ಅತ್ಯುತ್ತಮ ಮಾರ್ಗಗಳ ಕುರಿತು ವಿಶ್ವಸನೀಯ ಉತ್ತರಗಳನ್ನು ಪಡೆಯಲು ನೂತನ ವಿಧಾನಗಳನ್ನು ಪರಿಚಯಿಸಿದ್ದಾರೆ ಎಂದು ನೊಬೆಲ್ ಆಯ್ಕೆ ಸಮಿತಿಯ ಹೇಳಿಕೆ ತಿಳಿಸಿದೆ.

‘‘2019ರ ನೊಬೆಲ್ ಅರ್ಥಶಾಸ್ತ್ರ ವಿಜೇತರು ನಡೆಸಿದ ಸಂಶೋಧನೆಯು ಜಾಗತಿಕ ಬಡತನದ ವಿರುದ್ಧ ಹೋರಾಡುವಲ್ಲಿ ನಮ್ಮ ಸಾಮರ್ಥ್ಯವನ್ನು ಗಣನೀಯವಾಗಿ ಸುಧಾರಿಸಿದೆ. ಕೇವಲ ಎರಡು ದಶಕಗಳಲ್ಲಿ ಅವರ ನೂತನ ಪ್ರಯೋಗ ಅಧರಿಸಿದ ವಿಧಾನವು ಅರ್ಥಶಾಸ್ತ್ರದ ಕಲ್ಪನೆಯನ್ನು ಬದಲಾಯಿಸಿದೆ ಮತ್ತು ಆ ಕ್ಷೇತ್ರ ಹೊಸ ಬೆಳವಣಿಗೆಯನ್ನು ಸಾಧಿಸುವತ್ತ ಮುನ್ನಡೆದಿದೆ’’ ಎಂದು ನೊಬೆಲ್ ಆಯ್ಕೆ ಸಮಿತಿ ಹೇಳಿಕೆ ತಿಳಿಸಿದೆ.

ಇವರ ಅಧ್ಯಯನದ ನೇರ ಪರಿಣಾಮವಾಗಿ 50 ಲಕ್ಷಕ್ಕೂ ಅಧಿಕ ಮಂದಿ ಭಾರತೀಯ ಮಕ್ಕಳು ಶಾಲೆಗಳಲ್ಲಿ ಅಳವಡಿಸಲಾದ ಪರಿಣಾಮಕಾರಿಯಾದ ಪರಿಹಾರಾತ್ಮಕ ಕಾರ್ಯಕ್ರಮಗಳಿಂದಾಗಿ ಪ್ರಯೋಜನ ಪಡೆದಿದ್ದಾರೆ. ಹಲವಾರು ದೇಶಗಳಲ್ಲಿ ಪರಿಚಯಿಸಲಾದ ಪ್ರತಿಬಂಧಾತ್ಮಕ ಆರೋಗ್ಯಪಾಲನಾ ಕ್ಷೇತ್ರಕ್ಕೆ ಅಪಾರ ಪ್ರಮಾಣದಲ್ಲಿ ಸಬ್ಸಿಡಿ ಒದಗಿಸಿರುವುದು ಇವರ ಅಧ್ಯಯನದ ಫಲವೇ ಆಗಿದೆಯೆಂದು ತೀರ್ಪುಗಾರ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.

ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯ 50 ವರ್ಷಗಳ ಇತಿಹಾಸದಲ್ಲೇ ಎಶ್ತರ್ ಡಫ್ಲೊ ಅವರು ಈ ಪ್ರಶಸ್ತಿಯನ್ನು ಪಡೆದಿರುವ ಎರಡನೆ ಮಹಿಳೆಯಾಗಿದ್ದಾರೆ. 46 ವರ್ಷದ ಡಫ್ಲೊ ಅವರು ಅಮೆರಿಕದಲ್ಲಿ ಮ್ಯಾಸಚ್ಯೂಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಚಾರ್ಯರಾಗಿದ್ದಾರೆ. ಎಲಿನೊರ್ ಅವರು ಅರ್ಥಶಾಸ್ತ್ರದ ನೊಬೆಲ್ ಪಡೆದಿರುವ ಪ್ರಥಮ ಮಹಿಳೆಯಾಗಿದ್ದು, ಅವರಿಗೆ 2009ರಲ್ಲಿ ಈ ಪ್ರತಿಷ್ಠಿತ ಪುರಸ್ಕಾರ ಲಭಿಸಿತ್ತು.

60 ವರ್ಷ ವಯಸ್ಸಿನ ಅಭಿಜಿತ್ ಬ್ಯಾನರ್ಜಿ ಹಾಗೂ ಇನ್ನೋರ್ವ ಅರ್ಥಶಾಸ್ತ್ರ ನೊಬೆಲ್ ಪುರಸ್ಕೃತರಾದ 54 ವರ್ಷ ವಯಸ್ಸಿನ ಕ್ರೆಮೆರ್ ಕೂಡಾ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಚಾರ್ಯರಾಗಿದ್ದಾರೆ.

ಅರ್ಥಶಾಸ್ತ್ರದ ನೊಬೆಲ್ 9 ದಶಲಕ್ಷ ಸ್ವೀಡಿಶ್ ಕ್ರೊನೊರ್ (ಸುಮಾರು 6.52 ಕೋಟಿ ರೂ.) ಹೊಂದಿದ್ದು, ಈ ಹಣವನ್ನು ಮೂವರು ವಿಜೇತರು ಹಂಚಿಕೊಳ್ಳಲಿದ್ದಾರೆ.  

58 ವರ್ಷ ವಯಸ್ಸಿನ ಬ್ಯಾನರ್ಜಿ ಕೋಲ್ಕತಾ ವಿಶ್ವವಿದ್ಯಾನಿಲಯ, ಜವಾಹರಲಾಲ್ ನೆಹರೂ ವಿವಿ ಹಾಗೂ ಹಾರ್ವರ್ಡ್ ವಿವಿಯಲ್ಲಿ ಶಿಕ್ಷಣ ಪಡೆದಿದ್ದಾರೆ. 1988ರಲ್ಲಿ ಅವರಿಗೆ ಪಿಎಚ್‌ಡಿ ಪದವಿ ದೊರೆತಿತ್ತು. ಪ್ರಸಕ್ತ ಅವರು ಮ್ಯಾಸಚ್ಯೂಸೆಟ್ಸ್‌ನ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಫೋರ್ಡ್ ಪ್ರತಿಷ್ಠಾನದ ಅಂತಾರಾಷ್ಟ್ರೀಯ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2003ರಲ್ಲಿ ಬ್ಯಾನರ್ಜಿ ಅವರು ಅಬ್ದುಲ್ ಲತೀಫ್ ಜಮೀಲ್ ಸ್ಮಾರಕ ಬಡತನ ವಿರುದ್ಧ ಕ್ರಿಯಾ ಲ್ಯಾಬ್ (ಜೆ-ಪಿಎಎಲ್) ಅನ್ನು ಡಫ್ಲೊ ಹಾಗೂ ಸೆಂಧಿಲ್ ಮುಲ್ಲೈನಾಥನ್ ಜೊತೆಗೂಡಿ ಸ್ಥಾಪಿಸಿದ್ದಾರೆ. ಅವರು ಈ ಪ್ರಯೋಗಾಲಯದ ನಿರ್ದೇಶಕರಾಗಿಯೂ ಈಗಲೂ ಸೇವೆ ಸಲ್ಲಿಸುತ್ತಿದ್ದಾರೆ. 2015 ಅಭಿವೃದ್ಧಿ ಕಾರ್ಯಸೂಚಿಯ ಕುರಿತಾದ ಪ್ರಮುಖ ವ್ಯಕ್ತಿಗಳ ಉನ್ನತ ಮಟ್ಟದ ಸಮಿತಿಯಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.

ಇನ್ನೋರ್ವ ಅರ್ಥಶಾಸ್ತ್ರ ನೊಬೆಲ್ ಪುರಸ್ಕೃತಾದ ಮೈಕೆಲ್ ಕ್ರೆಮೆರ್ ಅವರು ಹಾರ್ವರ್ಡ್ ವಿವಿಯಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಸಮಾಜಗಳ ಕುರಿತಾದ ಗೇಟ್ಸ್ ಪ್ರತಿಷ್ಠಾನದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶ್ವ ಆರ್ಥಿಕ ವೇದಿಕೆಯಲ್ಲಿ ಯುವ ಜಾಗತಿಕ ನಾಯಕನಾಗಿ ಅವರು ಹೆಸರಿಸಲ್ಪಟ್ಟಿದ್ದಾರೆ. ಅವರು ಇತ್ತೀಚೆಗೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಶಿಕ್ಷಣ ಹಾಗೂ ಆರೋಗ್ಯ, ವಲಸೆ ಮತ್ತು ಜಾಗತೀಕರಣ ವಿಷಯಗಳ ಕುರಿತಾಗಿ ಸಂಶೋಧನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News