ಎಸ್ತರ್: ಅತ್ಯಂತ ಕಿರಿಯ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತೆ

Update: 2019-10-14 17:03 GMT

 ಸ್ಟಾಕ್‌ಹೋಮ್ (ಸ್ವೀಡನ್), ಅ. 14: ‘‘ಜಾಗತಿಕ ಬಡತನವನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯೋಗಗಳನ್ನು ಮಾಡಿರುವುದಕ್ಕಾಗಿ’’ ಮೂವರು ಅರ್ಥಶಾಸ್ತ್ರಜ್ಞರಿಗೆ ಸೋಮವಾರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.

ಅವರೆಂದರೆ ಮ್ಯಾಸಚೂಸಿಟ್ಸ್ ಇನ್‌ಸ್ಟಿಟ್ಯುಟ್ ಆಫ್ ಟೆಕ್ನಾಲಜಿಯಲ್ಲಿ ಅರ್ಥಶಾಸ್ತ್ರಜ್ಞರಾಗಿರುವ ಭಾರತೀಯ ಅಮೆರಿಕನ್ ಅಭಿಜಿತ್ ಬ್ಯಾನರ್ಜಿ, ಮ್ಯಾಸಚೂಸಿಟ್ಸ್ ಇನ್‌ಸ್ಟಿಟ್ಯುಟ್ ಆಫ್ ಟೆಕ್ನಾಲಜಿಯಲ್ಲೇ ಅರ್ಥಶಾಸ್ತ್ರಜ್ಞೆಯಾಗಿರುವ ಎಸ್ತರ್ ಡಫ್ಲೊ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರಜ್ಞರಾಗಿರುವ ಮೈಕಲ್ ಕ್ರೆಮರ್.

46 ವರ್ಷದ ಡಫ್ಲೊ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿರುವವರಲ್ಲೇ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ ಹಾಗು ಎರಡನೇ ಮಹಿಳೆಯಾಗಿದ್ದಾರೆ.

ಪ್ರಶಸ್ತಿ ಘೋಷಣೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಫ್ಲೊ, ‘‘ನಾನೊಂದು ನಿಮಗೆ ಸತ್ಯವನ್ನು ಹೇಳಬೇಕಾಗಿದೆ.. ಜಾಗತಿಕ ಬಡತನ ನಿವಾರಣೆಯಲ್ಲಿ ಕೆಲಸ ಮಾಡುತ್ತಿರುವ ನೂರಾರು ಸಂಶೋಧಕರಲ್ಲಿ ನಾವೂ ಮೂವರು’’ ಎಂದು ಹೇಳಿದರು.

ಬಡತನ ಕುರಿತ ಬೃಹತ್ ಪ್ರಶ್ನೆಗಳನ್ನು ಸಣ್ಣ ಸಂಶೋಧನಾ ಪ್ರಶ್ನೆಗಳನ್ನಾಗಿ ವಿಭಜಿಸಿರುವುದಕ್ಕಾಗಿ ನೊಬೆಲ್ ಸಮಿತಿಯು ಈ ಮೂವರಿಗೆ ಪ್ರಶಸ್ತಿ ನೀಡಿದೆ.

1990ರ ದಶಕದಲ್ಲಿ ಶೈಕ್ಷಣಿಕ ಫಲಿತಾಂಶಗಳನ್ನು ಉತ್ತಮಪಡಿಸುವುದಕ್ಕಾಗಿ ಕ್ರೆಮರ್ ಪಸ್ಚಿಮ ಕೆನ್ಯದಲ್ಲಿ ಹಲವಾರು ಕ್ಷೇತ್ರ ಪರಯೋಗಗಳನ್ನು ಮಾಡಿದರು. ಬಳಿಕ, ಬ್ಯಾನರ್ಜಿ ಮತ್ತು ಡಫ್ಲೊ ಇಂಥದೇ ಅಧ್ಯಯನಗಳನ್ನು ಮಾಡಿದರು. ಅವರ ಸಂಶೋಧನೆ ವಿಧಾನಗಳು ಈಗ ಅಭಿವೃದ್ಧಿ ಆರ್ಥಿಕತೆಯಲ್ಲಿ ಮಹತ್ವದ ಘಟಕಗಳಾಗಿವೆ ಎಂದು ನೊಬೆಲ್ ಸಮಿತಿ ಹೇಳಿದೆ.

ಬೆಲೆಯಲ್ಲಿ ಸಣ್ಣ ವ್ಯತ್ಯಾಸವೂ ದೊಡ್ಡ ಪರಿಣಾಮ ಬೀರಬಲ್ಲದು

ಬೆಲೆಗಳಲ್ಲಿ ಸಣ್ಣ ವ್ಯತ್ಯಾಸವಾದರೂ ತೀರಾ ಬೇರೆಯದೇ ಆದ ಆರೋಗ್ಯ ಫಲಿತಾಂಶಗಳಿಗೆ ಕಾರಣವಾಗಬಹುದು ಎಂಬುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.

 ದೇಹದಿಂದ ಹುಳಗಳನ್ನು ಹೊರಹಾಕುವ ಗುಳಿಗೆಗಳು ಉಚಿತವಾಗಿ ದೊರೆಯುತ್ತಿದ್ದಾಗ 75 ಶೇಕಡದಷ್ಟು ಬಡ ಹೆತ್ತವರು ತಮ್ಮ ಮಕ್ಕಳಿಗೆ ಈ ಗುಳಿಗೆಗಳನ್ನು ನೀಡುತ್ತಿದ್ದರು. ಆದರೆ, ಈ ಗುಳಿಗೆಗಳಿಗೆ ಒಂದು ಡಾಲರ್‌ಗಿಂತಲೂ ಕಡಿಮೆ ಬೆಲೆ ನಿಗದಿಪಡಿಸಿದಾಗ ಕೇವಲ 18 ಶೇಕಡದಷ್ಟು ಹೆತ್ತವರು ತಮ್ಮ ಮಕ್ಕಳಿಗೆ ಆ ಔಷಧಿ ನೀಡಿದರು ಎನ್ನುವುದನ್ನು ಕ್ರೆಮರ್ ಪತ್ತೆಹಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News