ವಿಭಜನೆಗೆ ಯತ್ನಿಸಿದರೆ ದೇಹ ಚೂರು ಚೂರು, ಎಲುಬು ಪುಡಿ ಪುಡಿ!

Update: 2019-10-14 17:25 GMT

ಬೀಜಿಂಗ್, ಅ. 14: ಚೀನಾವನ್ನು ವಿಭಜಿಸುವ ಯಾವುದೇ ಪ್ರಯತ್ನಗಳು ನಡೆದರೆ, ದೇಹಗಳು ಚೂರು ಚೂರಾಗುತ್ತವೆ ಮತ್ತು ಎಲುಬುಗಳು ಪುಡಿಪುಡಿಯಾಗುತ್ತವೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಎಚ್ಚರಿಸಿದ್ದಾರೆ.

ಕಳೆದ ವಾರಾಂತ್ಯದಲ್ಲಿ ನೇಪಾಳ ಪ್ರವಾಸದಲ್ಲಿದ್ದ ವೇಳೆ ಚೀನಾ ಅಧ್ಯಕ್ಷರು ಈ ಕಟು ಎಚ್ಚರಿಕೆ ನೀಡಿದ್ದಾರೆ ಎಂದು ಚೀನಾ ವಿದೇಶ ಸಚಿವಾಲಯವು ರವಿವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಚೀನಾದ ಭಾಗವಾಗಿರುವ ಹಾಂಕಾಂಗ್‌ನಲ್ಲಿ ನಾಲ್ಕು ತಿಂಗಳಿನಿಂದ ಚೀನಾ-ವಿರೋಧಿ ಚಳವಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ ಎಂದು ಭಾವಿಸಲಾಗಿದೆ.

‘‘ಚೀನಾದ ಯಾವುದೇ ವಲಯವನ್ನು ಪ್ರತ್ಯೇಕಿಸಲು ಯಾರಾದರೂ ಪ್ರಯತ್ನಿಸಿದರೆ ಅವರು ನಾಶವಾಗುತ್ತಾರೆ; ಅವರ ದೇಹಗಳು ಚೂರು ಚೂರಾಗುತ್ತವೆ ಹಾಗೂ ಎಲುಬುಗಳು ಪುಡಿಪುಡಿಯಾಗುತ್ತವೆ’’ ಎಂದು ಅಧ್ಯಕ್ಷರು ಹೇಳಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

‘‘ಚೀನಾವನ್ನು ವಿಭಜಿಸುವ ಪ್ರಯತ್ನಗಳನ್ನು ಬೆಂಬಲಿಸುವ ಯಾವುದೇ ಬಾಹ್ಯ ಶಕ್ತಿಗಳು ಭ್ರಮೆಯಲ್ಲಿವೆ ಎಂಬುದಾಗಿ ಚೀನಿ ಜನತೆ ಭಾವಿಸುತ್ತಾರೆ’’ ಎಂದು ಅವರು ಹೇಳಿದ್ದಾರೆ.

ಜಿನ್‌ಪಿಂಗ್ ಯಾವುದೇ ಪ್ರದೇಶವನ್ನು ಹೆಸರಿಸಿಲ್ಲವಾದರೂ, ಹಾಂಕಾಂಗ್‌ನಲ್ಲಿ ರವಿವಾರ ಪ್ರಜಾಪ್ರಭುತ್ವಪರ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಮತ್ತೊಮ್ಮೆ ಘರ್ಷಣೆ ನಡೆದ ಹಾಗೂ ಸ್ವಯಂ ಆಡಳಿತದ ತೈವಾನ್‌ನಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News