ಆರ್‌ಟಿಐ: ‘ಅಗತ್ಯ’ ಕಮ್ಮಿಯಾಗಿಲ್ಲ, ‘ನಂಬಿಕೆ’ ಕಮ್ಮಿಯಾಗಿದೆ

Update: 2019-10-15 04:19 GMT

ಒಂದು ದೇಶವಿತ್ತು. ಕ್ರಿಮಿನಲ್ ಪ್ರಕರಣಗಳಿಗೆ ಅದು ಕುಖ್ಯಾತಿಯನ್ನು ಪಡೆದಿತ್ತು. ಪ್ರತಿದಿನ ಪೊಲೀಸ್ ಠಾಣೆಗಳಲ್ಲಿ ಸಾವಿರಾರು ಪ್ರಕರಣಗಳು ದಾಖಲಾಗುತ್ತಿದ್ದವು. ಇದನ್ನು ತಡೆಯಲು ಏನಾದರೂ ಮಾಡಲೇ ಬೇಕು ಎಂದು ಅಲ್ಲಿನ ಪ್ರಧಾನಮಂತ್ರಿ ನಿರ್ಧರಿಸಿದರು. ಪೊಲೀಸ್ ಠಾಣೆಗಳಿಗೆ ಬಿಗಿಬಂದೋಬಸ್ತ್ ನೀಡಲಾಯಿತು. ಅಂದರೆ ಪೊಲೀಸ್ ಠಾಣೆಗೆ ಜನರು ದೂರು ನೀಡಲು ಹೋಗುವುದಕ್ಕೆ ಸಾಧ್ಯವಾಗದಂತೆ ಬಗೆ ಬಗೆಯ ಕಾನೂನನ್ನು ಜಾರಿಗೆ ತರಲಾಯಿತು. ಪೊಲೀಸರ ಸಂಖ್ಯೆಗಳನ್ನು ಭಾರೀ ಪ್ರಮಾಣದಲ್ಲಿ ಇಳಿಸಲಾಯಿತು. ಯಾವುದೇ ದೂರು ನೀಡುವುದಕ್ಕೆ ಜನಸಾಮಾನ್ಯರಿಗೆ ಭಾರೀ ಶುಲ್ಕಗಳನ್ನು ವಿಧಿಸಲಾಯಿತು. ದೂರು ನೀಡಿದರೂ ಅದರ ಕುರಿತಂತೆ ಕ್ರಮ ತೆಗೆದುಕೊಳ್ಳಲು ಪೊಲೀಸರೂ ಹಿಂಜರಿಯುತ್ತಿದ್ದರು. ಒಂದು ವೇಳೆ ಸುಳ್ಳು ದೂರು ಎಂದು ಸಾಬೀತಾದರೆ ದೂರು ನೀಡಿದವರ ಮೇಲೆಯೇ ಕ್ರಮ ತೆಗೆದುಕೊಳ್ಳುವ ಕಾನೂನು ಜಾರಿಗೊಳಿಸಲಾಯಿತು. ಇದೀಗ ಪೊಲೀಸ್ ಠಾಣೆಗಳಿಗೆ ದೂರು ನೀಡುವವರ ಸಂಖ್ಯೆ ಇಳಿಮುಖವಾಗ ತೊಡಗಿತು. ಪೊಲೀಸ್ ದೂರು ದಾಖಲಾಗದೇ ಇರುವುದರಿಂದ ಮಾಧ್ಯಮಗಳಲ್ಲಿ ಅಪರಾಧ ಸುದ್ದಿಗಳು ಪ್ರಕಟವಾಗುತ್ತಿರಲಿಲ್ಲ. ಒಂದು ದಿನ ಆ ದೇಶದ ಪ್ರಧಾನಿ ಪತ್ರಿಕಾಗೋಷ್ಠಿ ಕರೆದು ‘‘ದೇಶದಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗುವುದು ಇಳಿಮುಖವಾಗಿದೆ. ದೇಶ ಅಪರಾಧ ಮುಕ್ತ ದೇಶವಾಗಿ ಪರಿಣಮಿಸಿದೆ. ಆದುದರಿಂದ ಜನರು ದೂರು ಸಲ್ಲಿಸುವುದಕ್ಕೆ ಮುಂದಾಗುತ್ತಿಲ್ಲ’’ ಎಂದು ಪ್ರಕಟನೆ ನೀಡಿದರು. ಮೇಲಿನ ಕತೆ ಯಾವುದೋ ಹೊರ ದೇಶದ ಕತೆಯಲ್ಲ. ನಮ್ಮದೇ ದೇಶದ ಕತೆ. ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ ಕೇಂದ್ರ ಮಾಹಿತಿ ಆಯೋಗದ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡುತ್ತಾ ಒಂದು ಸಂತೋಷದ ಸುದ್ದಿಯನ್ನು ಬಹಿರಂಗಪಡಿಸಿದರು. ‘‘ಸರಕಾರದ ಪಾರದರ್ಶಕ ಕ್ರಮದಿಂದಾಗಿ ಜನರು ಆರ್‌ಟಿಐ ಅರ್ಜಿ ದಾಖಲಿಸುವ ಅಗತ್ಯವೇ ಕಡಿಮೆಯಾಗಿದೆ’’ ಎಂದು ಅವರು ತಿಳಿಸಿದರು. ‘‘ಪ್ರಧಾನಿ ಮೋದಿ ಸರಕಾರ ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಂಡಿದ್ದು, ಸರಕಾರಿ ವಲಯದ ಎಲ್ಲಾ ಕಾರ್ಯಗಳ ಮಾಹಿತಿಯನ್ನು ಜನತೆಗೆ ಶೀಘ್ರ ತಲುಪಿಸುವ ಉಪಕ್ರಮ ಆರಂಭಿಸಿದೆ. ಆದ್ದರಿಂದ ಜನರು ಆರ್‌ಟಿಐ ದಾಖಲಿಸುವ ಅಗತ್ಯವೇ ಇಲ್ಲದಂತಾಗಿದೆ’’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಮಿತ್ ಶಾ ಹೇಳಿದ್ದು ನಿಜ. ಜನರು ಆರ್‌ಟಿಐ ದಾಖಲಿಸುವುದರಿಂದ ಹಿಂಜರಿಯುತ್ತಿದ್ದಾರೆ. ಆರ್‌ಟಿಐ ದಾಖಲಿಸುವವರ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಆದರೆ ಅಮಿತ್ ಶಾ ಹೇಳಿದಂತೆ, ಜನರು ಎಲ್ಲವೂ ಪಾರದರ್ಶಕವಾಗಿರುವುದರಿಂದ ಸಂತೃಪ್ತರಾಗಿದ್ದಾರೆ ಎಂದು ಅರ್ಥವಲ್ಲ. ಆರ್‌ಟಿಐಯನ್ನು ಜನರು ಬಳಸಿ ಸರಕಾರಕ್ಕೆ ತೊಂದರೆ ನೀಡಬಾರದು ಎನ್ನುವ ಕಾರಣಕ್ಕಾಗಿ, ಆರ್‌ಟಿಐಯ ಒಂದೊಂದೇ ಬಾಗಿಲನ್ನು ಸರಕಾರ ಮುಚ್ಚುತ್ತಾ ಬಂದಿದೆ. ಅದರ ಭಾಗವಾಗಿಯೇ, ಇತ್ತೀಚೆಗೆ ಆರ್‌ಟಿಐ ಕಾಯ್ದೆಯನ್ನು ತಿದ್ದುಪಡಿ ಮಾಡಿತು. ಪ್ರಶ್ನಿಸುವ ಹಕ್ಕನ್ನೇ ನಿರಾಕರಿಸುತ್ತಿರುವ ಈ ದಿನಗಳಲ್ಲಿ ಆರ್‌ಟಿಐ ಜನಸಾಮಾನ್ಯರ ಪಾಲಿಗೆ ಒಂದು ಪ್ರಬಲ ಅಸ್ತ್ರವೆನ್ನುವುದು ಸರಕಾರಕ್ಕೆ ಚೆನ್ನಾಗಿ ಗೊತ್ತಿದೆ. ನೋಟು ನಿಷೇಧ, ರಫೇಲ್ ಹಗರಣ ಸೇರಿದಂತೆ ಹಲವು ಮಹತ್ವದ ಪ್ರಕರಣಗಳಲ್ಲಿ ಸರಕಾರ ಜನರನ್ನು ಸಂಪೂರ್ಣ ಕತ್ತಲಲ್ಲಿಟ್ಟಿದೆ. ಅಷ್ಟೇ ಅಲ್ಲ, ಆರ್‌ಟಿಐಯಿಂದಲೂ ಮಾಹಿತಿ ದೊರಕದಂತಹ ಸನ್ನಿವೇಶ ನಿರ್ಮಾಣ ಮಾಡಿದೆ. ಜೊತೆಗೆ ಆರ್‌ಟಿಐ ಕಾರ್ಯಕರ್ತರು ಅತ್ಯಂತ ಅಪಾಯದಲ್ಲಿ ಬದುಕು ಸವೆಸುವ ದಿನಗಳು ಇವು. ಕಳೆದ ಐದು ವರ್ಷಗಳಿಂದ ಆರ್‌ಟಿಐ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಾಳಿಗಳು ಹೆಚ್ಚುತ್ತಿವೆ ಎನ್ನುವುದನ್ನು ಈಗಾಗಲೇ ವರದಿ ತಿಳಿಸಿದೆ. ಇಂದು ನಮ್ಮ ಬೀದಿಗಳನ್ನು ಸಂಸ್ಕೃತಿ ರಕ್ಷಕರ ವೇಷದಲ್ಲಿ ಗೂಂಡಾಗಳು, ರೌಡಿಗಳು ಆಳುತ್ತಿದ್ದಾರೆ. ಸ್ವತಃ ಬಿಜೆಪಿಯೊಳಗಿರುವ ನಾಯಕರೇ ‘ನೆರೆ ಪರಿಹಾರದಂತಹ ವಿಷಯಗಳಲ್ಲಿ’ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡರೆ ದೇಶದ್ರೋಹದ ಪಟ್ಟ್ಟವನ್ನು ಕಟ್ಟಿಕೊಳ್ಳಬೇಕಾದಂತಹ ಸ್ಥಿತಿ ಇರುವಾಗ, ಆರ್‌ಟಿಐ ಮೂಲಕ ಮಾಹಿತಿ ಪಡೆದು ಕೇಂದ್ರ ಸರಕಾರದ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವ ಆರ್‌ಟಿಐ ಕಾರ್ಯಕರ್ತರನ್ನು ಬಿಟ್ಟಾರೆಯೇ? ಆರ್‌ಟಿಐ ಕಾರ್ಯಕರ್ತರನ್ನು ಪೊಲೀಸ್ ಇಲಾಖೆಯಂತಹ ಸಂಸ್ಥೆಗಳ ಮೂಲಕವೇ ಬೆದರಿಸುವ, ಅವರಿಗೆ ಮಾನಸಿಕ ದೌರ್ಜನ್ಯಗಳನ್ನು ನೀಡುವ ಕೆಲಸ ಇಂದು ನಡೆಯುತ್ತಿದೆ. ಇದರ ಜೊತೆಗೆ ಬೇರೆ ಬೇರೆ ನೆಪಗಳಲ್ಲಿ ಮಾಹಿತಿಗಳನ್ನು ನೀಡದಂತೆ ತಡೆಯುವ ಕೆಲಸವೂ ಆಗುತ್ತಿದೆ. ಜೊತೆಗೆ ಆರ್‌ಟಿಐ ಸಂಸ್ಥೆ ಸೂಕ್ತ ಸಿಬ್ಬಂದಿಯ ಕೊರತೆಯನ್ನೂ ಎದುರಿಸುತ್ತಿದೆ.

ಒಂದು ವರದಿಯ ಪ್ರಕಾರ, ದೇಶಾದ್ಯಂತ ಪ್ರತಿ ವರ್ಷ 40ರಿಂದ 60 ಲಕ್ಷ ಅರ್ಜಿಗಳನ್ನು ದಾಖಲಿಸಲಾಗುತ್ತದೆ. ಆದರೆ ಆರ್‌ಟಿಐ ಕಾಯ್ದೆ ಅನುಷ್ಠಾನಗೊಂಡ 14 ವರ್ಷಗಳ ಆನಂತರವೂ ವಿವಿಧ ರಾಜ್ಯಗಳಲ್ಲಿ ಮಾಹಿತಿ ಆಯುಕ್ತರ ಹುದ್ದೆಗಳು ಖಾಲಿಯಿವೆ. ಈ ಬಗ್ಗೆ ಈಗಾಗಲೇ ಸರ್ವೋಚ್ಚ ನ್ಯಾಯಾಲಯ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದೆ. ‘‘ಆರ್‌ಟಿಐ ಕಾಯ್ದೆ ಯಶಸ್ವಿಯಾಗಬೇಕಾದರೆ ತಕ್ಷಣದಿಂದಲೇ ಮಾಹಿತಿ ಆಯುಕ್ತರನ್ನು ನೇಮಿಸಬೇಕು’’ ಎಂದು ಅಭಿಪ್ರಾಯಪಟ್ಟಿತ್ತು. ಆದರೂ ಸರಕಾರ ಈ ವಿಷಯದಲ್ಲಿ ಜಾಗೃತವಾಗಿಲ್ಲ. ಕೇಂದ್ರ ಮಾಹಿತಿ ಆಯೋಗದಲ್ಲಿ ಇನ್ನೂ ನಾಲ್ಕು ಆಯುಕ್ತರ ಹುದ್ದೆಗಳು ಖಾಲಿ ಬಿದ್ದಿವೆ. ರಾಜಸ್ಥಾನ ಮತ್ತು ತಮಿಳುನಾಡಿನಲ್ಲಿಯೂ ಆಯುಕ್ತರ ಸ್ಥಾನವನ್ನು ತುಂಬಲಾಗಿಲ್ಲ. ಹಲವು ರಾಜ್ಯಗಳಲ್ಲಿ ಆಯೋಗಗಳು ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸಿವೆ. ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ಕೇರಳ, ತೆಲಂಗಾಣ, ಒಡಿಶಾ, ಪಶ್ಚಿಮಬಂಗಾಳಗಳಲ್ಲೂ ಅಗತ್ಯಕ್ಕಿಂತ ಕಡಿಮೆ ಆಯುಕ್ತರಿದ್ದಾರೆ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಅರ್ಜಿಗಳು ವಿಲೇವಾರಿಯಾಗದೇ ಉಳಿದಿವೆ. ಮಹಾರಾಷ್ಟ್ರದಲ್ಲಿ ಕಳೆದ ಮಾರ್ಚ್ ತಿಂಗಳ ಒಳಗೆ 46,000 ಅರ್ಜಿಗಳು ವಿಲೇವಾರಿಯಾಗದೆ ಉಳಿದಿವೆ. ಉತ್ತರ ಪ್ರದೇಶದಲ್ಲಿ 51,682, ಕೇರಳದಲ್ಲಿ 15,000, ಒಡಿಶಾದಲ್ಲಿ 11,000...ಹೀಗೆ ವಿಲೇವಾರಿಯಾಗದೆ ಉಳಿದ ಅರ್ಜಿಗಳ ಅಂಕಿಗಳು ಮುಂದುವರಿಯುತ್ತವೆ. ಇಂತಿಷ್ಟು ಸಮಯದ ಒಳಗೆ ಅರ್ಜಿಗಳು ವಿಲೇವಾರಿಯಾಗಬೇಕು ಎನ್ನುವ ಕಾಯ್ದೆಯ ಆದೇಶವನ್ನು ಈ ಮೂಲಕ ಅಣಕವಾಡಲಾಗಿದೆ. ಆಯೋಗದ ಇಂತಹ ಸ್ಥಿತಿಯ ಹಿಂದೆ ರಾಜಕಾರಣಿಗಳ ಕೈವಾಡ ಮೇಲ್ನೋಟಕ್ಕೆ ಗೊತ್ತಾಗಿಬಿಡುತ್ತದೆ. ಅವರಾರಿಗೂ ಆರ್‌ಟಿಐ ಸರಿಯಾಗಿ ಕಾರ್ಯಾಚರಿಸುವುದು ಬೇಕಾಗಿಲ್ಲ. ಯಾಕೆಂದರೆ, ಅದು ಪರಿಣಾಮಕಾರಿಯಾಗಿ ಕಾಯಾಚರಣೆ ನಡೆಸಿದರೆ ರಾಜಕಾರಣಿಗಳ ಅವ್ಯವಹಾರಗಳು, ಸರಕಾರದ ಹಗರಣಗಳು ಹೊರಬೀಳುತ್ತವೆ. ಯಾವ ಸರಕಾರ ತನ್ನ ಅವ್ಯವಹಾರಗಳನ್ನು ಮುಚ್ಚಿಡಲು ಯತ್ನಿಸುತ್ತದೆಯೋ ಆ ಸರಕಾರ ಆರ್‌ಟಿಐಯನ್ನು ದುರ್ಬಲಗೊಳಿಸಲು ಯತ್ನಿಸುತ್ತದೆ. ಕೇಂದ್ರ ಸರಕಾರ ನಿಜಕ್ಕೂ ಪಾರದರ್ಶಕವಾಗಿದೆಯಾದರೆ, ಅದು ಆರ್‌ಟಿಐಯನ್ನು ಯಾಕೆ ಈ ದುಸ್ಥಿತಿಗೆ ತಳ್ಳಿತು ಎನ್ನುವ ಪ್ರಶ್ನೆಗೆ ಮೊದಲು ಅಮಿತ್ ಶಾ ಉತ್ತರಿಸಬೇಕು. ಆರ್‌ಟಿಐಯಲ್ಲಿ ಅರ್ಜಿ ಸಲ್ಲಿಸುವ ಅಗತ್ಯ ಕಮ್ಮಿಯಾಗಿಲ್ಲ, ಬದಲಿಗೆ ಆರ್‌ಟಿಐಯ ಮೇಲೆ ಜನರಿಗೆ ನಂಬಿಕೆ ಕಡಿಮೆಯಾಗಿದೆ ಎನ್ನುವುದನ್ನು ಅಮಿತ್ ಶಾಗೆ ತಿಳಿಸಿಕೊಡುವವರು ಯಾರು?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News