ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ... ಒಳ್ಳೆಯ ಪಾಕತಜ್ಞ...

Update: 2019-10-15 04:07 GMT

ಕೊಲ್ಕತ್ತಾ: ಶಾಲೆಯಲ್ಲಿ ಒಮ್ಮೆಯೂ ಪ್ರಥಮ ರ್ಯಾಂಕ್ ಪಡೆಯದ ಪ್ರತಿಭಾವಂತ ವಿದ್ಯಾರ್ಥಿ; ಅಲ್ಪಸ್ವಲ್ಪ ಕ್ರೀಡಾಪಟು, ಒಳ್ಳೆಯ ಪಾಕತಜ್ಞ; ಅರ್ಥಶಾಸ್ತ್ರಜ್ಞನಾದದ್ದು ಆಕಸ್ಮಿಕ... ನೊಬೆಲ್ ಪ್ರಶಸ್ತಿ ಪಡೆದ ಸುದ್ದಿ ತಿಳಿದ ಬಳಿಕ ಹಿರಿಯ ಮಗ ಅಭಿಜಿತ್ ವಿನಾಯಕ್ ಬ್ಯಾನರ್ಜಿಯನ್ನು ತಾಯಿ ನಿರ್ಮಲಾ (83) ಬಣ್ಣಿಸಿದ್ದು ಹೀಗೆ.

"ನಾನು ಏನು ಹೇಳಲಿ; ಅತೀವ ಸಂತಸವಾಗಿದೆ; ಅದೇ ವೇಳೆ ಸುದ್ದಿ ಕೇಳಿ ಅಚ್ಚರಿಯೂ ಆಯಿತು" ಎಂದು ಬಲ್ಲಿಗಂಜ್ ವರ್ತುಲ ರಸ್ತೆ ಬಳಿಯ  ಫ್ಲಾಟ್‌ನಲ್ಲಿ ವಾಸಿಸುವ ನಿರ್ಮಲಾ ಪ್ರತಿಕ್ರಿಯಿಸಿದರು.

"ಆತ ಪ್ರತಿಭಾವಂತ; ಆದರೆ ಇಂಥ ಎಳೆ ವಯಸ್ಸಿನಲ್ಲಿ ಇಂಥ ದೊಡ್ಡ ಗೌರವ ಸಿಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಇದು ನನಗೆ ಮಾತ್ರವಲ್ಲ; ಇಡೀ ದೇಶಕ್ಕೇ ಹೆಮ್ಮೆಯ ಕ್ಷಣ" ಎಂದು ಬಣ್ಣಿಸಿದರು.

ಗುರುಗ್ರಾಮದಲ್ಲಿರುವ ಕಿರಿಯ ಮಗ ಫೋನ್ ಮಾಡಿ ವಿಷಯ ತಿಳಿಸಿದಾಗ ನಿರ್ಮಲಾ ಓದುತ್ತಿದ್ದರು. "ನಾನು ಟಿವಿ ಆನ್ ಮಾಡಿದೆ; ಕೆಲ ಕ್ಷಣಗಳಲ್ಲೇ ಎಲ್ಲ ಚಾನಲ್‌ಗಳಲ್ಲಿ ಸುದ್ದಿ ಬಿತ್ತರವಾಯಿತು" ಎಂದು ಪತ್ರಕರ್ತರು, ಸಂಬಂಧಿಕರಿಂದ ಸುತ್ತುವರಿದಿದ್ದ ನಿರ್ಮಲಾ ನುಡಿದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಳುಹಿಸಿದ್ದ ಹೂಗುಚ್ಛ ಮತ್ತು ಸಿಹಿತಿಂಡಿಯ ಪೊಟ್ಟಣ ಜತೆಗಿತ್ತು.

ಬಡತನ ನಿರ್ಮೂಲನೆ ಕುರಿತ ಸಂಶೋಧನೆಯ ಹಿಂದಿನ ಸ್ಫೂರ್ತಿಯ ಬಗ್ಗೆ ವಿವರಿಸಿದ ಅವರು, "ಅಭಿಜಿತ್ ಬಾಲ್ಯವನ್ನು ಕಳೆದದ್ದು ಮಹಾನಿರ್ವಾಣ ರಸ್ತೆಯ ಮನೆಯಲ್ಲಿ; ಬಹುಶಃ ಅದು ಆತನಿಗೆ ಅರ್ಥಶಾಸ್ತ್ರ ಮತ್ತು ಬಡತನದ ಬಗ್ಗೆ ಅರ್ಥ ಮಾಡಿಕೊಳ್ಳಲು ನೆರವಾಯಿತು" ಎಂದು ಹೇಳಿದರು.

"ಜಿಮಾ (ಅಭಿಜಿತ್ ಅಡ್ಡ ಹೆಸರು) ತನ್ನ ಬಾಲ್ಯದಲ್ಲಿ ನಮ್ಮ ಮನೆ ಪಕ್ಕದ ಕೊಳಗೇರಿಯ ಬಡ ಮಕ್ಕಳ ಜತೆ ಆಟವಾಡುತ್ತಿದ್ದ. ಬೀದಿ ಆಟಗಳಲ್ಲಿ ತನಗಿಂತ ಅವರು ಒಳ್ಳೆಯ ಸಾಧನೆ ಮಾಡುತ್ತಿದ್ದ ಬಗ್ಗೆ ಅಚ್ಚರಿಪಡುತ್ತಿದ್ದ. ಜತೆಗೆ ಜೀವನದ ಬಗೆಗಿನ ಅವರ ದೃಷ್ಟಿಕೋನದ ಬಗ್ಗೆ ಹೇಳುತ್ತಿದ್ದ" ಎಂದು ನೆನಪಿಸಿಕೊಂಡರು.

ಮರಾಠಿ ಮೂಲದ ನಿರ್ಮಲಾ ಮತ್ತು ಪತಿ ದಿವಂಗತ ದೀಪಕ್ ಬ್ಯಾನರ್ಜಿ ಇಬ್ಬರೂ ಅರ್ಥಶಾಸ್ತ್ರಜ್ಞರು. ನೊಬೆಲ್ ಪುರಸ್ಕೃತ ಅಮರ್ತ್ಯಸೇನ್ ಜತೆಗಿನ ಗಾಢವಾದ ಸಂಬಂಧವನ್ನು ಕೂಡಾ ಅವರು ಮೆಲುಕು ಹಾಕಿಕೊಂಡರು. ಸಾಧ್ಯವಿದ್ದಾಗಲೆಲ್ಲ ಸೇನ್ ಹೇಗೆ ಮಗನಿಗೆ ಮಾರ್ಗದರ್ಶನ ಮಾಡುತ್ತಿದ್ದರು ಎನ್ನುವುದನ್ನೂ ವಿವರಿಸಿದರು. "ಅಭಿಜಿತ್ ಎರಡು ವರ್ಷದವನಾಗಿದ್ದಾಗಿನಿಂದಲೂ ಅಮರ್ತ್ಯಸೇನ್ ಗೆ ಪರಿಚಿತ. ಈಗ ಕೂಡಾ ಆಗ್ಗಾಗ್ಗೆ ಭೇಟಿ ಮಾಡುತ್ತಾರೆ" ಎಂದು ಹೇಳಿದರು.

ಮಗನ ಇನ್ನೊಂದು ಮುಖವನ್ನು ಪರಿಚಯಿಸಿದ ಅವರು, "ಆತ ನಿಷ್ಠಾತ ಪಾಕಶಾಸ್ತ್ರಜ್ಞ. ಎಳೆ ವಯಸ್ಸಿನಿಂದಲೂ ಅಡುಗೆಯೆಂದರೆ ಪ್ರೀತಿ. ಮರಾಠಿ ಹಾಗೂ ಬಂಗಾಲಿ ಖಾದ್ಯ ಎರಡನ್ನೂ ಚೆನ್ನಾಗಿ ಮಾಡುತ್ತಾನೆ. ಸಿಹಿತಿನಿಸುಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಈ ವರ್ಷ ಜೂನ್‌ನಲ್ಲಿ ಮನೆಗೆ ಬಂದಿದ್ದಾಗ ನನಗೆ ಹಾಗೂ ಸ್ನೇಹಿತರಿಗಾಗಿ ಅಡುಗೆ ಮಾಡಿದ್ದ" ಎಂದು ನೆನಪಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News