ಇಂದಿನಿಂದ ಡೆನ್ಮಾರ್ಕ್ ಓಪನ್ ಬ್ಯಾಂಡ್ಮಿಂಟನ್ ಟೂರ್ನಿ: ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿ ಸಿಂಧು ಬಳಗ

Update: 2019-10-15 05:17 GMT

ಒಡೆನ್ಸ್, ಅ.14: ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಮಂಗಳವಾರ ಇಲ್ಲಿ ಆರಂಭವಾಗಲಿರುವ 775,000 ಯುಎಸ್ ಡಾಲರ್ ಬಹುಮಾನ ಮೊತ್ತದ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ತನ್ನ ಅನಿಶ್ಚಿತ ಫಾರ್ಮ್‌ನ್ನು ಹೋಗಲಾಡಿಸಿ, ತನ್ನ ಮೊದಲಿನ ಲಯ ಕಂಡುಕೊಳ್ಳುವತ್ತ ಚಿತ್ತವಿರಿಸಿದ್ದಾರೆ.

ಆಗಸ್ಟ್‌ನಲ್ಲಿ ವಿಶ್ವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಬಳಿಕ ಸಿಂಧು ಕಳೆದ ತಿಂಗಳು ಕ್ರಮವಾಗಿ ಚೀನಾ ಓಪನ್ ಹಾಗೂ ಕೊರಿಯಾ ಓಪನ್ ಟೂರ್ನಿಯಲ್ಲಿ ಮೊದಲ ಹಾಗೂ ಎರಡನೇ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು.

 ಈ ವರ್ಷ ಬಿಡಬ್ಲುಎಫ್ ವರ್ಲ್ಡ್ ಟೂರ್ ಪ್ರಶಸ್ತಿಯನ್ನು ಜಯಿಸದ ವಿಶ್ವದ ನಂ.6ನೇ ಆಟಗಾರ್ತಿ ಸಿಂಧು ವರ್ಲ್ಡ್ ಟೂರ್ ಸೂಪರ್ 750 ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಇಂಡೋನೇಶ್ಯದ ಗ್ರೆಗೊರಿಯಾ ಮರಿಸ್ಕಾರನ್ನು ಎದುರಿಸಲಿದ್ದಾರೆ.

 ಸಿಂಧು ವಿಶ್ವದ ನಂ.16ನೇ ಆಟಗಾರ್ತಿಯ ವಿರುದ್ಧ ಈ ತನಕ ಆಡಿರುವ ಎಲ್ಲ 5 ಪಂದ್ಯಗಳಲ್ಲಿ ಜಯ ಸಾಧಿಸಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿದ್ದಾರೆ.

ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ವಿಶ್ವದ ನಂ.8ನೇ ಆಟಗಾರ್ತಿ ಸೈನಾ ನೆಹ್ವಾಲ್ ಜನವರಿಯಲ್ಲಿ ಇಂಡೋನೇಶ್ಯ ಮಾಸ್ಟರ್ಸ್ ಪ್ರಶಸ್ತಿ ಗೆದ್ದ ಬಳಿಕ ದೊಡ್ಡ ಸಾಧನೆ ಮಾಡಿಲ್ಲ.

 ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಸೈನಾ ಚೀನಾ ಹಾಗೂ ಕೊರಿಯಾ ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿ ಸೋತಿದ್ದರು. ಕಳೆದ ಆವೃತ್ತಿಯ ಡೆನ್ಮಾರ್ಕ್ ಓಪನ್‌ನಲ್ಲಿ ಫೈನಲ್ ತಲುಪಿದ್ದ ಸೈನಾ 8ನೇ ಶ್ರೇಯಾಂಕ ಪಡೆದಿದ್ದು, ಮೊದಲ ಸುತ್ತಿನಲ್ಲಿ ಜಪಾನ್‌ನ ಸಯಾಕಾ ಟಕಹಶಿ ಅವರನ್ನು ಎದುರಿಸಲಿದ್ದಾರೆ. ವಿಶ್ವದ ನಂ.22ನೇ ಆಟಗಾರ್ತಿ ಟಕಹಶಿ ಆಗಸ್ಟ್‌ನಲ್ಲಿ ನಡೆದ ಥಾಯ್ಲೆಂಡ್ ಓಪನ್‌ನಲ್ಲಿ ಸೈನಾರನ್ನು ಸೋಲಿಸಿದ್ದರು.

ಮಂಡಿ ನೋವಿನ ಸಮಸ್ಯೆಯಿಂದಾಗಿ ಚೀನಾ ಹಾಗೂ ಕೊರಿಯಾ ಓಪನ್‌ನಿಂದ ದೂರ ಉಳಿದಿದ್ದ ಮಾಜಿ ಚಾಂಪಿಯನ್ ಕೆ.ಶ್ರೀಕಾಂತ್ ಸಕಾರಾತ್ಮಕ ಆರಂಭದ ನಿರೀಕ್ಷೆಯಲ್ಲಿದ್ದು, ತನ್ನ ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ಆ್ಯಂಡರ್ಸ್ ಅಂಟೊನ್‌ಸೆನ್ ಸವಾಲು ಎದುರಿಸಲಿದ್ದಾರೆ.

ಈಗ ನಾಲ್ಕನೇ ರ್ಯಾಂಕಿನಲ್ಲಿರುವ ಅಂಟೊನ್‌ಸೆನ್ ಈ ವರ್ಷ ಇಂಡೋನೇಶ್ಯ ಮಾಸ್ಟರ್ಸ್, ಬಾರ್ಸಿಲೋನ ಸ್ಪೇನ್ ಮಾಸ್ಟರ್ಸ್, ಯುರೋಪಿಯನ್ ಗೇಮ್ಸ್‌ನಲ್ಲಿ ಜಯ ಸಾಧಿಸಿದ್ದರು.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದ ಬಿ.ಸಾಯಿ ಪ್ರಣೀತ್ ಲೆಜೆಂಡರಿ ಲಿನ್ ಡಾನ್‌ರಿಂದ ಕಠಿಣ ಸ್ಪರ್ಧೆ ಎದುರಿಸುವ ಸಾಧ್ಯತೆಯಿದೆ. ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಕಶ್ಯಪ್ ಈ ವರ್ಷ ಸಾಧಾರಣ ಫಾರ್ಮ್ ನಲ್ಲಿದ್ದಾರೆ.

ಕಶ್ಯಪ್ ಇಂಡಿಯಾ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದು, ಕೊರಿಯಾ ಓಪನ್‌ನಲ್ಲಿ ಅಂತಿಮ-4ರ ಘಟ್ಟ ತಲುಪಿದ್ದರು. 33ರ ಹರೆಯದ ಕಶ್ಯಪ್ ಥಾಯ್ಲೆಂಡ್‌ನ ಸಿಥಿಕೊಮ್‌ರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ.

ಥಾಯ್ಲೆಂಡ್ ಓಪನ್ ಚಾಂಪಿಯನ್ ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಕೊರಿಯಾದ ಕಿಮ್ ಜಿ ಜುಂಗ್ ಹಾಗೂ ಲೀ ಯಾಂಗ್ ಡೇ ಅವರನ್ನು ಎದುರಿಸಲಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು ವಿಜೇತ ಅಶ್ವಿನಿ ಪೊನ್ನಪ್ಪ ಹಾಗೂ ಎನ್.ಸಿಕ್ಕಿ ರೆಡ್ಡಿ ಮಹಿಳೆಯರ ಡಬಲ್ಸ್ ನಲ್ಲಿ ಅಗ್ರ ಶ್ರೇಯಾಂಕದ ಮಯು ಮಟ್ಸುಮೊಟೊ ಹಾಗೂ ವಕಾನ ನಗಹರಾರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News