ವಿಶ್ವಕಪ್ ಫೈನಲ್‌ನಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಬೌಂಡರಿ ಎಣಿಕೆ ನಿಯಮ ರದ್ದುಪಡಿಸಿದ ಐಸಿಸಿ

Update: 2019-10-15 05:32 GMT

ದುಬೈ, ಅ.15: ಈ ವರ್ಷದ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಬೌಂಡರಿ ಎಣಿಕೆ ನಿಯಮವನ್ನು ರದ್ದುಪಡಿಸಲು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಸೋಮವಾರ ದುಬೈನಲ್ಲಿ ನಡೆದ ತನ್ನ ಮಂಡಳಿಯ ಸಭೆಯಲ್ಲಿ ನಿರ್ಧರಿಸಿದೆ.

ಇಂಗ್ಲೆಂಡ್‌ನ ನಡೆದಿದ್ದ ವಿಶ್ವಕಪ್ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಸೂಪರ್ ಓವರ್ ಪಂದ್ಯವೂ ಟೈನಲ್ಲಿ ಕೊನೆಗೊಂಡಾಗ ಆತಿಥೇಯ ಇಂಗ್ಲೆಂಡ್ ತಂಡವನ್ನು ಬೌಂಡರಿ ಎಣಿಕೆ ನಿಯಮದ ಆಧಾರದಲ್ಲಿ ಚಾಂಪಿಯನ್ ತಂಡವೆಂದು ಘೋಷಿಸಲಾಗಿತ್ತು. ಇಂಗ್ಲೆಂಡ್ ತಂಡ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್‌ಗಿಂತ ಹೆಚ್ಚು ಬೌಂಡರಿಗಳನ್ನು ಗಳಿಸಿತ್ತು.

ಐಸಿಸಿ ಟೂರ್ನಿಗಳಲ್ಲಿ ಫಲಿತಾಂಶವನ್ನು ನಿರ್ಧರಿಸಲು ಸೂಪರ್ ಓವರ್‌ಗಳನ್ನು ಬಳಸುವುದನ್ನು ಮುಂದುವರಿಸಲು ಮುಖ್ಯ ಕಾರ್ಯಕಾರಿ ಸಮಿತಿ ಸಮ್ಮತಿ ನೀಡಿದೆ. ಏಕದಿನ ಹಾಗೂ ಟ್ವೆಂಟಿ-20 ವಿಶ್ವಕಪ್‌ನ ಎಲ್ಲ ಪಂದ್ಯಗಳ ಕುತೂಹಲಕಾರಿ ಅಂತ್ಯಕ್ಕೆ ಸೂಪರ್ ಓವರ್ ಅಗತ್ಯವಿದೆ ಎಂದು ಕ್ರಿಕೆಟ್ ಸಮಿತಿ ಹಾಗೂ ಸಿಇಸಿ ಅಭಿಪ್ರಾಯಪಟ್ಟಿದೆ ಎಂದು ಐಸಿಸಿ ತಿಳಿಸಿದೆ.

  ಗ್ರೂಪ್ ಹಂತದ ಪಂದ್ಯಗಳಲ್ಲಿ ಸೂಪರ್ ಓವರ್ ಟೈನಲ್ಲಿ ಅಂತ್ಯಗೊಂಡರೆ ಪಂದ್ಯವೂ ಟೈ ಆಗಲಿದೆ. ಸೆಮಿ ಫೈನಲ್ ಹಾಗೂ ಫೈನಲ್‌ನಲ್ಲಿ ಸೂಪರ್ ಓವರ್ ನಿಯಮದಲ್ಲಿ ಒಂದು ಬದಲಾವಣೆ ಮಾಡಲಾಗುತ್ತದೆ. ಒಂದು ತಂಡ ಎದುರಾಳಿ ತಂಡಕ್ಕಿಂತ ಹೆಚ್ಚು ರನ್ ಗಳಿಸುವ ತನಕ ಸೂಪರ್ ಓವರ್ ಪುನರಾವರ್ತನೆಯಾಗಲಿದೆ ಎಂದು ಐಸಿಸಿ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News