ಟರ್ಕಿಯ ಆರ್ಥಿಕತೆಯನ್ನು ನಾಶಪಡಿಸಲು ಸಂಪೂರ್ಣ ಸಿದ್ಧ: ಟ್ರಂಪ್ ಘೋಷಣೆ

Update: 2019-10-15 17:56 GMT

ವಾಶಿಂಗ್ಟನ್, ಅ. 15: ಕುರ್ದ್ ಬಂಡುಕೋರರ ವಿರುದ್ಧ ಉತ್ತರ ಸಿರಿಯದಲ್ಲಿ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಟರ್ಕಿಯ ವಿರುದ್ಧ ಅಮೆರಿಕ ಮಂಗಳವಾರ ದಿಗ್ಬಂಧನಗಳನ್ನು ವಿಧಿಸಿದೆ.

ಈ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಟರ್ಕಿಯನ್ನು ಒತ್ತಾಯಿಸಿರುವ ಅಮೆರಿಕ, ನ್ಯಾಟೊ ಸದಸ್ಯ ದೇಶ ಟರ್ಕಿಯು ನಾಗರಿಕರ ಜೀವಗಳನ್ನು ಅಪಾಯಕ್ಕೆ ಗುರಿಪಡಿಸುತ್ತಿದೆ ಹಾಗೂ ಐಸಿಸ್ ಭಯೋತ್ಪಾದಕರು ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಿದೆ ಎಂದು ಆರೋಪಿಸಿದೆ.

ಈಶಾನ್ಯ ಸಿರಿಯದ ಕೆಲವು ಭಾಗಗಳಿಗೆ ಸಿರಿಯ ಸೈನಿಕರು ಹಲವು ವರ್ಷಗಳ ಬಳಿಕ ಮೊದಲ ಬಾರಿಗೆ ಮರಳಿದ ಬಳಿಕ ಈ ಬೆಳವಣಿಗೆ ನಡೆದಿದೆ. ಉತ್ತರ ಸಿರಿಯದಿಂದ ಅಮೆರಿಕ ಪಡೆಗಳು ಹಿಂದೆಗೆದ ಬಳಿಕ, ತಮ್ಮನ್ನು ಟರ್ಕಿ ಸೇನೆಯ ಆಕ್ರಮಣದಿಂದ ಸಂರಕ್ಷಿಸಿಕೊಳ್ಳುವುದಕ್ಕಾಗಿ ಕುರ್ದ್ ಬಂಡುಕೋರರು ಸಿರಿಯ ಸೇನೆಯನ್ನು ಆಮಂತ್ರಿಸಿದ್ದಾರೆ.

ಅಧಿಕೃತವಾಗಿ ಅಮೆರಿಕದ ಮಿತ್ರನೇ ಆಗಿರುವ ದೇಶವೊಂದರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಅಸಾಧಾರಣ ಕ್ರಮವನ್ನು ತೆಗೆದುಕೊಂಡಿದ್ದಾರೆ. ಐಸಿಸ್ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕುರ್ದ್ ಹೋರಾಟಗಾರರನ್ನು ನಡು ನೀರಿನಲ್ಲಿ ಕೈಬಿಟ್ಟಿರುವುದಕ್ಕಾಗಿ ಟ್ರಂಪ್ ಸ್ವದೇಶದಲ್ಲಿ ಭಾರೀ ಟೀಕೆಗೆ ಒಳಗಾದ ಬಳಿಕ ಅವರು ಈ ಕ್ರಮ ತೆಗೆದುಕೊಂಡಿದ್ದಾರೆ.

‘‘ಟರ್ಕಿ ನಾಯಕರು ಈ ಅಪಾಯಕಾರಿ ಮತ್ತು ವಿನಾಶಕಾರಿ ದಾರಿಯಲ್ಲಿ ಮುಂದುವರಿದರೆ ಟರ್ಕಿಯ ಆರ್ಥಿಕತೆಯನ್ನು ತಕ್ಷಣವೇ ನಾಶಪಡಿಸಲು ನಾನು ಸಂಪೂರ್ಣವಾಗಿ ಸಿದ್ಧನಾಗಿದ್ದೇನೆ’’ ಎಂದು ಟ್ರಂಪ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಐಸಿಸ್ ಉಗ್ರರು ಪರಾರಿಯಾಗಲು ಬಿಡುವುದಿಲ್ಲ: ಎರ್ದೊಗಾನ್

ಇಸ್ತಾಂಬುಲ್ (ಟರ್ಕಿ), ಅ. 15: ಉತ್ತರ ಸಿರಿಯದಿಂದ ಯಾವುದೇ ಐಸಿಸ್ ಉಗ್ರರು ಪರಾರಿಯಾಗಲು ಬಿಡುವುದಿಲ್ಲ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಮಂಗಳವಾರ ಪ್ರಕಟಗೊಂಡ ಸಂಪಾದಕೀಯವೊಂದರಲ್ಲಿ ಪಣ ತೊಟ್ಟಿದ್ದಾರೆ.

ಈ ವಲಯದಲ್ಲಿ ಟರ್ಕಿ ಸೇನೆಯು ಕುರ್ದಿಶ್ ಹೋರಾಟಗಾರರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ, ಐಸಿಸ್ ಉಗ್ರರು ತಪ್ಪಿಸಿಕೊಂಡು ಹೋಗಬಹುದು ಎಂಬ ಆತಂಕವನ್ನು ಪಾಶ್ಚಾತ್ಯ ದೇಶಗಳು ವ್ಯಕ್ತಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News