ಆರೆಸ್ಸೆಸ್ ಮತ್ತು ಮಹಿಳಾ ಸಬಲೀಕರಣ

Update: 2019-10-15 18:33 GMT

ಭಾಗ-1

ರಾಷ್ಟ್ರ ನಿರ್ಮಾಣದ ಯೋಜನೆಯು ಮಹಿಳೆಯರಿಗೆ ಸಾರ್ವಜನಿಕವಾಗಿ ಮನೆಗಳ ಹೊರಗೆ ಬರುವ ಅವಕಾಶ ಕಲ್ಪಿಸುತ್ತದೆ. ಆದರೆ ಇದು ಪಿತೃಪ್ರಧಾನ ನಿಯಮಗಳನ್ನು ಅಥವಾ ಚೌಕಟ್ಟುಗಳನ್ನು ಕೆಡವಿದ ಪರಿಣಾಮವಲ್ಲ; ಬದಲಾಗಿ ಇದು ಹಿಂದುತ್ವ ಸಿದ್ಧಾಂತಕ್ಕೆ ಅನುಗುಣವಾದ ಮತ್ತು ಹಿಂದೂರಾಷ್ಟ್ರದ ಚೌಕಟ್ಟಿನ ಒಳಗಿನ ಶರತ್ತುಗಳಿಗೆ, ನಿಯಮಗಳಿಗೆ ಒಳಪಟ್ಟು ನೀಡಲಾಗುವ ಅವಕಾಶ.

 ಇತ್ತೀಚೆಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅಂತರ್‌ರಾಷ್ಟ್ರೀಯ ಪತ್ರಿಕೆಗಳ ಪತ್ರಕರ್ತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಅಲ್ಲಿ ಅವರು ಕಾಶ್ಮೀರದಲ್ಲಿ 370ನೇ ವಿಧಿಯ ರದ್ದತಿ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ನಾಗರಿಕತ್ವ ತಿದ್ದುಪಡಿ ಮಸೂದೆ, ರಾಮಮಂದಿರದ ನಿರ್ಮಾಣ ಇತ್ಯಾದಿ ಕುರಿತು ಮಾತಾಡಿದರು. ಆದರೆ ಅಲ್ಲಿ ಅವರು ಮಹಿಳೆಯರು ಕುರಿತು ನೀಡಿದ ಹೇಳಿಕೆ ಆಶ್ಚರ್ಯ ಮೂಡಿಸಿತು.

 ಅವರು ಹೇಳಿದರು, ‘‘ಮಹಿಳೆಯರ ಉದ್ಧಾರ ಹೇಗೆ ಮಾಡಬೇಕೆಂದು ನಿರ್ಧರಿಸುವ ಸಾಮರ್ಥ್ಯ ಪುರುಷರಿಗಿಲ್ಲ. ತಮ್ಮನ್ನು ಹೇಗೆ ಮೇಲೆತ್ತಬಹುದು ಎಂದು ತಮಗೆ ಸಂಬಂಧಿಸಿದ ತೀರ್ಮಾನಗಳನ್ನು ನಿರ್ಧಾರಗಳನ್ನು ಸ್ವತಃ ಮಹಿಳೆಯರೇ ತೆಗೆದುಕೊಳ್ಳಬೇಕು’’. (ಟೈಮ್ಸ್ ಆಫ್ ಇಂಡಿಯಾ) ಮಹಿಳೆಯರ ಬಗ್ಗೆ ಆರೆಸ್ಸೆಸ್ ಹೊಂದಿರುವ ನಿಲುವು, ಧೋರಣೆಗಳ ಮುಂದೆ ಈ ಹೇಳಿಕೆ ಸ್ವಲ್ಪ ವಿಚಿತ್ರವಾಗಿ ಕಾಣುತ್ತದೆ. ರಾಷ್ಟ್ರದ ಕುರಿತು ಅತಿ ಪುರುಷತ್ವವಾದ ಮತ್ತು ಮಹಿಳೆಯರಿಗೆ ಪುರುಷರಿಗಿಂತ ಕೆಳಗಿನ ಸ್ಥಾನವನ್ನು ನೀಡುವ ಆರೆಸ್ಸೆಸ್‌ನ ಧೋರಣೆಗಳು ಎಲ್ಲರಿಗೂ ತಿಳಿದಿದೆ.

ಹೀಗಿರುವಾಗ ಮಹಿಳೆಯರ ಸ್ವ ನಿರ್ಧಾರದ ಸಾಮರ್ಥ್ಯವನ್ನು ಮೆಚ್ಚಿ ಮಾತಾಡುವ ಅವರ ಹೇಳಿಕೆಯನ್ನು ಹೇಗೆ ಅರ್ಥಮಾಡಿಕೊಳ್ಳುವುದು?

ಆರೆಸ್ಸೆಸ್‌ನ ಒಂದು ಘಟಕವಾದ ರಾಷ್ಟ್ರ ಸೇವಿಕಾ ಸಮಿತಿ ಎಂಬ ಮಹಿಳಾ ಸಂಘಟನೆ ಅದರ ವಿಧೇಯ ಸಂಘಟನೆಯಾಗಿಯೇ ಕಾರ್ಯನಿರ್ವಹಿಸುತ್ತದೆಯೇ ಹೊರತು ಒಂದು ಸ್ವತಂತ್ರ ಸಂಸ್ಥೆಯಾಗಿ ಅಲ್ಲ.

ಹಾಗಾದರೆ ಈಗ ಏನು ಬದಲಾಗಿದೆ? ಆರೆಸ್ಸೆಸ್‌ನ ಸ್ವರೂಪ ಮತ್ತು ನಡತೆ ಚಾರಿತ್ರ (ಕ್ಯಾರೆಕ್ಟರ್) ಬದಲಾಗುತ್ತಿದೆಯೇ? ಅದು ಇನ್ನಷ್ಟನ್ನು ಒಳಗೊಳ್ಳುವ (ಇನ್‌ಕ್ಲೂಸಿವ್) ಹಾಗೂ ಪುರೋಗಾಮಿ ಯಾಗುತ್ತಿದೆಯೇ? ಈ ಪ್ರಶ್ನೆಗಳಿಗೆ ಉತ್ತರಿಸಬೇಕಾದರೆ ನಾವು ಆರೆಸ್ಸೆಸ್‌ನ ಮೂಲ/ ತಿರುಳು ಸಿದ್ಧಾಂತವನ್ನು ಗಮನಿಸಬೇಕು.

ಆರೆಸ್ಸೆಸ್ ತನ್ನ ಸುಮಾರು ನೂರು ವರ್ಷಗಳ ಅಸ್ತಿತ್ವದಲ್ಲಿ ರೈತರು, ದಲಿತರು, ಆದಿವಾಸಿಗಳು, ಮಹಿಳೆಯರು ಹಾಗೂ ಕಾರ್ಮಿಕರಂತಹ ಸಮಾಜದ ವಿವಿಧ ವರ್ಗಗಳನ್ನು ತನ್ನ ಸೈದ್ಧಾಂತಿಕ ತೆಕ್ಕೆಯೊಳಕ್ಕೆ ತರಲು ಹಲವು ರೀತಿಗಳಲ್ಲಿ ಕೆಲಸಮಾಡಿದೆ, ವಿಕಾಸಗೊಂಡಿದೆ. ಅದು ಮಹಿಳೆಯರಿಗೆ ನೀಡುವ ಸ್ಥಾನ ಹಾಗೂ ಪಾತ್ರ ಕಳೆದ ಹಲವು ದಶಕಗಳಲ್ಲಿ ಹಾಗೆಯೇ ಇದೆಯೇ? ಅಥವಾ ಬದಲಾಗಿದೆಯೇ?

ಮಹಿಳೆಯರು ತಮ್ಮ ಉದ್ಧಾರಕ್ಕಾಗಿ ತಾವೇ ತೀರ್ಮಾನ ತೆಗೆದುಕೊಳ್ಳಬಲ್ಲರು, ತೆಗೆದುಕೊಳ್ಳಬಹುದು ಎಂದು ಭಾಗವತ್ ಹೇಳುವಾಗ ಅವರ ಮಾತಿನ ಅರ್ಥವೇನು? ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ ಇದೆ ಎಂದು ಅರ್ಥೈಸಬಹುದು. ಹಾಗಾದರೆ ಮಹಿಳೆಯರಿಗೆ ತಮ್ಮ ಕೆಲಸದಲ್ಲಿ ಆಯ್ಕೆಗಳಿವೆಯೇ? ಅವರ ದೇಹಗಳ ಮೇಲೆ ಅವರಿಗೆ ನಿಯಂತ್ರಣವಿದೆಯೇ? ಅವರ ಕುಟುಂಬಗಳಲ್ಲಿ ಮಹಿಳೆಯರು ಪುರುಷರಿಗೆ ಸಮಾನರೇ? ಅವರು ವ್ಯಾಖ್ಯಾನಿತ ಲಿಂಗ ಪಾತ್ರಗಳಿಂದ ಮುಕ್ತರೇ?

ಇದಕ್ಕೆ ಉತ್ತರ: ಖಂಡಿತವಾಗಿಯೂ ಅಲ್ಲ. ಆರೆಸ್ಸೆಸ್‌ನ ಕಲ್ಪನೆಯ ರಾಷ್ಟ್ರವು ಹೊರಗಿಡುವಿಕೆ (ಎಕ್ಸ್‌ಕ್ಲೂಶನ್) ಮತ್ತು ಒಂದು ‘ಇತರ’ ರಚನೆಯನ್ನಾಧರಿಸಿದೆ. ತಾನು ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಕೇಂದ್ರವಾಗಿರಿಸಿಕೊಂಡಿರುವ ಒಂದು ಸಂಘಟನೆ ಎಂದು ಅದು ತನ್ನನ್ನು ಕರೆದುಕೊಳ್ಳುತ್ತದೆ ಮತ್ತು ಈ ರಾಷ್ಟ್ರೀಯತೆಯ ಮೂಲಕ ಅದು ಒಂದು ಹಿಂದೂರಾಷ್ಟ್ರವನ್ನು ಸ್ಥಾಪಿಸಲು ಬಯಸುತ್ತದೆ. ಈ ರಾಷ್ಟ್ರವು, ರಾಷ್ಟ್ರನಿರ್ಮಾಣದಲ್ಲಿ ಪುರುಷರು ಮತ್ತು ಮಹಿಳೆಯರು ವಹಿಸಬೇಕಾದ ಪಾತ್ರಕ್ಕೆ ಅನುಗುಣವಾಗಿ ಪುರುಷತ್ವ ಮತ್ತು ಸ್ತ್ರೀತ್ವದ ಪರಿಕಲ್ಪನೆಯನ್ನು ಹೊಂದಿದೆ. ಹೀಗೆ ಆರೆಸ್ಸೆಸ್ ಭಾರತವನ್ನು ಓರ್ವ ಮಾತೆಯಾಗಿ ಚಿತ್ರಿಸುತ್ತದೆ.

ಸಾಮಾಜಿಕವಾಗಿ ನಿರ್ಮಿಸಲಾದ, ಕಲ್ಪಿಸಲಾದ ಗೌರವದ ಪರಿಕಲ್ಪನೆಯು ದೇಶವನ್ನು ಮಾತೆಯಾಗಿ ಚಿತ್ರಿಸಿದಾಗ ಮುಖ್ಯವಾಗುತ್ತದೆ. ಅಂದರೆ ಮಹಿಳೆಯರು ರಾಷ್ಟ್ರೀಯ ಗೌರವವನ್ನು ಸಂಕೇತಿಸುತ್ತಾರೆ. ಹೀಗಾಗಿ ಮಹಿಳೆಯರ ದೇಹವನ್ನು ಮಲಿನಗೊಳಿಸುವ ಮತ್ತು ಉಲ್ಲಂಘಿಸುವ ಯಾವುದೇ ಕ್ರಿಯೆ (ಉದಾಹರಣೆಗೆ ಅತ್ಯಾಚಾರ) ಶತ್ರುರಾಷ್ಟ್ರದ ಗೌರವವನ್ನು ನಾಶಮಾಡುವ ಉದ್ದೇಶ ಹೊಂದಿರುವ ಒಂದು ರಾಜಕೀಯ ಅಸ್ತ್ರವಾಗುತ್ತದೆ. (ಬ್ಯಾನರ್ಜಿ,2003) ಹೀಗೆ, ಭಾರತಮಾತೆಗೆ ತನ್ನ ಒಳಗಿನ ಶತ್ರುಗಳಿಂದ ಅಂದರೆ ಮುಸ್ಲಿಮರಿಂದ ಬೆದರಿಕೆ ಎಂಬ ಆರೆಸ್ಸೆಸ್‌ನ ಕಥಾನಕವನ್ನು ರಾಜಕೀಯ ಅಸ್ಮಿತೆಗಳ ನೆಲೆಯಲ್ಲಿ ಸಮಾಜದಲ್ಲಿ ಧ್ರುವೀಕರಿಸಲು ಬಳಸಲಾಗುತ್ತದೆ. ರಾಜಕೀಯವಾಗಿ ಜನರನ್ನು (ಹಿಂದೂಗಳನ್ನು) ಒಂದುಗೂಡಿಸಲು ಬಳಸಲಾಗುತ್ತದೆ.

ರಾಷ್ಟ್ರದ ಕುರಿತಾದ ಈ ಕಥಾನಕ ಹಾಗೂ ಪ್ರತಿಮೆ (ಇಮೇಜರಿ)ಯು ರಾಷ್ಟ್ರದಲ್ಲಿ ಮಹಿಳೆಯರು ಯಾವ ರೀತಿಯಲ್ಲಿ ಭಾಗವಹಿಸಬೇಕು ಹಾಗೂ ಸಮಾಜದಲ್ಲಿ ಅವರು ವಹಿಸಬೇಕಾದ ಒಟ್ಟು ಪಾತ್ರ ಏನು ಎಂಬುದರ ಮೇಲೆ ಪ್ರಭಾವ ಬೀರುತ್ತದೆ. ಈ ಕಥಾನಕದಲ್ಲಿ ಮಹಿಳೆಯರನ್ನು ಮುಖ್ಯವಾಗಿ ಮಡದಿಯರು ಹಾಗೂ ತಾಯಂದಿಯರು ಎಂದು ಪರಿಗಣಿಸಲಾಗುತ್ತದೆ. ಅವರಿಗೆ ಕುಟುಂಬದಲ್ಲಿ ಮಹತ್ವಪೂರ್ಣವಾದ ಒಂದು ಪಾತ್ರವನ್ನು ನೀಡಲಾಗುತ್ತದೆ. ನಿಜವಾಗಿ, ಸಮಾಜದಲ್ಲಿ ಅವರ ಸ್ಥಾನಮಾನವು ಸಾಂಸ್ಕೃತಿಕವಾಗಿ ಅಂಗೀಕರಿಸಲಾಗಿರುವ ‘ಪತ್ನಿತ್ವ’’ (ವೈಫ್‌ಹುಡ್) ಹಾಗೂ ತಾಯ್ತನ (ಮದರ್ ಹುಡ್)ದ ಪರಿಕಲ್ಪನೆಗೆ ಅವರು ಎಷ್ಟರ ಮಟ್ಟಿಗೆ ಹೊಂದಿಕೊಳ್ಳುತ್ತಾರೆ ಎಂಬುದನ್ನು ಅವಲಂಬಿಸಿರುತ್ತದೆ.

ಆರೆಸ್ಸೆಸ್ ಮಹಿಳೆಯರಿಗೆ ಮನೆಗಳ ಒಳಗಿನ ಜಾಗವನ್ನು (ಸ್ಪೇಸ್)ನಿಗದಿಗೊಳಿಸಿ, ಅವರನ್ನು ಅಲ್ಲಿಗೆ ಸೀಮಿತಗೊಳಿಸುವುದಾದಲ್ಲಿ, ಆರೆಸ್ಸೆಸ್ ಸಿದ್ಧಾಂತವನ್ನು ಅನುಸರಿಸುವ ಗಣನೀಯ ಸಂಖ್ಯೆಯ ಮಹಿಳೆಯರು ಅಲ್ಲಿ ಇರುವುದನ್ನು ಹೇಗೆ ಅರ್ಥೈಸುವುದು? ರಾಷ್ಟ್ರ ನಿರ್ಮಾಣದ ಯೋಜನೆಯು ಮಹಿಳೆಯರಿಗೆ ಸಾರ್ವಜನಿಕವಾಗಿ ಮನೆಗಳ ಹೊರಗೆ ಬರುವ ಅವಕಾಶ ಕಲ್ಪಿಸುತ್ತದೆ. ಆದರೆ ಇದು ಪಿತೃಪ್ರಧಾನ ನಿಯಮಗಳನ್ನು ಅಥವಾ ಚೌಕಟ್ಟುಗಳನ್ನು ಕೆಡವಿದ ಪರಿಣಾಮವಲ್ಲ; ಬದಲಾಗಿ ಇದು ಹಿಂದುತ್ವ ಸಿದ್ಧಾಂತಕ್ಕೆ ಅನುಗುಣವಾದ ಮತ್ತು ಹಿಂದೂರಾಷ್ಟ್ರದ ಚೌಕಟ್ಟಿನ ಒಳಗಿನ ಶರತ್ತುಗಳಿಗೆ, ನಿಯಮಗಳಿಗೆ ಒಳಪಟ್ಟು ನೀಡಲಾಗುವ ಅವಕಾಶ.

ಆರೆಸ್ಸೆಸ್, ಮಹಿಳೆಯರಿಗೆ ಹೆಚ್ಚಿನ ಸಂಚಾರ ಸವಲತ್ತು (ಮೊಬಿಲಿಟಿ) ಅಥವಾ ಪುರುಷಪ್ರಧಾನವಾದ ಲಕ್ಷಣಗಳನ್ನು, ಕರ್ತವ್ಯಗಳನ್ನು ನೀಡಿದರೂ ಮಹಿಳೆಯರ ಪಾತ್ರ ಮತ್ತು ಸ್ಥಾನ ಬದಲಾಗದೆ ಹಿಂದೆ ಇದ್ದಂತೆಯೇ ಇರುತ್ತದೆ. ಪುರುಷ ಪ್ರಧಾನ ಚಟುವಟಿಕೆಯಾಗಿ ಸ್ವರಕ್ಷಣಾ ತರಗತಿಗಳು ಶಸತ್ತ್ತ್ರಾಸ್ತ್ರ ತರಬೇತಿಗೆ ಒತ್ತು ನೀಡಲಾಗುತ್ತದೆ. ಆದರೆ ಅಂತಿಮವಾಗಿ, ಪುರುಷ ಪ್ರಧಾನವಾದ ಹಿಂದೂ ರಾಷ್ಟ್ರಕ್ಕೆ ಪೂರಕವಾಗುವಷ್ಟರ ಮಟ್ಟಿಗೆ ಮಾತ್ರ ಇಂತಹ ಪುರುಷ ಪ್ರಧಾನ ಚಟುವಟಿಕೆಗಳನ್ನು ಪ್ರವರ್ತಿಸಲಾಗುತ್ತದೆ.

ಕೃಪೆ: caravandaily.com

Writer - ನೇಹಾ ದಭಾಡೆ

contributor

Editor - ನೇಹಾ ದಭಾಡೆ

contributor

Similar News

ಜಗದಗಲ
ಜಗ ದಗಲ