×
Ad

370ನೇ ವಿಧಿ ರದ್ದತಿ ಬಳಿಕ ಮಾನವಹಕ್ಕು ‘ಜಾಗತಿಕ ಮಾತಾಗಿದೆ’: ನಿರ್ಮಲಾ ಸೀತಾರಾಮನ್

Update: 2019-10-16 22:25 IST

ನ್ಯೂಯಾರ್ಕ್, ಅ. 16: ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಸಂವಿಧಾನದ 370ನೇ ವಿಧಿಯು ರಾಜ್ಯದ ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ನಿರಾಕರಿಸಿತ್ತು ಹಾಗೂ ಅದು ‘ಗಂಭೀರ ಮಾನವಹಕ್ಕು ಉಲ್ಲಂಘನೆ’ಯಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಈ ಮಾನವಹಕ್ಕು ಉಲ್ಲಂಘನೆಯ ಬಗ್ಗೆ ಯಾರೂ ಮಾತನಾಡಲಿಲ್ಲ, ಆದರೆ ‘ತಾತ್ಕಾಲಿಕ ಸಾಂವಿಧಾನಿಕ ವಿಧಿ’ಯನ್ನು ರದ್ದುಪಡಿಸಿದ ಬಳಿಕ, ಮಾನವಹಕ್ಕುಗಳು ‘ಜಾಗತಿಕ ಮಾತಾಗಿದೆ’ ಎಂದು ಅವರು ಹೇಳಿದ್ದಾರೆ.

370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಮೂಲಭೂತ ಹಕ್ಕುಗಳನ್ನು ನಿರಾಕರಿಸಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೊಲಂಬಿಯ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಇಂಟರ್‌ನ್ಯಾಶನಲ್ ಆ್ಯಂಡ್ ಪಬ್ಲಿಕ್ ಅಫೇರ್ಸ್‌ನಲ್ಲಿ ‘ದೀಪಕ್ ಆ್ಯಂಡ್ ರಾಜ್ ಸೆಂಟರ್ ಆನ್ ಇಂಡಿಯನ್ ಎಕನಾಮಿಕ್ ಪಾಲಿಸೀಸ್’ ಎಂಬ ಸಂಸ್ಥೆಯು ಮಂಗಳವಾರ ಏರ್ಪಡಿಸಿದ ಸಮಾರಂಭದಲ್ಲಿ ‘ಇಂಡಿಯನ್ ಎಕಾನಮಿ: ಚಾಲೆಂಜಸ್ ಆ್ಯಂಡ್ ಪ್ರಾಸ್ಪೆಕ್ಟ್ಸ್’ ಎಂಬ ವಿಷಯಲ್ಲಿ ಅವರು ಉಪನ್ಯಾಸ ನೀಡುತ್ತಿದ್ದರು.

370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿಸಲಾದ ನಿರ್ಬಂಧದಿಂದಾಗಿ ಉಂಟಾಗಿರುವ ಆರ್ಥಿಕ ನಷ್ಟವೆಷ್ಟು ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

‘‘ತಾತ್ಕಾಲಿಕ 370ನೇ ವಿಧಿಯು ರಾಜ್ಯದ ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ನಿರಾಕರಿಸಿತ್ತು. ಅದು ರಾಜ್ಯದ ಪರಿಶಿಷ್ಟ ಜಾತಿಯವರಿಗೆ ಸಂವಿಧಾನಬದ್ಧ ಮೀಸಲಾತಿಯ ಹಕ್ಕನ್ನು ನಿರಾಕರಿಸಿತ್ತು. ಅದು ಬುಡಕಟ್ಟು ಜನರಿಗೆ ಭಾರತೀಯ ಸಂವಿಧಾನ ನೀಡುವ ಮೀಸಲಾತಿಯ ಹಕ್ಕನ್ನು ನಿರಾಕರಿಸಿತ್ತು. ಅದೊಂದು ತಾತ್ಕಾಲಿಕ ವಿಧಿಯಾಗಿತ್ತು. ಈಗ ಅವೆಲ್ಲವುಗಳನ್ನು ಪ್ರತಿಯೊಬ್ಬರಿಗೂ ಒದಗಿಸಲು ನಮಗೆ ಸಾಧ್ಯವಾಗಿದೆ’’ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

 ‘‘ಜನರು ಜಮ್ಮು ಮತ್ತು ಕಾಶ್ಮೀರದ ಆರ್ಥಿಕತೆ ಬಗ್ಗೆ ಚಿಂತಿತರಾಗಿದ್ದರೆ, ಈಗ ಅವರು ಸಂತೋಷಪಡಬೇಕು. ಯಾಕೆಂದರೆ ಈಗ ಪ್ರತಿಯೊಬ್ಬರೂ ಒಂದೇ ಸವಲತ್ತುಗಳನ್ನು ಪಡೆಯುತ್ತಿದ್ದಾರೆ ಹಾಗೂ ರಾಜ್ಯದ ಅಭಿವೃದ್ಧಿಗೆ ಸಮಾನ ನಿಧಿಗಳನ್ನು ನೀಡಲಾಗುತ್ತಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News