ಪಿಎಂಸಿ ಬ್ಯಾಂಕ್ ಹಗರಣ: ಅ. 17ರಿಂದ ಸುಪ್ರೀಂ ವಿಚಾರಣೆ

Update: 2019-10-16 17:40 GMT

ಮುಂಬೈ, ಅ.16: ಬಿಕ್ಕಟ್ಟು ಎದುರಿಸುತ್ತಿರುವ ಪಂಜಾಬ್ ಮತ್ತು ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್(ಪಿಎಂಸಿ)ನಲ್ಲಿ 15ಲಕ್ಷಕ್ಕೂ ಹೆಚ್ಚಿನ ಗ್ರಾಹಕರು ಜಮೆ ಮಾಡಿರುವ ಹಣಕ್ಕೆ ಶೇ.100ರಷ್ಟು ವಿಮೆ ಭದ್ರತೆ ಒದಗಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಅಕ್ಟೋಬರ್ 17ರಿಂದ ಆರಂಭವಾಗಲಿದ್ದು 23ರವರೆಗೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಬ್ಯಾಂಕಿನಲ್ಲಿ ಜಮೆ ಮಾಡಿರುವ ಹಣ ಸುರಕ್ಷಿತವಾಗಿದೆ ಎಂದು ಗ್ರಾಹಕರಿಗೆ ಭರವಸೆ ನೀಡಬೇಕು ಹಾಗೂ ಬ್ಯಾಂಕಿನ 15 ಲಕ್ಷಕ್ಕೂ ಖಾತೆದಾರರಿಗೆ ತಕ್ಷಣ ಭದ್ರತೆ ಒದಗಿಸಬೇಕು. 1ಲಕ್ಷ ರೂ. ವಿಮಾ ರಕ್ಷಣೆ ಏನೇನೂ ಸಾಲದು ಎಂದು ಅರ್ಜಿ ಸಲ್ಲಿಸಿರುವ ಬಿಜೋನ್ ಮಿಶ್ರಾರ ವಕೀಲ ಶಶಿಕಾಂತ್ ದೇವ್ ಹೇಳಿದ್ದಾರೆ.

ಈ ಮಧ್ಯೆ, ಪಿಎಂಸಿ ಬ್ಯಾಂಕ್‌ನಲ್ಲಿ ಉಂಟಾಗಿರುವ ಸಮಸ್ಯೆಯ ಕುರಿತು ಕೇಂದ್ರ ಸರಕಾರದೊಡನೆ ಚರ್ಚಿಸಿ, ಗ್ರಾಹಕರು ಹಣ ಹಿಂಪಡೆಯಲು ಕೇಂದ್ರದ ನೆರವು ಕೇಳುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪಿಎಂಸಿ ಬ್ಯಾಂಕ್‌ನ ಗ್ರಾಹಕರಿಗೆ ಸಾಧ್ಯವಿರುವ ಎಲ್ಲಾ ನೆರವನ್ನೂ ಸರಕಾರ ಒದಗಿಸಲಿದೆ ಎಂದು ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News