ಏಕದಿನ ಕ್ರಿಕೆಟ್: ದ್ವಿಶತಕ ಸಿಡಿಸಿದ ಕಿರಿಯ ಆಟಗಾರ ಯಶಸ್ವಿ ಜೈಸ್ವಾಲ್

Update: 2019-10-16 18:42 GMT

ಹೊಸದಿಲ್ಲಿ, ಅ.16: ಮುಂಬೈನ ಯಶಸ್ವಿ ಜೈಸ್ವಾಲ್ ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ದ್ವಿಶತಕವನ್ನು ಸಿಡಿಸಿದ ಕಿರಿಯ ವಯಸ್ಸಿನ ಕ್ರಿಕೆಟಿಗನೆಂಬ ಕೀರ್ತಿಗೆ ಭಾಜನರಾದರು.ಈ ಮೂಲಕ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾದರು. 17ರ ವಯಸ್ಸಿನ ಯಶಸ್ವಿ ಜಾರ್ಖಂಡ್ ವಿರುದ್ಧ ವಿಜಯ ಹಝಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಮುಂಬೈ ಬ್ಯಾಟ್ಸ್‌ಮನ್ ಜೈಸ್ವಾಲ್ ತಾನಾಡಿದ ಚೊಚ್ಚಲ ವಿಜಯ ಹಝಾರೆ ಟೂರ್ನಿಯಲ್ಲಿ ಕೇವಲ 154 ಎಸೆತಗಳಲ್ಲಿ 17 ಬೌಂಡರಿ ಹಾಗೂ 12 ಭರ್ಜರಿ ಸಿಕ್ಸರ್‌ಗಳನ್ನು ಒಳಗೊಂಡ 203 ರನ್ ಗಳಿಸಿದರು. ವರುಣ್ ಆ್ಯರೊನ್, ಶಾಬಾಝ್ ನದೀಮ್ ಹಾಗೂ ಅನುಕೂಲ್ ರಾಯ್ ಅವರನ್ನೊಳಗೊಂಡ ಜಾರ್ಖಂಡ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಜೈಸ್ವಾಲ್ ಮುಂಬೈ ತಂಡ ‘ಎ’ ಗುಂಪಿನ ಪಂದ್ಯದಲ್ಲಿ ಜಾರ್ಖಂಡ್ ಗೆಲುವಿಗೆ 359 ರನ್ ಗುರಿ ನೀಡಲು ನೆರವಾದರು.

 ಈ ವರ್ಷಾರಂಭದಲ್ಲಿ ಲಿಸ್ಟ್ ‘ಎ’ ಕ್ರಿಕೆಟ್‌ಗೆ ಕಾಲಿಟ್ಟಿದ್ದ ಯಶಸ್ವಿ ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಈಗಾಗಲೇ ಕೇರಳ ಹಾಗೂ ಗೋವಾ ವಿರುದ್ಧ ಕ್ರಮವಾಗಿ 113 ಹಾಗೂ 122 ರನ್ ಸಿಡಿಸಿದ್ದಾರೆ.

ಜೈಸ್ವಾಲ್ ಅಂಡರ್-19 ಮಟ್ಟದ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಭಾರತೀಯ ಆರಂಭಿಕ ಆಟಗಾರ ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ 9ನೇ ನಿದರ್ಶನ ಇದಾಗಿದೆ. ಕಳೆದ ವಾರ ಕೇರಳದ ಸಂಜು ಸ್ಯಾಮ್ಸನ್ ಗೋವಾ ವಿರುದ್ಧ ದ್ವಿಶತಕ(ಔಟಾಗದೆ 212)ಗಳಿಸಿದ್ದರು. ಇದು ವಿಜಯ ಹಝಾರೆ ಟ್ರೋಫಿಯಲ್ಲಿ ದಾಖಲಾಗಿರುವ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News