‘ವಿಶ್ವ ಗುರು’ ಆಗುವುದಕ್ಕೆ ಭಾರತದ ಸಿದ್ಧತೆಯೇನು?

Update: 2019-10-17 05:20 GMT

ಶಿಕ್ಷಣದ ಕಾರಣಕ್ಕಾಗಿ ಇತ್ತೀಚೆಗೆ ಉತ್ತರ ಪ್ರದೇಶ ರಾಜ್ಯ ಸುದ್ದಿಯಾಯಿತು. ಶಾಲಾ ಶಿಕ್ಷಣದ ಗುಣಮಟ್ಟದ ಸಾಧನೆ ಕುರಿತಂತೆ ಇತ್ತೀಚೆಗೆ ನೀತಿ ಆಯೋಗ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕೇರಳ ಅಗ್ರಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿತ್ತು. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದ ಶಾಲೆಗಳು ಕೂಡ ಹಲವು ಬಾರಿ ಮಾಧ್ಯಮಗಳಲ್ಲಿ ಸುದ್ದಿಯಾದವು. ಒಮ್ಮೆ ಒಂದು ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಬದಲಿಗೆ ರೊಟ್ಟಿಯ ಜೊತೆಗೆ ಉಪ್ಪನ್ನು ನೀಡುವ ಮೂಲಕ ಸುದ್ದಿಯಾದರೆ, ಎರಡು ದಿನಗಳ ಹಿಂದೆ, ಸಾಂಬಾರಿನ ಬದಲು ಅರಶಿಣ ಕಲಸಿದ ನೀರನ್ನು ಬಡಿಸುವ ಮೂಲಕ ಸುದ್ದಿಯಾಯಿತು. ಬಹುಶಃ ಶಿಕ್ಷಣದ ಗುಣಮಟ್ಟದಲ್ಲಿ ಆ ರಾಜ್ಯ ಯಾಕೆ ಹಿಂದುಳಿದಿದೆ ಎನ್ನುವುದನ್ನು ಇದು ಹೇಳುತ್ತದೆ. ಬಡತನ, ಹಸಿವು ಕೂಡ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಬಡತನ ನಿವಾರಣೆಯಾಗದೆ ಮಕ್ಕಳು ಶಾಲೆಯ ಕಡೆಗೆ ಮುಖಮಾಡಲು ಸಾಧ್ಯವಿಲ್ಲ. ಉತ್ತಮ ಶಿಕ್ಷಣವಿಲ್ಲದೆ ಭವಿಷ್ಯದ ಉತ್ತಮ ಭಾರತವನ್ನು ನಿರ್ಮಾಣ ಮಾಡಲು ಅಸಾಧ್ಯ. ಇತ್ತೀಚಿನ ದಿನಗಳಲ್ಲಿ ದೇಶ ತೀವ್ರ ಆರ್ಥಿಕ ಹಿಂಜರಿತಗಳನ್ನು ಕಾಣುತ್ತಿವೆ. ನಿರುದ್ಯೋಗ ಹೆಚ್ಚುತ್ತಿವೆ. ಇವು ನೇರವಾಗಿ ಮಕ್ಕಳ ಶಿಕ್ಷಣದ ಮೇಲೆ ತನ್ನ ದುಷ್ಪರಿಣಾಮಗಳನ್ನು ಬೀರುತ್ತಿರುವುದು ಬಹಿರಂಗವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಣಕ್ಕಾಗಿ ಸರಕಾರ ಹೆಚ್ಚು ಹೆಚ್ಚು ನಿಧಿಯನ್ನು ಮೀಸಲಿರಿಸಿ ಅದನ್ನು ಮೇಲೆತ್ತಬೇಕಾದ ಅಗತ್ಯವಿದೆ. ದುರದೃಷ್ಟವಶಾತ್, ಇಂದು ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿವೆ. ಖಾಸಗಿ ಶಾಲೆಗಳು ಅಣಬೆಗಳಂತೆ ತಲೆಯೆತ್ತುತ್ತಿವೆ. ಬಡವರಿಗೆ ಶಿಕ್ಷಣ ಗಗನಕುಸುಮವಾಗುತ್ತಿದೆ.

ಶಿಕ್ಷಣದ ಮೇಲಿನ ವೆಚ್ಚವನ್ನು ಹೆಚ್ಚು ಮಾಡಲಾಗಿದೆ ಎಂದು ಸರಕಾರ ಹೇಳಿಕೊಂಡು ಬರುತ್ತಿದ್ದರೂ ಕೇಂದ್ರ ಸರಕಾರ ಶಿಕ್ಷಣಕ್ಕಾಗಿ ಕಾಯ್ದಿರಿಸಿದ ಬಜೆಟ್ 2014-15ರಲ್ಲಿದ್ದ ಶೇ. 4.14ರಿಂದ 2019-20ರ ವೇಳೆಗೆ ಶೇ.3.4ಕ್ಕೆ ಕುಸಿದಿದೆ ಎಂದು ಬಿಜೆಪಿ ಆಡಳಿತದ 2014-20ರ ಅವಧಿಯ ಬಜೆಟ್ ದಾಖಲೆಗಳು ತಿಳಿಸುತ್ತವೆ. 2019-20ರ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಕಾಯ್ದಿರಿಸಿದ ಪ್ರಮಾಣ ಶೇ.3.4 ಆಗಿದ್ದು ಈ ವಿತ್ತೀಯ ವರ್ಷದಲ್ಲಿ ಸರಕಾರ, ನೂತನ ಶಿಕ್ಷಣ ನೀತಿಗೆ ಅಗತ್ಯವಿರುವ ಹೆಚ್ಚಿನ ಮೊತ್ತವನ್ನು ಮೀಸಲಿಟ್ಟಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಪರಿಷ್ಕೃತ ಮುಂಗಡಪತ್ರ ಅಂದಾಜಿನ ಪ್ರಕಾರ, ಶಾಲಾ ಶಿಕ್ಷಣಕ್ಕೆ ಕಾಯ್ದಿರಿಸಿದ ಒಟ್ಟು ಮೊತ್ತವು 2014-15ರ 38,600 ಕೋಟಿ ರೂ.ನಿಂದ 2018-19ರ ವೇಳೆಗೆ 37,100 ಕೋಟಿ ರೂ.ಗೆ ಇಳಿಕೆಯಾಗಿದೆ.

ರಾಜ್ಯಗಳು ಶಿಕ್ಷಣಕ್ಕೆ ವ್ಯಯಿಸುವ ಮೊತ್ತದ ಅನುಪಾತದಲ್ಲೂ ಅನೇಕ ರಾಜ್ಯಗಳಲ್ಲಿ , ಮುಖ್ಯವಾಗಿ 2015-16ರಿಂದ 2018-19ರ 14ನೇ ಹಣಕಾಸು ಆಯೋಗದ ಅವಧಿಯಲ್ಲಿ ಇಳಿಕೆಯಾಗಿದೆ. 2019-20ರಲ್ಲಿ ಕಾಯ್ದಿರಿಸಿದ ನಿಧಿಯಲ್ಲಿ ಏರಿಕೆಯಾಗಿದ್ದರೂ ನಿಜವಾದ ವೆಚ್ಚ 2020-21ರ ಬಜೆಟ್‌ನಲ್ಲಿ ತಿಳಿಯಲಿದೆ. ಕೇಂದ್ರ ಸರಕಾರದ ಹೆಚ್ಚುವರಿ ನಿಧಿಯಿಲ್ಲದೆ ರಾಜ್ಯಗಳು ಯಾವ ರೀತಿ ತಮ್ಮ ಪಾಲನ್ನು ಅಧಿಕಗೊಳಿಸಲಿದೆ ಎನ್ನುವುದನ್ನು ಶಿಕ್ಷಣ ನೀತಿ ಸ್ಪಷ್ಟಪಡಿಸಿಲ್ಲ. ಉದಾಹರಣೆಗೆ, 2012-13ರಿಂದ 2019-20ರ ಎಂಟು ವರ್ಷಗಳ ಶಾಲಾ ಶಿಕ್ಷಣದ ಮೇಲಿನ ವೆಚ್ಚದ ವಿಶ್ಲೇಷಣೆ ನಡೆಸಿದಾಗ, ಕೇರಳ, ಮಹಾರಾಷ್ಟ್ರ, ಒಡಿಶಾ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಹಿಮಾಚಲಪ್ರದೇಶ ಹೀಗೆ ಆರು ರಾಜ್ಯಗಳಲ್ಲಿ ಶೇಕಡಾವಾರು ಒಟ್ಟು ಸರಕಾರಿ ವೆಚ್ಚವಾಗಿ ಶಿಕ್ಷಣದ ವೆಚ್ಚ ಇಳಿಕೆಯಾಗಿದೆ.

ಶಿಕ್ಷಣದ ವೆಚ್ಚ ಭರಿಸಲು ಪ್ರತಿ ರಾಜ್ಯಗಳಿಗೂ ತಮ್ಮದೇ ಆದ ಸಾಮರ್ಥ್ಯವಿರುವುದರಿಂದ ಆರ್ಥಿಕವಾಗಿ ಹಿಂದುಳಿದಿರುವ ರಾಜ್ಯಗಳಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಅಗತ್ಯವಿದೆ. ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಏರಿಕೆಯಾದಾಗ ಶಿಕ್ಷಣದ ಮೇಲಿನ ಸರಕಾರಿ ವೆಚ್ಚವೂ ಏರಿಕೆಯಾಗಲಿದೆ ಎಂದು ಶಿಕ್ಷಣ ನೀತಿ ಪ್ರತಿಪಾದಿಸುತ್ತದೆ. ಅದೇ ನೀತಿ, 2030-32ರಲ್ಲಿ ಭಾರತದ ಜಿಡಿಪಿ 10 ಟ್ರಿಲಿಯನ್ ಡಾಲರ್ ತಲುಪಲಿದೆ ಎಂದು ಉಲ್ಲೇಖಿಸಿದೆ. ಆದರೆ, ಸದ್ಯ ನಿಧಾನಗತಿಯ ಆರ್ಥಿಕ ಬೆಳವಣಿಗೆ, ಕೇಂದ್ರ ಸರಕಾರದ ತೆರಿಗೆ ಆದಾಯ ಸಂಗ್ರಹದಲ್ಲಿ ಕುಸಿತ ಮತ್ತು ದೇಶೀಯ ಹೂಡಿಕೆಯಲ್ಲಿ ಪುನಶ್ಚೇತನದ ಕೊರತೆಯಿಂದಾಗಿ ಈ ಗುರಿ ಅಸಾಧ್ಯವಾಗಿದೆ.

ಭಾರತ ಸರಕಾರ 2004ರಲ್ಲಿ ಶೇ.2 ಶಿಕ್ಷಣ ಸೆಸ್ ಪರಿಚಯಿಸಿತು. ಈ ನಿಧಿಯನ್ನು ಆರಂಭದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಬಳಸಲಾಗುತ್ತಿತ್ತು. 2007-08ರಲ್ಲಿ ಸರಕಾರ ಶೇ.1 ಪ್ರೌಢ ಮತ್ತು ಉನ್ನತ ಶಿಕ್ಷಣ ಸೆಸ್ ಪರಿಚಯಿಸಿತು. 2018-19ರಲ್ಲಿ ಶಿಕ್ಷಣ ಸೆಸ್ ಮತ್ತು ಪ್ರೌಢ ಹಾಗೂ ಉನ್ನತ ಶಿಕ್ಷಣ ಸೆಸನ್ನು ಬದಲಿಸಿ ಶೇ.4 ಆರೋಗ್ಯ ಮತ್ತು ಶಿಕ್ಷಣ ಸೆಸ್ ಆಗಿ ಪರಿಚಯಿಸಲಾಯಿತು. 2018-19ರಲ್ಲಿ ಸರಕಾರ ಒಟ್ಟು ಆಮದು ಸುಂಕದ ಮೇಲೆ ಶೇ.10 ಸಾಮಾಜಿಕ ಕಲ್ಯಾಣ ಮೇಲ್ತೆರಿಗೆಯನ್ನು ಪರಿಚಯಿಸಿತು. ಸೆಸ್ ಮತ್ತು ಮೇಲ್ತೆರಿಗೆಗಳು ನಿರ್ದಿಷ್ಟ ಉದ್ದೇಶಕ್ಕಾಗಿ ಸಂಗ್ರಹಿಸುವ ಆದಾಯ ಮೂಲಗಳಾಗಿವೆ. ಇವುಗಳನ್ನು ಇತರ ಯೋಜನೆಗಳಿಗೆ ವಿಂಗಡಿಸುವಹಾಗಿಲ್ಲ. ಕೇಂದ್ರ ಸರಕಾರ ಶೈಕ್ಷಣಿಕ ತೆರಿಗೆಗಳನ್ನು ಬೇರೆ ಬೇರೆ ಕ್ಷೇತ್ರಗಳಿಗೆ ಬಳಸುತ್ತಿರುವುದು, ಶಿಕ್ಷಣದ ಕುರಿತಂತೆ ಅದು ಎಷ್ಟು ಗಂಭೀರವಾಗಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ. ಭಾರತ ‘ವಿಶ್ವ ಗುರು’ವಾಗಲು ಹೊರಟಿದೆ. ವಿಶ್ವ ಗುರುವಾಗಬೇಕಾದರೆ ಮೊದಲು ಸರಕಾರ ದೇಶದ ತಳಸ್ತರದಿಂದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ತಾನು ಕಲಿತು ಪೂರ್ಣವಾದಾಗ ಮಾತ್ರ, ಇತರರಿಗೆ ಕಲಿಸುವ ಅರ್ಹತೆಯನ್ನು ಭಾರತ ಪಡೆಯುತ್ತದೆ. ಇಂದಿನ ಮಕ್ಕಳಿಗೆ ಯೋಗ್ಯ ಶಿಕ್ಷಣ ನೀಡಿ ಬೆಳೆಸಿದರೆ ಮುಂದಿನ ದಿನಗಳಲ್ಲಿ ಈ ದೇಶ ಸರ್ವಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಿ ವಿಶ್ವದ ಇತರ ದೇಶಗಳಿಗೆ ಮಾದರಿಯಾದೀತು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ನಾವು ಬೆಳೆಸಿದಂತೆ ಅವರು ಬೆಳೆಯುತ್ತಾರೆ. ‘ಫ್ರಾನ್ಸ್’ನಿಂದ ರಫೇಲ್ ತಂದು ನಾವು ನಮ್ಮ ಶೌರ್ಯ ಪ್ರದರ್ಶಿಸಿದಂತೆ, ವಿದೇಶಗಳಿಂದ ಗುರುಗಳನ್ನು ದುಡ್ಡುಕೊಟ್ಟು ತಂದು ನಾವು ‘ವಿಶ್ವಗುರು’ ಆಗುವುದಕ್ಕೆ ಸಾಧ್ಯವಿಲ್ಲ. ಅಥವಾ ಭಾರತದ ಮಾಧ್ಯಮಗಳಲ್ಲಿ ಜಾಹೀರಾತು ಕೊಟ್ಟು ಭಾರತವನ್ನು ‘ವಿಶ್ವಗುರು’ ಮಾಡುವುದಕ್ಕಾಗುವುದಿಲ್ಲ ಎನ್ನುವುದನ್ನು ಸರಕಾರ ಅರಿತುಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News