ಭಾಗವತ್ ರಂತಹವರು 'ಆರ್ಥಿಕ ತಜ್ಞ'ರಾಗಿದ್ದರಿಂದ ಆರ್ಥಿಕತೆ ಹೀಗಾಗಿದೆ: ಗೌರವ್ ವಲ್ಲಭ್

Update: 2019-10-17 08:18 GMT

ಬಿಜೆಪಿ ವಕ್ತಾರ ಸಂಬಿತ್ ಪಾತ್ರಾರಿಗೆ '5 ಟ್ರಿಲಿಯನ್ ಗೆ ಎಷ್ಟು ಸೊನ್ನೆಗಳಿವೆ' ಎಂದು ಪ್ರಶ್ನೆ ಕೇಳಿ ಪ್ರಸಿದ್ಧಿ ಗಳಿಸಿದ ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್ ಜೊತೆಗೆ 'ನ್ಯಾಶನಲ್ ದಸ್ತಕ್' ಸಂದರ್ಶನ ನಡೆಸಿದ್ದು, ದೇಶದ ಆರ್ಥಿಕತೆ, ಪ್ರಧಾನಿ ಮೋದಿಯ 'ಹೌಡಿ ಮೋದಿ', ಮೋಹನ್ ಭಾಗವತ್ ರಂತಹವರು ಆರ್ಥಿಕ ತಜ್ಞರಾದರೆ ಆರ್ಥಿಕತೆಯ ಮೇಲಾಗುವ ಪರಿಣಾಮ ಹೀಗೆ ಹಲವು ವಿಚಾರಗಳ ಬಗ್ಗೆ ಗೌರವ್ ಮಾತನಾಡಿದ್ದಾರೆ. ಈ ಸಂದರ್ಶನದ ಸಂಪೂರ್ಣ ಸಾರಾಂಶ ಈ ಕೆಳಗಿದೆ.  

ಪ್ರಶ್ನೆ: ಬ್ಯಾಂಕ್ ಗಳು ಮುಳುಗುತ್ತಿದೆ, ಪಿಎಂಸಿ ಬ್ಯಾಂಕ್ ಮುಳುಗಿದೆ, ಇನ್ನೂ ಬ್ಯಾಂಕ್ ಗಳು ಮುಳುಗಬಹುದು, ಇದೇ ಸಂದರ್ಭ ಕೋಟ್ಯಾಂತರ ರೂ. ಸಾಲ ಮನ್ನಾ ಮಾಡಲಾಗುತ್ತದೆ, ದೊಡ್ಡ ದೊಡ್ಡ ಸಾಲಗಳನ್ನು ವಜಾ ಮಾಡಲಾಗುತ್ತಿದೆ, ಇದರಿಂದ 2 ಲಕ್ಷ ಕೋಟಿ ರೂ. ಸರಕಾರಕ್ಕೆ ಹೊಡೆತ ಬಿದ್ದಿದೆ, ಇದೇ ಕುರಿತಾಗಿ ನಾನು ಪ್ರಶ್ನಿಸುತ್ತಿದ್ದೇನೆ. ಇಂತಹ ಮನ್ನಾಗಳು ಇದಕ್ಕೂ ಮೊದಲು ನಡೆದಿತ್ತು. ಆದರೆ ಈ ಬಾರಿ ಏಕೆ ವಿಶೇಷವೆನಿಸಿದೆ?

ಗೌರವ್: 2013-14ರ ವರದಿ ನೀಡುವುದಾದರೆ ಸಾರ್ವಜನಿಕ ರಂಗದ ಬ್ಯಾಂಕ್ ಗಳಿಂದ ಸುಮಾರು 35 ಸಾವಿರ ಕೋಟಿ ರೂ.ಗಳಷ್ಟು ಸಾಲ ಮನ್ನಾ ಮಾಡಲಾಗಿತ್ತು. ಆದರೆ ಈಗ 2 ಲಕ್ಷ ಕೋಟಿ ರೂ.ಗಳಷ್ಟು ಸಾಲಮನ್ನಾ ಮಾಡಲಾಗಿದೆ. ರೈಟ್ ಆಫ್ ಅಥವಾ ಮನ್ನಾ ಎಂದರೇನು?, ಖಾತೆಯಿಂದ ಆ ಮೊತ್ತವನ್ನು ಹೊರಕ್ಕೆ ತೆಗೆದಿದ್ದೇನೆ ಅಂದರೆ ಅಷ್ಟು ನಷ್ಟವನ್ನು ಘೋಷಿಸಿದ್ದೇನೆ ಎಂದರ್ಥ. ದಿವಾಳಿತನ ತಡೆಯಲು ಐಬಿಸಿ ಸಾಕಷ್ಟು ಕೆಲಸ ಮಾಡುತ್ತಿದೆ ಎಂದು ಹೇಳುತ್ತೀರಿ. ಹಾಗಿದ್ದರೆ ಸಾಲ ಮನ್ನಾ ಮಾಡಿದ್ದೇಕೆ. ಆ ಹಣವನ್ನು ವಸೂಲಿ ಮಾಡಲು ಐಬಿಸಿಗೇಕೆ ಸಾಧ್ಯವಾಗಲಿಲ್ಲ. ನೀವು ಯಾರ ಹಣವನ್ನೆಲ್ಲಾ ಮನ್ನಾ ಮಾಡಿದ್ದೀರೋ ಅವರ ಹೆಸರುಗಳನ್ನು ದೇಶಕ್ಕೆ ತಿಳಿಸಿ. ಅವರ ಹೆಸರುಗಳನ್ನು ಅಡಗಿಸಿಡುವಂತದ್ದು ಏನಿದೆ.

ಪ್ರಶ್ನೆ: ಇದೇ ಹಾದಿಯಲ್ಲಿ ಬೇರೆ ಬ್ಯಾಂಕ್ ಗಳಿರಬಹುದು ಎಂದು ನಿಮಗನಿಸುತ್ತಿದೆಯೇ?, ದೇಶದಲ್ಲಿ ನೋಟು ನಿಷೇಧದ ಸಮಯದಲ್ಲಿದ್ದಂತಹ ಸಂದರ್ಭಗಳು ಮತ್ತೆ ಸೃಷ್ಟಿಯಾಗಬಹುದೇ?

ಗೌರವ್: ಪಿಎಂಸಿ ಬ್ಯಾಂಕ್ ಬಿಕ್ಕಟ್ಟಿನ ಪರಿಣಾಮ ಸಹಕಾರಿ ಬ್ಯಾಂಕ್ ಗಳಿಗೂ ತಟ್ಟಿದೆ. ಏಕೆಂದರೆ ಕೆಲವು ಸಹಕಾರಿ ಬ್ಯಾಂಕ್ ಗಳ ಫಿಕ್ಸಡ್ ಡೆಪಾಸಿಟ್ ಅಥವಾ ಸ್ಥಿರ ಠೇವಣಿ ಈ ಬ್ಯಾಂಕ್ ನಲ್ಲಿದೆ. ಈ ಬ್ಯಾಂಕ್ ನಲ್ಲಿ ಫಿಕ್ಸಡ್ ಡೆಪಾಸಿಟ್ ಗಳಿಂದ ಜನರು ಹಣ ತೆಗೆಯಲು ಸಾಧ್ಯವಾಗದಿದ್ದರೆ ಇನ್ನೊಂದು ಸಹಕಾರಿ ಬ್ಯಾಂಕ್ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರುತ್ತದೆ. ವಿತ್ತ ಸಚಿವರು, 'ಸರಕಾರ ನಿಮ್ಮೊಂದಿಗಿದೆ' ಎಂದು ಜನರಿಗೇಕೆ ಭರವಸೆಯನ್ನು ನೀಡುತ್ತಿಲ್ಲ ಎಂದು ನಾನು ಸರಕಾರವನ್ನು ಪ್ರಶ್ನಿಸಲು ಬಯಸುತ್ತೇನೆ. ಇಂದು ಜನರು ಬ್ಯಾಂಕ್ ಗಳಲ್ಲಿ ತಮ್ಮ ಹಣ ಠೇವಣಿಯಿರಿಸಲು ಹೆದರುತ್ತಿದ್ದಾರೆ.

ಪ್ರಶ್ನೆ: ನೀವು ಬಿಜೆಪಿಗೆ ತಿರುಗೇಟು ನೀಡಿದ್ದೀರಿ. ಕೆಲ ವರ್ಷಗಳಲ್ಲಿ ಬಿಜೆಪಿಯ ಸಂಬಿತ್ ಪಾತ್ರಾಗೆ ತಿರುಗೇಟು ನೀಡುವವರು ಕಾಂಗ್ರೆಸ್ ನಲ್ಲಿ ಯಾರೂ ಇರಲಿಲ್ಲ. ಸೂಕ್ತ ತಿರುಗೇಟು ನೀಡಿದವರಲ್ಲಿ ನೀವು ಒಬ್ಬರು. "ಚೀನಾದ ಅಧ್ಯಕ್ಷ ಜಿನ್ ಪಿಂಗ್ ನಮ್ಮ ಕಾಲಬುಡದಲ್ಲಿದ್ದಾರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಮ್ಮ ಸ್ನೇಹಿತ" ಎಂದು ಹೇಳಲಾಗುತ್ತಿದೆ. ಇವೆಲ್ಲಾ ಬರೀ ಇವೆಂಟ್ ಮ್ಯಾನೇಜ್ ಮೆಂಟ್ ಗಳು. ಇದಕ್ಕೆ ನೀವು ಹೇಗೆ ತಿರುಗೇಟು ನೀಡುತ್ತೀರಿ?

ಗೌರವ್: ನಾವು ಖಂಡಿತವಾಗಿಯೂ ತಿರುಗೇಟು ನೀಡುತ್ತೇವೆ. ಪ್ರಧಾನಮಂತ್ರಿ ಅಮೆರಿಕಕ್ಕೆ ಹೋದದ್ದರಲ್ಲಿ ಯಾವ ಸಮಸ್ಯೆಯೂ ಇಲ್ಲ. ಆದರೆ ಭಾರತದ ಎಚ್ 1ಬಿ ವೀಸಾ 4 ವರ್ಷಗಳಲ್ಲಿ 400 ಶೇ.ಗಳಷ್ಟು ಹೆಚ್ಚಿದೆ. ಇದರ ಬಗ್ಗೆ ಪ್ರಧಾನಿ ಏನು ಮಾತನಾಡಿದ್ದಾರೆ?. ಇದೇ ರೀತಿ ಕ್ಸಿ ಜಿನ್ ಪಿಂಗ್ ಆಗಲೀ, ಅಮೆರಿಕ ಅಧ್ಯಕ್ಷರನ್ನಾಗಲೀ ಭಾರತದ ಪ್ರಧಾನಿ ಭೇಟಿಯಾಗುತ್ತಿರುವುದು ಇದು ಮೊದಲೇನಲ್ಲ. ಎಲ್ಲಾ ಪ್ರಧಾನಿಗಳೂ ಭೇಟಿಯಾಗುತ್ತಾರೆ. ಆದರೆ, ಮೊದಲೆಲ್ಲಾ ಭಾರತದ ಪ್ರಧಾನಿಗಳು ಅಮೆರಿಕಕ್ಕೆ ಹೋಗುತ್ತಿದ್ದರು, ಆದರೆ ಅವರು 'ಹೌಡಿ' ಮಾಡುತ್ತಿರಲಿಲ್ಲ. ಅಲ್ಲಿಗೆ ಹೋಗಿ ಅವರು ಭಾರತಕ್ಕಾಗಿ ಮಾತನಾಡುತ್ತಿದ್ದರು. ನಾನೇನು ಮಾಡಬಹುದು. ಭಾರತದ ಜನರಿಗೋಸ್ಕರ ನಾನೇನನ್ನು ಮಾಡಬಹುದು? ಎಂದು ಪ್ರಶ್ನಿಸುತ್ತಿದ್ದರೇ ವಿನಃ 'ಹೌ ಡು ಯು ಡು?" ಎಂದು ಪ್ರಶ್ನಿಸುತ್ತಿರಲಿಲ್ಲ. ವ್ಯತ್ಯಾಸವೆಂದರೆ 2008ರಲ್ಲಿ ಪ್ರಧಾನಮಂತ್ರಿ ಪರಮಾಣು ಒಪ್ಪಂದಕ್ಕಾಗಿ ಅಮೆರಿಕಕ್ಕೆ ಹೋಗುತ್ತಿದ್ದರೇ ವಿನಃ ಸ್ಟೇಜ್ ಕಾರ್ಯಕ್ರಮಕ್ಕಾಗಿ ಅಲ್ಲ. ದೇಶದ ಜನರಿಗೆ ಅರ್ಥವಾಗುತ್ತಿದೆ. ದೇಶದಲ್ಲಿ ನಿರುದ್ಯೋಗ ಯಾಕೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ?, ಇದಕ್ಕೆ ಕಾರಣವೇನು? ದೇಶವು ಅರ್ಥಮಾಡಿಕೊಳ್ಳುತ್ತಿದೆ. ಹರ್ಯಾಣವು ದೇಶದ ಬೆಳವಣಿಗೆಯ ಎಂಜಿನ್ ಆಗಿತ್ತು. ಇಂದು ನಿರುದ್ಯೋಗದಲ್ಲಿ ನಂಬರ್ 1 ಆಗಿದೆ. ಇದು ಯಾಕಾಗಿ ನಡೆಯಿತು?

ಪ್ರಶ್ನೆ: ನೀವು ಟಿವಿ ಚಾನೆಲ್ ಗಳಿಗೆ ಹೋಗುತ್ತೀರಿ, ದೇಶದ ಆರ್ಥಿಕತೆಯಂತಹ ಮೂಲಭೂತ ಪ್ರಶ್ನೆಗಳನ್ನು ಕೇಳುತ್ತೀರಿ, ಆಗ ಆ್ಯಂಕರ್ ಗಳ ಮುಖವಾಡ ಕಳಚುತ್ತದೆ. ಬಿಜೆಪಿಯ ವಕ್ತಾರರೊಬ್ಬರು ನಿಮ್ಮೊಂದಿಗೆ ಚರ್ಚಿಸಲು ಹಿಂದೇಟು ಹಾಕಿದ್ದರು ಎಂದು ಕೇಳಿದ್ದೆ. ದೇಶದಲ್ಲಿ ಚಾನೆಲ್ ಗಳು ಮತಗಳನ್ನು ನಿರ್ಣಯಿಸುತ್ತದೆ. ಚಾನೆಲ್ ಗಳು ಹೀಗೇಕಿದೆ?, ನಿಮ್ಮಂತಹ ವ್ಯಕ್ತಿಗಳಿಗೆ ನಿಷೇಧ ಹೇರಲು ಶುರು ಮಾಡಿದ್ದೇಕೆ?

ಗೌರವ್: ನಾನು ಜನರ ಪ್ರೀತಿಗೆ ಆಭಾರಿಯಾಗಿದ್ದೇನೆ. ನನಗೆ ಈ ಬಗ್ಗೆ ಮಾಹಿತಿಯಿಲ್ಲ ಮತ್ತು ನಾನು ಯಾರನ್ನೂ ಸೋಲಿಸುವುದಕ್ಕಾಗಿ ಟಿವಿ ಶೋಗಳಿಗೆ ಹೋಗುತ್ತಿಲ್ಲ. ನಾನು ನನ್ನ ಪಕ್ಷ ಮತ್ತು ವೈಯಕ್ತಿಕ ವಿಚಾರಧಾರೆಗಳ ಬಗ್ಗೆ ಮಾತನಾಡುತ್ತೇನೆ.

ಪ್ರಶ್ನೆ: ರಾಷ್ಟ್ರವಾದದ ಹೆಸರಿನಲ್ಲಿ, ಹಿಂದೂ ಮುಸ್ಲಿಮರ ಹೆಸರಿನಲ್ಲಿ, ದೇಶದಲ್ಲಿ ಅತಾರ್ಕಿಕ ಮಾತುಗಳನ್ನಾಡಲಾಗುತ್ತಿದೆ. ನೀವು ಸಾಮಾನ್ಯ ಪ್ರಶ್ನೆಗಳನ್ನು ಕೇಳುತ್ತೀರಿ, 5 ಟ್ರಿಲಿಯನ್ ಗೆ ಎಷ್ಟು ಸೊನ್ನೆಗಳಿವೆ ಎಂದು ನೀವು ಪ್ರಶ್ನೆ ಕೇಳಿ ಅವರ ಜ್ಞಾನವನ್ನು ಪರೀಕ್ಷಿಸಿದಿರಿ. ಈ ಬಗ್ಗೆ ನೀವೇನು ಹೇಳುತ್ತೀರಿ?

ಗೌರವ್: ದೇಶದ ಜನರಿಗೆ ಸುಳ್ಳು ಮತ್ತು ಸತ್ಯಗಳೆರಡೂ ಅರ್ಥವಾಗುತ್ತದೆ ಎಂದು ನಾನು ಅಂದುಕೊಳ್ಳುತ್ತೇನೆ. 

ಪ್ರಶ್ನೆ: ಬಿಜೆಪಿ ರಾಜ್ಯಸಭಾ ಸದಸ್ಯರೊಬ್ಬರು ಅತ್ಯಾಚಾರಕ್ಕೆ ನಮ್ಮ ಸಂಪ್ರದಾಯದಲ್ಲಿ ಶಿಕ್ಷೆಯಿಲ್ಲ ಎಂದಿದ್ದರು. ಈ ಬಗ್ಗೆ ನೀವೇನು ಹೇಳುತ್ತೀರಿ?

ಗೌರವ್: ಈ ಬಗ್ಗೆ ನಾನೇನು ಹೇಳುವುದು. ಮೋಹನ್ ಭಾಗವತ್ ಅತೀ ದೊಡ್ಡ ಆರ್ಥಿಕ ತಜ್ಞ ಎಂದು ನನಗೆ 3 ದಿನಗಳ ಹಿಂದಷ್ಟೇ ಗೊತ್ತಾಯಿತು. ಆರ್ಥಿಕತೆಯ ಬಗ್ಗೆ ಅವರು ಮಾತನಾಡಲು ಆರಂಭಿಸಿದ್ದಾರೆ. ದಸರಾ ಉತ್ಸವದಲ್ಲಿ ಮಾತನಾಡಿದ್ದ ಅವರು ಇಂದು ಮಾರುಕಟ್ಟೆ ಮಂದವಾಗಿಲ್ಲ ಎಂದರು. ನಂತರ ಮಾರುಕಟ್ಟೆ ಮಂದವಾಗಿದೆ, ಆದರೆ ಅದರ ಮಾತನಾಡಬೇಡಿ, ಭಾವನೆಗೆ ಧಕ್ಕೆ ಆಗುತ್ತದೆ ಎಂದರು. ಇಂತಹ ಜನರು ಆರ್ಥಿಕ ತಜ್ಞರಾದಾಗ ನೋಟು ನಿಷೇಧವಾಗುತ್ತದೆ. ನಿಮಗೆ ಯಾವುದಾದರೂ ವಿಷಯವು ಅರ್ಥವಾಗುವುದಿಲ್ಲವಾದರೆ ನೀವು ಅದರ ಬಗ್ಗೆ ಮಾತನಾಡಬೇಡಿ ಎಂದು ನಾನು ಹೇಳುತ್ತೇನೆ. ಇನ್ನು ಅತ್ಯಾಚಾರದ ಬಗೆಗಿನ ಹೇಳಿಕೆ ಬಗ್ಗೆ ಮಾತನಾಡುವುದಾದರೆ, ಹರ್ಯಾಣದಲ್ಲಿ ನಿಮ್ಮದೇ ಸರಕಾರವಿದೆ. ದೇಶದಲ್ಲಿ ಪ್ರತಿ ವರ್ಷ 1.3 ಲಕ್ಷ ಸಾಮೂಹಿಕ ಅತ್ಯಾಚಾರ ಘಟನೆಗಳು ನಡೆಯುತ್ತವೆ. ಹರ್ಯಾಣದಲ್ಲಿ 1.5 ಲಕ್ಷದಷ್ಟು ಇಂತಹ ಘಟನೆಗಳು ನಡೆಯುತ್ತವೆ. ಯಾಕಾಗಿ?, ಇದಕ್ಕಾಗಿ ಯಾವುದೇ ಕಾನೂನುಗಳಿಲ್ಲ ಎಂದು ಹೇಳುವುದಾದರೆ ನಾನೊಂದು ಮಾತು ಹೇಳುತ್ತೇನೆ. ಬಿಜೆಪಿ ಬಳಿ 4 ಉತ್ತರಗಳಿವೆ. ಬಿಜೆಪಿಯು ಯಾವುದೇ ಪ್ರಶ್ನೆಗೆ 5ನೆ ಉತ್ತರ ನೀಡುವುದಿಲ್ಲ ಎಂದು ನಾನು ಸವಾಲು ಹಾಕುತ್ತೇನೆ. ಮೊದಲ ಉತ್ತರ ರಾಹುಲ್ ಗಾಂಧಿ, ನಂತರ ಸೋನಿಯಾ ಗಾಂಧಿ, ಮೂರನೆಯದ್ದು ನೆಹರೂ.. ಇದ್ಯಾವುದೂ ನಡೆಯದಿದ್ದರೆ ಪಾಕಿಸ್ತಾನ ಅಥವಾ ಇಮ್ರಾನ್ ಖಾನ್. ನನಗೆ ಕಷ್ಟವಾಗುವುದು ಏನೆಂದರೆ ನನ್ನ ದೇಶದ ಪ್ರಧಾನಿಯ ತುಲನೆಯನ್ನು ಇಮ್ರಾನ್ ಖಾನ್ ಜೊತೆ ಮಾಡಲಾಗುತ್ತದೆ. ಟಿವಿಗಳಲ್ಲಿ 'ಮೋದಿಗಾಗಿ ಇಷ್ಟು ದೊಡ್ಡ ರೆಡ್ ಕಾರ್ಪೆಟ್, ಇಮ್ರಾನ್ ಖಾನ್ ಗಾಗಿ ರೆಡ್ ಕಾರ್ಪೆಟ್ ಇಲ್ಲ' ಎಂದು ಚರ್ಚೆ ಮಾಡಲಾಗುತ್ತದೆ. ಇಮ್ರಾನ್ ಖಾನ್ ಅಸ್ತಿತ್ವದಲ್ಲಿಲ್ಲದ ವಿಚಾರ ಎಂದು ನಾನು ಹೇಳಲು ಬಯಸುತ್ತೇನೆ. ಭಾರತದ ಜನರ ಜೊತೆ ಆ ಹೇಡಿ ದೇಶದ ಹೋಲಿಕೆಯೇಕೆ?, ಭಾರತದ ಆರ್ಥಿಕತೆಯ ಜೊತೆ ಆ ಹೇಡಿ ದೇಶದೊಂದಿಗೆ ಏಕೆ ತುಲನೆ?, ನಮ್ಮ ದೇಶದ ಪ್ರಧಾನಿಯ ತುಲನೆ ಟ್ರಂಪ್ ಅಥವಾ ಕ್ಸಿ ಜಿನ್ ಪಿಂಗ್ ಜೊತೆ ಮಾಡಬೇಕು ಎಂದು ನಾನು ಬಯಸುತ್ತೇನೆ.

ಪ್ರಶ್ನೆ: ಮೋದಿಜಿಯ ಭಾಷಣಗಳಲ್ಲಿ ಹಲವು ತಪ್ಪುಗಳಾಗುತ್ತವೆ, ಅವರು ಸುಳ್ಳು ಹೇಳುತ್ತಾರೆ. ಅಮಿತ್ ಶಾಗೂ ಇದು ನಡೆಯುತ್ತದೆ. ಇದಕ್ಕೆ ನೀವು ತಿರುಗೇಟು ನೀಡಬಹುದೇ?

ಗೌರವ್: ಅವಕಾಶ ಸಿಕ್ಕರೆ ನಾನು ಖಂಡಿತವಾಗಿಯೂ ಮಾತನಾಡುತ್ತೇನೆ. ಪ್ರಧಾನಿ ಅವಕಾಶ ನೀಡಿದರೆ ನಾನು ಮಾತನಾಡಲು ತಯಾರಿದ್ದೇನೆ. ನಿರ್ಮಲಾ ಜಿಯವರು ನನ್ನ ಮಾತು ಕೇಳುವುದಾದರೆ ಆರ್ಥಿಕತೆಯ ಬಗ್ಗೆ ನಾನು ಮೇಲ್ ಮಾಡಲು ಕೂಡ ತಯಾರಿದ್ದೇನೆ. ಆದರೆ ಅವರು ಕೇಳುವುದಿಲ್ಲ. ಅವರು ಅವರ ಮಂತ್ರಿಗಳ ಮಾತನ್ನೇ ಕೇಳುವುದಿಲ್ಲ. ಇನ್ನು ನಮ್ಮ ಮಾತು ಕೇಳುತ್ತಾರಾ?

ಪ್ರಶ್ನೆ: ಇತಿಹಾಸ ಶಿಕ್ಷಕ ಆರ್ ಬಿಐ ಗವರ್ನರ್ ಬಗ್ಗೆ?

ಗೌರವ್: ನಾನು ಈಗಾಗಲೇ ಅವರ ಬಗ್ಗೆ ಮಾತನಾಡಿದ್ದೇನೆ. ಶ್ರೀಲಂಕಾ, ಬಾಂಗ್ಲಾದೇಶ, ಬೂತಾನ್ ಎಲ್ಲಿ ಬೇಕಾದರೂ ನೋಡಿ, ಈ ದೇಶಗಳ ಕೇಂದ್ರ ಬ್ಯಾಂಕ್ ಗವರ್ನರ್ ವಿದೇಶಗಳಲ್ಲಿ ಅರ್ಥಶಾಸ್ತ್ರ ಕಲಿತವರು. ಆದರೆ ಟ್ರಿಲಿಯನ್ ಡಾಲರ್ ದೇಶವಾದ ಭಾರತದ ಆರ್ ಬಿಐ ಗವರ್ನರ್ ರ ಶಿಕ್ಷಾರ್ಹತೆ ಇತಿಹಾಸ. ಆರ್ ಬಿಐಯನ್ನು ಇತಿಹಾಸ ಮಾಡಲು ಇವರು ಹೊರಟಿದ್ದಾರೆಯೇ?. ಆರ್ಥಿಕ ವಿಷಯಗಳ ಬಗ್ಗೆ ಜ್ಞಾನವಿರುವ ಒಬ್ಬ ವ್ಯಕ್ತಿ ಕೂಡ ನಿಮಗೆ ಈ ದೇಶದಲ್ಲಿ ಸಿಕ್ಕಿಲ್ಲವೇ ಎಂದು ನಾನು ಮೋದಿಗೆ ಕೇಳಬಯಸುತ್ತೇನೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News