'ನೊಬೆಲ್ ಪುರಸ್ಕೃತ' ಅಭಿಜಿತ್ ಬ್ಯಾನರ್ಜಿ ಚಿಂತನೆಗಳನ್ನು ದೇಶದ ಜನರು ತಿರಸ್ಕರಿಸಿದ್ದಾರೆ: ಕೇಂದ್ರ ಸಚಿವ ಗೋಯಲ್

Update: 2019-10-18 12:26 GMT

ಹೊಸದಿಲ್ಲಿ, ಅ.18: ಭಾರತೀಯರೊಬ್ಬರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ದೊರಕಿರುವುದು ಹೆಮ್ಮೆಯುಂಟು ಮಾಡಿದ್ದರೂ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅವರ ಚಿಂತನೆಗಳನ್ನು ತಾನು ಒಪ್ಪುವುದಿಲ್ಲ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆಗಳ  ಸಚಿವ ಪಿಯೂಷ್ ಗೊಯಲ್ ಹೇಳಿದ್ದಾರೆ.

ಭಾರತದ ಆರ್ಥಿಕತೆಯ ದುಸ್ಥಿತಿಯ ಕುರಿತಂತೆ ಬ್ಯಾನರ್ಜಿ ಅವರ ಅಭಿಪ್ರಾಯಗಳ ಬಗ್ಗೆ ಕೇಳಿದಾಗ ಅವರು ಸಂಪೂರ್ಣವಾಗಿ ಎಡಪಂಥೀಯ ಚಿಂತನೆಯುಳ್ಳವರು ಹಾಗೂ ಜನರು ಸಂಪೂರ್ಣವಾಗಿ ತಿರಸ್ಕರಿಸಿದ ಕಾಂಗ್ರೆಸ್ ಪಕ್ಷದ 'ನ್ಯಾಯ್' ಪ್ರಸ್ತಾಪದ ಬೆಂಬಲಿಗರು ಎಂದು ಗೋಯಲ್ ಹೇಳಿದರು.

"ಅಭಿಜಿತ್ ಬ್ಯಾನರ್ಜಿಯವರಿಗೆ ನೊಬೆಲ್ ಪ್ರಶಸ್ತಿ ದೊರಕಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಅವರು ಕಾಂಗ್ರೆಸ್ ಚುನಾವಣಾ ಆಶ್ವಾಸನೆಯಾದ 'ನ್ಯಾಯ್' ಯೋಜನೆಯನ್ನು ಬಹಳಷ್ಟು ಬೆಂಬಲಿಸಿ ಹೊಗಳಿದ್ದಾರೆ. ಆದರೆ ಜನರು ಅದನ್ನು ತಿರಸ್ಕರಿಸಿದರು. ಅವರಿಗೆ ನೊಬೆಲ್ ಪ್ರಶಸ್ತಿ ದೊರಕಿರುವುದು ಹೆಮ್ಮೆಯ ಸಂಗತಿ. ಆದರೆ ಅದಕ್ಕಾಗಿ ಅವರ ಎಲ್ಲಾ ಮಾತುಗಳನ್ನೂ ಒಪ್ಪಬೇಕೆಂದೇನಿಲ್ಲ. ಮುಖ್ಯವಾಗಿ ಅವರ ಸಲಹೆಯನ್ನು ಈ ದೇಶದ ಜನರೇ ತಿರಸ್ಕರಿಸಿರುವಾಗ ನಾವು ಅವರ  ಚಿಂತನೆಗಳನ್ನು ಒಪ್ಪಬೇಕಾಗಿಲ್ಲ'' ಎಂದು ಗೋಯಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News