ಉ.ಪ್ರದೇಶ: ಗಂಟಲು ಸೀಳಿ ಹಿಂದು ಸಮಾಜ ಪಕ್ಷದ ಮುಖಂಡ ತಿವಾರಿ ಹತ್ಯೆ

Update: 2019-10-18 15:56 GMT

ಲಕ್ನೊ, ಅ.18: ಹಿಂದು ಸಮಾಜ ಪಕ್ಷದ ಮುಖಂಡ ಕಮಲೇಶ್ ತಿವಾರಿಯ ಮೇಲೆ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ನಡೆಸಿ ಗಂಟಲು ಸೀಳಿದ ಘಟನೆ ಲಕ್ನೊದಲ್ಲಿ ನಡೆದಿದೆ. ತೀವ್ರ ಗಾಯಗೊಂಡಿದ್ದ ತಿವಾರಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

ಲಕ್ನೊದ ಖುರ್ಷಿದ್‌ಬಾಗ್‌ನಲ್ಲಿರುವ ಹಿಂದು ಸಮಾಜ ಪಕ್ಷದ ಕಚೇರಿಯಲ್ಲಿ ಈ ಘಟನೆ ನಡೆದಿದೆ. ತಿವಾರಿಯನ್ನು ಭೇಟಿಯಾಗುವ ನೆಪದಲ್ಲಿ ಕಚೇರಿ ಪ್ರವೇಶಿಸಿದ ದುಷ್ಕರ್ಮಿಗಳು ಅವರೆದುರು ಕುಳಿತು ಚಹಾ ಕುಡಿದಿದ್ದಾರೆ. ಬಳಿಕ ಅವರ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ. ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ತಿವಾರಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಘಟನಾ ಸ್ಥಳದಿಂದ ದೇಶೀಯ ನಿರ್ಮಿತ ಪಿಸ್ತೂಲ್ ಹಾಗೂ ತೋಟಾಗಳನ್ನು ವಶಪಡಿಸಿಕೊಂಡಿದ್ದು ದುಷ್ಕರ್ಮಿಗಳ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಹಿಂದೆ ಹಿಂದು ಮಹಾಸಭಾದಲ್ಲಿದ್ದ ತಿವಾರಿ ಬಳಿಕ ಹಿಂದು ಸಮಾಜ ಪಕ್ಷವನ್ನು ಸ್ಥಾಪಿಸಿದ್ದರು. 2015ರಲ್ಲಿ ಪ್ರವಾದಿ ಮುಹಮ್ಮದರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿದ್ದು ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ)ಯಡಿ ಪ್ರಕರಣ ದಾಖಲಿಸಲಾಗಿತ್ತು. ತಿವಾರಿ ಈಗ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು ಇವರ ವಿರುದ್ಧದ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯ ಪ್ರಕರಣವನ್ನು ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News