ಆದಿತ್ಯನಾಥ್ ಸರಕಾರ ನಮ್ಮನ್ನು ವಂಚಿಸಿದೆ: ಹತ್ಯೆಗೀಡಾದ ಹಿಂದೂ ಸಮಾಜ್ ಪಕ್ಷದ ನಾಯಕನ ತಾಯಿ

Update: 2019-10-19 14:35 GMT

“ಉತ್ತರ ಪ್ರದೇಶ ಪೊಲೀಸರಿಂದ ಸೊಸೆಗೆ ಥಳಿತ”

ಹೊಸದಿಲ್ಲಿ, ಅ.19: ಕಮಲೇಶ್ ತಿವಾರಿ ಹತ್ಯೆ ಪ್ರಕರಣವನ್ನು ಭೇದಿಸಿದ್ದೇವೆ ಎಂಬ ಉತ್ತರ ಪ್ರದೇಶ ಪೋಲಿಸರ ಹೇಳಿಕೆಯನ್ನು ತಿರಸ್ಕರಿಸಿರುವ ಅವರ ತಾಯಿ ಕುಸುಮ್ ತಿವಾರಿ ಅವರು,ಪದೇ ಪದೇ ಮನವಿಗಳನ್ನು ಮಾಡಿಕೊಂಡಿದ್ದರೂ ತನ್ನ ಪುತ್ರನಿಗೆ ಸಾಕಷ್ಟು ಭದ್ರತೆಯನ್ನು ಒದಗಿಸದೆ ರಾಜ್ಯ ಸರಕಾರವು ತನ್ನ ಕುಟುಂಬವನ್ನು ವಂಚಿಸಿದೆ ಎಂದು ಶನಿವಾರ ಆರೋಪಿಸಿದ್ದಾರೆ.

ಪೊಲೀಸರು ಕೆಲವು ಅಮಾಯಕ ವ್ಯಕ್ತಿಗಳನ್ನು ಪರೇಡ್ ಮಾಡಿಸಿ ಇವರೇ ಹಂತಕರು ಎಂದು ಹೇಳುತ್ತಾರೆ ಮತ್ತು ನಿಜವಾದ ಹಂತಕರಿಗೆ ರಕ್ಷಣೆ ನೀಡುತ್ತಾರೆ. ತನ್ನ ಕುಟುಂಬವನ್ನು ವಂಚಿಸಿರುವ ಈ ಸರಕಾರದಿಂದ ಏನನ್ನು ಮಾಡಲು ಸಾಧ್ಯವಿದೆ ಎಂದು ಆಂಗ್ಲ ಸುದ್ದಿವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಪ್ರಶ್ನಿಸಿದ್ದಾರೆ.

ಹಿಂದೂ ಸಮಾಜ್ ಪಾರ್ಟಿಯ ಸ್ಥಾಪಕ ಕಮಲೇಶ ತಿವಾರಿ ಅವರನ್ನು ಶುಕ್ರವಾರ ಲಕ್ನೋದ ಅವರ ನಿವಾಸದಲ್ಲಿ ಹತ್ಯೆ ಮಾಡಲಾಗಿತ್ತು.

“ಸರಕಾರವು ಮಗನಿಗೆ ಸಾಕಷ್ಟು ರಕ್ಷಣೆ ಒದಗಿಸಿದ್ದಿದ್ದರೆ ಈ ದುರಂತ ನಡೆಯುತ್ತಿರಲಿಲ್ಲ ಮತ್ತು ಆತ ಬದುಕಿರುತ್ತಿದ್ದ” ಎಂದಿರುವ ಕುಸುಮ್, “ಈ ಸರಕಾರದಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಏನೂ ಇಲ್ಲ” ಎಂದು ಹೇಳಿದ್ದಾರೆ.

ಆದಿತ್ಯನಾಥ್ ಆಡಳಿತದಲ್ಲಿ ಭದ್ರತೆ ತಗ್ಗಿಸಲಾಗಿತ್ತು

ಆದಿತ್ಯನಾಥ್ ಅವರು ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ಕಮಲೇಶಗೆ ನೀಡಿದ್ದ ಭದ್ರತೆಯನ್ನು ಗಣನೀಯವಾಗಿ ಕಡಿತಗೊಳಿಸಲಾಗಿತ್ತು. ಹಿಂದಿನ ಸರಕಾರದಲ್ಲಿ 17 ಪೊಲಿಸರನ್ನು ತನ್ನ ಮಗನ ರಕ್ಷಣೆಗೆ ನಿಯೋಜಿಸಲಾಗಿತ್ತು. ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ಪೊಲೀಸರ ಸಂಖ್ಯೆಯನ್ನು ನಾಲ್ಕಕ್ಕೆ ತಗ್ಗಿಸಲಾಗಿತ್ತು. ಇಬ್ಬರು ತನ್ನ ಮಗನ ಬೆಂಗಾವಲಿಗಿದ್ದರೆ,ಇಬ್ಬರು ಪಕ್ಷದ ಕಚೇರಿಯಲ್ಲಿರುತ್ತಿದ್ದರು.

 ಮಗನ ಹತ್ಯೆಯಾದ ದಿನ ಒಬ್ಬರೂ ಆತನ ಜೊತೆಯಿರಲಿಲ್ಲ ಎನ್ನುವುದು ಅಚ್ಚರಿ ಹುಟ್ಟಿಸಿದೆ ಎಂದ ಕುಸುಮ್,ನಾಲ್ವರು ಪೊಲೀಸರ ಬದಲು ವಯಸ್ಸಾದ ಗೃಹರಕ್ಷಕನೋರ್ವ ಕಮಲೇಶ್ ಜೊತೆಯಲ್ಲಿದ್ದ. ಆತನ ಬಳಿ ದೊಣ್ಣೆ ಮಾತ್ರವಿತ್ತು. ದುಷ್ಕರ್ಮಿಗಳು ಆತನಿಗೆ ತಪರಾಕಿ ನೀಡಿದ್ದರು ಮತ್ತು ಅದಕ್ಕೆ ಪ್ರತಿಕ್ರಿಯಿಸಲೂ ಆತನಿಗೆ ಸಾಧ್ಯವಾಗಿರಲಿಲ್ಲ ಎಂದರು.

ಪೊಲೀಸರಿಂದ ಕಿರುಕುಳ; ಸೊಸೆಗೆ ಥಳಿತ

ಮಗನ ಸಾವಿನ ಬಳಿಕ ಉ.ಪ್ರ.ಪೊಲೀಸರು ತನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಕುಸುಮ್,ದಂಗೆಗಳು ನಡೆಯುತ್ತವೆ ಎಂಬ ನೆಪವೊಡ್ಡಿ ಮಗನ ಶವವನ್ನು ಹಸ್ತಾಂತರಿಸಲು ಪೊಲೀಸರು 12 ಗಂಟೆ ಕಾಲ ಕಾಯಿಸಿದ್ದರು. ಮಧ್ಯಾಹ್ನ ಒಂದು ಗಂಟೆಯಿಂದ ಶವಕ್ಕಾಗಿ ಅಂಗಲಾಚುತ್ತಿದ್ದರೂ ಅವರು ಶನಿವಾರ ನಸುಕಿನ ಎರಡು ಗಂಟೆಗೆ ಕಮಲೇಶ್ ಶವವನ್ನು ಒಪ್ಪಿಸಿದ್ದರು. ಕಮಲೇಶ್ ಶವವನ್ನು ಪಕ್ಷದ ಕಚೇರಿಗೆ ಒಯ್ಯಲೂ ಪೊಲೀಸರು ಮತ್ತು ರಾಜ್ಯ ಸರಕಾರ ಅವಕಾಶ ನೀಡಲಿಲ್ಲ. ಒತ್ತಾಯಿಸಿದಾಗ ಪೊಲೀಸರು ತನ್ನನ್ನು ಕಾರಿನಲ್ಲಿ ಲಾಕ್ ಮಾಡಿದ್ದರು ಮತ್ತು ತನ್ನ ಮೊಮ್ಮಗ ಹಾಗೂ ಸೊಸೆ (ಕಮಲೇಶ ಪತ್ನಿ)ಯನ್ನು ಥಳಿಸಿದ್ದರು ಎಂದು ಆರೋಪಿಸಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, “ನಮಗೆ ವಯಸ್ಸಾಗಿದೆ,ಶೀಘ್ರವೇ ನಾವು ಸಾಯುತ್ತೇವೆ. ಸರಕಾರವು ಬಯಸಿದರೆ ಸೊಸೆ ಮತ್ತು ಆಕೆಯ ಮೂವರು ಮಕ್ಕಳನ್ನು ರಕ್ಷಿಸಬೇಕು” ಎಂದಿದ್ದಾರೆ.

ಸರಕಾರದ ಬಗ್ಗೆ ವಿಶ್ವಾಸವಿಲ್ಲ

ಕಮಲೇಶ್ ಕುಟುಂಬ ಮುಖ್ಯಮಂತ್ರಿಗಳನ್ನು ಭೇಟಿಯಾಗಬಹುದು ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಅವರು,ಮಗನ ಅಂತ್ಯಸಂಸ್ಕಾರಕ್ಕೆ ಮುನ್ನ ಆದಿತ್ಯನಾಥ್ ತನ್ನ ಕುಟುಂಬವನ್ನು ಭೇಟಿ ಮಾಡಬೇಕು ಎಂಬ ಏಕೈಕ ಬೇಡಿಕೆಯನ್ನು ಮಂಡಿಸಲಾಗಿತ್ತು. ಆದರೆ ಈ ಬೇಡಿಕೆ ಈಡೇರಿಲ್ಲ ಎಂದಿದ್ದಾರೆ.

‘ಆದಿತ್ಯನಾಥ್ ನಮ್ಮನ್ನು ಭೇಟಿಯಾಗುತ್ತಾರೋ ಇಲ್ಲವೋ ಎನ್ನ್ನುವುದು ಪ್ರಶ್ನೆಯಲ್ಲ. ನಮಗೆ ನ್ಯಾಯ ಬೇಕು. ನಮಗೆ ನ್ಯಾಯ ನಿರಾಕರಿಸಲ್ಪಟ್ಟರೆ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ’ಎಂದಿದ್ದಾರೆ.

ಬೆದರಿಕೆಗಳನ್ನು ಸರಕಾರ ಕಡೆಗಣಿಸಿತ್ತು

“ನನ್ನ ಮಗನಿಗೆ ಪದೇ ಪದೇ ಜೀವ ಬೆದರಿಕೆಗಳು ಬರುತ್ತಿದ್ದವು. ರಕ್ಷಣೆ ಕೋರಿ ನಾವು ಸರಕಾರಕ್ಕೆ ಹಲವಾರು ಮನವಿಗಳನ್ನು ಸಲ್ಲಿಸಿದ್ದೆವು. ನ್ಯಾಯಾಲಯದ ಮೊರೆಯನ್ನೂ ಹೋಗಿದ್ದೆವು. ಆದರೆ ಯಾರೂ ನಮ್ಮನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇಂದು ನನ್ನ ಮಗನನ್ನು ಯಾರಾದರೂ ಹಿಂದಿರುಗಿಸುತ್ತಾರಾ? ಯೋಗಿ ಅಥವಾ ಪ್ರಧಾನಿ ಮೋದಿ ಅಥವಾ ಭದ್ರತಾ ಪಡೆಗಳಿಂದ ನಮಗೆ ಏನೂ ಬೇಕಾಗಿಲ್ಲ. ಪ್ರತಿ ದಿನ ಪೊಲೀಸರು ನನ್ನ ಮಗನಿಗೆ ಬೆಂಗಾವಲಾಗಿ ಇರುತ್ತಿದ್ದರು. ಕೊಲೆಯ ದಿನವೇ ಆತನ ರಕ್ಷಣೆಯನ್ನೇಕೆ ಹಿಂದೆಗೆದುಕೊಳ್ಳಲಾಗಿತ್ತು” ಎಂದು ಕುಸುಮ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News