ಪ್ರಧಾನಿ ಕಚೇರಿಯಲ್ಲಿ ಅಧಿಕಾರ ಕೇಂದ್ರೀಕೃತವಾಗಿರುವುದು ಸಮಸ್ಯೆಗೆ ಮೂಲ ಕಾರಣ: ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ

Update: 2019-10-19 18:05 GMT

ಹೊಸದಿಲ್ಲಿ, ಅ.19: ಬಿಜೆಪಿ ಪಕ್ಷದವರು ಮಾಡುತ್ತಿರುವ ವೈಯಕ್ತಿಕ ಟೀಕೆಯಿಂದ ಬೇಸರವಾಗಿದೆ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಹೇಳಿದ್ದಾರೆ.

ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಪ್ರಧಾನಿಯವರ ಕಚೇರಿಯಲ್ಲಿ ಎಲ್ಲಾ ಅಧಿಕಾರ ಕೇಂದ್ರೀಕೃತಗೊಂಡಿರುವುದು, ಅಧಿಕ ಮುಖಬೆಲೆಯ ನೋಟುಗಳ ರದ್ದತಿ ಹಾಗೂ ಜಿಎಸ್‌ಟಿಯನ್ನು ತರಾತುರಿಯಿಂದ ಅನುಷ್ಠಾನಗೊಳಿಸಿರುವುದು ಈಗ ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದಿದ್ದಾರೆ.

ಆದರೆ, ಜಿಎಸ್‌ಟಿ ತೆರಿಗೆ ಪದ್ಧತಿ ಸೃಷ್ಟಿಸಿರುವ ಸಮಸ್ಯೆ ಅನಿವಾರ್ಯವಾಗಿದ್ದು, ಬೇರೆ ಯಾವ ಸರಕಾರವೂ ಜಿಎಸ್‌ಟಿಯನ್ನು ಇದಕ್ಕಿಂತ ಸಮರ್ಪಕವಾಗಿ ನಿರ್ವಹಿಸಲಿಕ್ಕಿಲ್ಲ ಎಂದೂ ಅವರು ಹೇಳಿದ್ದಾರೆ.

ಕಾರ್ಪೊರೇಟ್ ತೆರಿಗೆ ಕಡಿತ ಮಾಡಿದೊಡನೆ ಹೂಡಿಕೆಗೆ ಉತ್ತೇಜನ ದೊರಕಿ ಅಭಿವೃದ್ಧಿಗೆ ವೇಗ ದೊರಕಲಿದೆ ಎಂದು ಹೇಳಲಾಗದು. ಮೊದಲು ಬೇಡಿಕೆ ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಬೇಕಿದೆ. ಆದಾಯ ತೆರಿಗೆ ಕಡಿತದಿಂದಲ್ಲ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗಳಂತಹ ಉಪಕ್ರಮಗಳ ಮೂಲಕ ಗ್ರಾಮೀಣ ಜನರ ಜೇಬಿಗೆ ಹಣ ಸೇರಿಸಿದರೆ ಮಾತ್ರ ಬೇಡಿಕೆ ಹೆಚ್ಚಬಹುದು ಎಂದವರು ಹೇಳಿದ್ದಾರೆ.

ಗ್ರಾಮೀಣ ಹಣದುಬ್ಬರ ನಿಯಂತ್ರಿಸಲು ಸರಕಾರ ಉದ್ದೇಶಪೂರ್ವಕವಾಗಿ ಬೆಳೆಗಳಿಗೆ ಬೆಂಬಲ ಬೆಲೆ ಕಡಿಮೆಗೊಳಿಸಿದೆ. ಇದು ಗ್ರಾಮೀಣ ಮಟ್ಟದಲ್ಲಿ ಬೇಡಿಕೆ ಕುಸಿಯಲು ಕಾರಣವಾಗಿದೆ. ಆರ್ಥಿಕ ಹಿಂಜರಿತಕ್ಕೆ ಇದು ಮತ್ತೊಂದು ಪ್ರಮುಖ ಕಾರಣವಾಗಿದೆ.

ಉತ್ಪಾದನೆ, ಉತ್ಪಾದಕತೆ ಮತ್ತು ಉದ್ಯೋಗಾವಕಾಶ ಸುಧಾರಿಸಬೇಕು ಎಂದು ಹೇಳಿದ ಅವರು, ಹೈರ್ ಆ್ಯಂಡ್ ಫಯರ್(ಹೊಸ ಉದ್ಯೋಗಿಗಳನ್ನು ನೇಮಿಸುವುದು,ಹಾಲಿ ಉದ್ಯೋಗಿಗಳನ್ನು ಕೈಬಿಡುವ ನೀತಿ) ನೀತಿಗೆ ಅನುಮತಿ ನೀಡುವುದರ ಜೊತೆಗೆ ಭೂಸ್ವಾಧೀನ ನೀತಿಯನ್ನು ಸುಧಾರಿಸಬೇಕು. ಎಂನರೇಗಾ(ಗ್ರಾಮೀಣ ಉದ್ಯೋಗ ಖಾತರಿ ಯೋಜನೆ)ಯನ್ನು ಸಮರ್ಪಕವಾಗಿ ಅನುಷ್ಟಾನಿಸಬೇಕು. ಬರಗಾಲದ ಸಮಯದಲ್ಲಿ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಿಸಿಲ್ಲ ಎಂದಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಬಗ್ಗೆ ಉಲ್ಲೇಖಿಸಿದ ಅವರು, ಧ್ರುವೀಕರಣಕ್ಕೆ ಪ್ರೋತ್ಸಾಹ ನೀಡಿ, ಸುಳ್ಳು ಸುದ್ದಿ ಪ್ರಸಾರಿಸುವುದರ ಜೊತೆಗೆ ಅಸಹಿಷ್ಣುತೆಯನ್ನು ಬೆಂಬಲಿಸುವ ಮೂಲಕ ಸಾಮಾಜಿಕ ಮಾಧ್ಯಮಗಳು ಪ್ರಜಾಪ್ರಭುತ್ವದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಮತ್ತು ಇದರಿಂದ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರ ಹೆಚ್ಚಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News