ಬಾಂಗ್ಲಾದೇಶ ವಿರುದ್ಧ ಟ್ವೆಂಟಿ-20 ಸರಣಿ: ವಿರಾಟ್ ಕೊಹ್ಲಿಗೆ ವಿಶ್ರಾಂತಿ

Update: 2019-10-19 18:09 GMT

ಹೊಸದಿಲ್ಲಿ, ಅ.19: ಬಿಡುವಿಲ್ಲದ ಕ್ರಿಕೆಟ್ ಆಡುತ್ತಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನವೆಂಬರ್ 3ರಿಂದ ಆರಂಭವಾಗುವ ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಯಿಂದ ವಿಶ್ರಾಂತಿ ಪಡೆಯಲು ಸಜ್ಜಾಗಿದ್ದಾರೆ.

ಕೊಹ್ಲಿ ಕಳೆದ ವರ್ಷದ ಅಕ್ಟೋಬರ್‌ನಿಂದ ಬಿಡುವಿಲ್ಲದ ಕ್ರಿಕೆಟ್ ಆಡುತ್ತಿದ್ದಾರೆ. ಭಾರತ ಆಡಿರುವ 56 ಪಂದ್ಯಗಳ ಪೈಕಿ 48ರಲ್ಲಿ ಕೊಹ್ಲಿ ಆಡಿದ್ದಾರೆ. ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಟಿ-20 ಸರಣಿಗೆ ಅಕ್ಟೋಬರ್ 24ರಂದು ಮುಂಬೈನಲ್ಲಿ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗುತ್ತದೆ. ಆಟಗಾರರು ಕೆಲಸದ ಭಾರ ನಿಭಾಯಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಕೊಹ್ಲಿ ಜನವರಿಯಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಕೊನೆಯ ಎರಡು ಏಕದಿನ ಹಾಗೂ ಆ ಬಳಿಕ ನಡೆದಿದ್ದ ಟ್ವೆಂಟಿ-20 ಸರಣಿಯಿಂದ ಅಲ್ಪ ವಿಶ್ರಾಂತಿ ಪಡೆದಿದ್ದರು. ಬಾಂಗ್ಲಾದೇಶ ವಿರುದ್ಧ ಮುಂಬರುವ ಮೂರು ಪಂದ್ಯಗಳ ಟಿ-20 ಸರಣಿಯಿಂದ ಕೊಹ್ಲಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಕಾರ್ಯಭಾರ ನಿರ್ವಹಣೆ ಕಾರ್ಯಕ್ರಮದ ಅಡಿ ಕೊಹ್ಲಿಗೆ ಟಿ-20 ಸರಣಿಯಿಂದ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯ ಬಳಿಕ ಆಯ್ಕೆ ಸಮಿತಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಆಸ್ಟ್ರೇಲಿಯ ಸರಣಿ, ಐಪಿಎಲ್, ವಿಶ್ವಕಪ್, ವೆಸ್ಟ್‌ಇಂಡೀಸ್ ಪ್ರವಾಸ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಭಾಗಿಯಾಗಿರುವ ಕೊಹ್ಲಿಗೆ ವಿರಾಮದ ಅಗತ್ಯವಿದೆ. ಎಲ್ಲ 3 ಮಾದರಿಯ ಕ್ರಿಕೆಟ್ ಆಡುತ್ತಿರುವ ಆಟಗಾರರ ಕೆಲಸದ ಭಾರ ನಿಭಾಯಿಸುವುದು ಮೊದಲ ಆದ್ಯತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಬಾಂಗ್ಲಾದೇಶ ವಿರುದ್ಧ ದಿಲ್ಲಿಯಲ್ಲಿ ನ.3 ರಂದು ಮೊದಲ ಟಿ-20 ಪಂದ್ಯ ನಡೆದ ಬಳಿಕ ರಾಜ್‌ಕೋಟ್ ಹಾಗೂ ನಾಗ್ಪುರದಲ್ಲಿ ಕ್ರಮವಾಗಿ ನ.7 ಹಾಗೂ 10ರಂದು ಎರಡನೇ ಹಾಗೂ ಮೂರನೇ ಪಂದ್ಯ ನಡೆಯಲಿದೆ.

ಬಾಂಗ್ಲಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯು ಇಂದೋರ್‌ನಲ್ಲಿ ನ.14ರಿಂದ ಆರಂಭವಾಗಲಿದೆ. ಎರಡನೇ ಹಾಗೂ ಕೊನೆಯ ಪಂದ್ಯ ಕೋಲ್ಕತಾದಲ್ಲಿ ನ.22ರಿಂದ ಆರಂಭವಾಗುವುದು. ಭಾರತ ಡಿಸೆಂಬರ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ತಲಾ 3 ಪಂದ್ಯಗಳ ಟಿ-20 ಹಾಗೂ ಏಕದಿನ ಸರಣಿಗಳನ್ನಾಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News