ಎರಡು ವರ್ಷಗಳ ಬಳಿಕ ಸೆಮಿ ಫೈನಲ್‌ಗೆ ತೇರ್ಗಡೆಯಾದ ಆ್ಯಂಡಿ ಮರ್ರೆ

Update: 2019-10-19 18:11 GMT

ಆಂಟ್‌ವರ್ಪ್, ಅ.19: ಮಾಜಿ ವಿಶ್ವ ನಂ.1 ಆಟಗಾರ ಆ್ಯಂಡಿ ಮರ್ರೆ 2017ರ ಬಳಿಕ ಮೊದಲ ಬಾರಿ ಟೆನಿಸ್ ಟೂರ್ನಿಯೊಂದರಲ್ಲಿ ಸೆಮಿ ಫೈನಲ್ ಪ್ರವೇಶಿಸಿದರು. 2017ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಕೊನೆಯ ಬಾರಿ ಅಂತಿಮ-4ರ ಹಂತ ತಲುಪಿದ್ದರು.

32ರ ಹರೆಯದ ಬ್ರಿಟನ್‌ನ ಸ್ಟಾರ್ ಆಟಗಾರ ಮರ್ರೆ ಶುಕ್ರವಾರ ರೊಮಾನಿಯದ ಮರಿಯಸ್ ಕೊಪಿಲ್ ವಿರುದ್ಧ 6-3, 6-7(7/9), 6-4 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ವರ್ಷಾರಂಭದಲ್ಲಿ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಮರ್ರೆ ತನ್ನ ವೃತ್ತಿಜೀವನವನ್ನು ಮತ್ತೆ ರೂಪಿಸಿಕೊಳ್ಳುತ್ತಿದ್ದಾರೆ.

‘‘ನಾನೀಗ ಚೆನ್ನಾಗಿದ್ದೇನೆ. ಮುಂಬರುವ ದಿನಗಳಲ್ಲಿ ನೀವು ಮೇಲೇರುತ್ತೀರಿ ಎನ್ನುವುದು ಅತ್ಯಂತ ಮುಖ್ಯವಾಗುತ್ತದೆ’’ ಎಂದು 2017ರ ಮಾರ್ಚ್‌ನಲ್ಲಿ ದುಬೈನಲ್ಲಿ ಟ್ರೋಫಿ ಗಳಿಸಿದ ಬಳಿಕ ಮೊದಲ ಟ್ರೋಫಿ ಗೆಲ್ಲಲು ಇನ್ನು ಎರಡು ಗೆಲುವಿನಿಂದ ಹಿಂದಿರುವ ಮರ್ರೆ ಹೇಳಿದರು.

ಸದ್ಯ ವಿಶ್ವ ರ್ಯಾಂಕಿಂಗ್‌ನಲ್ಲಿ 243ನೇ ಸ್ಥಾನದಲ್ಲಿರುವ ಮರ್ರೆ 92ನೇ ರ್ಯಾಂಕಿನ ಆಟಗಾರ ಕೊಪಿಲ್ ವಿರುದ್ಧ ಎರಡೂವರೆ ಗಂಟೆಗೂ ಅಧಿಕ ಕಾಲ ಹೋರಾಡಿ ಜಯ ದಕ್ಕಿಸಿಕೊಂಡರು.

ಮರ್ರೆ ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ವಿಶ್ವದ ನಂ.70ನೇ ಆಟಗಾರ ಉಗೊ ಹಂಬರ್ಟ್‌ರನ್ನು ಮುಖಾಮುಖಿಯಾಗಲಿದ್ದಾರೆ. ಹಂಬರ್ಟ್ ಐದನೇ ಶ್ರೇಯಾಂಕದ ಗ್ಯುಡೊ ಪೆಲ್ಲಾ ವಿರುದ್ಧ 5-7, 6-4,6-4 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು.

ಅಮೆರಿಕದ ಫ್ರಾನ್ಸಿಸ್ ಟಿಯಾಫೊ ವಿರುದ್ಧ 6-4, 1-6, 6-3 ಸೆಟ್‌ಗಳ ಅಂತರದಿಂದ ಗೆಲುವು ದಾಖಲಿಸಿರುವ ಇಟಲಿಯ 18ರ ಹರೆಯದ ಆಟಗಾರ ಜನ್ನಿಕ್ ಸಿನ್ನರ್ ಐದು ವರ್ಷಗಳ ಬಳಿಕ ಎಟಿಪಿ ಟೂರ್ನಿಯಲ್ಲಿ ಸೆಮಿ ಫೈನಲ್ ತಲುಪಿದ ಮೊದಲ ಕಿರಿಯ ಆಟಗಾರ ಎನಿಸಿಕೊಂಡರು. 2014ರಲ್ಲಿ ಬಾಸೆಲ್‌ನಲ್ಲಿ 17ರ ಹರೆಯದ ಬೊರ್ನೆ ಕೊರಿಕ್ ಅಂತಿಮ-4ರ ಹಂತ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News