ಭಾರತದಲ್ಲಿ ಹೋಟೆಲ್ ಸರಿಯಿಲ್ಲ ಎಂದ ದಕ್ಷಿಣ ಆಫ್ರಿಕಾ ಕ್ರಿಕೆಟಿಗನಿಗೆ ಮಂಗಳಾರತಿ

Update: 2019-10-20 05:42 GMT

ರಾಂಚಿ: ಭಾರತ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಭಾರತ ಉಪಖಂಡದಲ್ಲಿ ಆಟದ ಲಯ ಕಂಡುಕೊಳ್ಳಲು ಹೆಣಗುತ್ತಿದ್ದು, ಸರಣಿಯಲ್ಲಿ ಪ್ರವಾಸಿ ತಂಡದ ಪರ ಶತಕ ಸಾಧಿಸಿದ ಏಕೈಕ ಆಟಗಾರ ಡೀನ್ ಎಲ್ಗರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಒಳಗಾಗಿದ್ದಾರೆ.

ಒಂದು ಪಂದ್ಯದಲ್ಲಿ ಶತಕ ಗಳಿಸಿದರೂ ಮುಂದಿನ ಮೂರು ಇನಿಂಗ್ಸ್‌ಗಳಲ್ಲಿ ಎಲ್ಗರ್ ಬ್ಯಾಟ್‌ನಿಂದ ರನ್ ಹರಿದಿಲ್ಲ. ಈ ಕಳಪೆ ಪ್ರದರ್ಶನದ ನಡುವೆಯೇ ಭಾರತದ ಹೋಟೆಲ್‌ಗಳಲ್ಲಿ ಸೌಲಭ್ಯ ಸರಿ ಇಲ್ಲ ಎಂದು ಎಲ್ಗರ್ ತಗಾದೆ ತೆಗೆದಿದ್ದಾರೆ.

"ಇದು ಸವಾಲಿನ ಸರಣಿ. ಸಣ್ಣ ಸ್ಥಳಗಳಲ್ಲಿ ಹೋಟೆಲ್‌ಗಳು ಸರಿಯಾಗಿರುವುದಿಲ್ಲ ಹಾಗೂ ಕ್ಷೇತ್ರರಕ್ಷಣೆಯೂ ಸವಾಲುದಾಯಕ’ ಎಂದು ಎಲ್ಗರ್ ಹೇಳಿದ್ದಾಗಿ ಇಎಸ್‌ಪಿಎನ್ ಕ್ರಿಕ್‌ ಇನ್ಫೋ ವರದಿ ಮಾಡಿತ್ತು.

ಎಡಗೈ ಆರಂಭಿಕ ಆಟಗಾರನ ಈ ಹೇಳಿಕೆ ಭಾರತೀಯ ಅಭಿಮಾನಿಗಳನ್ನು ಕೆರಳಿಸಿದೆ. ಆಟಗಾರನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಒಬ್ಬ ಅಭಿಮಾನಿಯಂತೂ, "2017-18ರಲ್ಲಿ ಭಾರತ ತಂಡ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾಗ, ಸ್ನಾನಕ್ಕೆ ನೀರು ಕೂಡಾ ಇರಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ನೀರಿನ ಅಭಾವ ಇರುವ ಹಿನ್ನೆಲೆಯಲ್ಲಿ ಎರಡು ನಿಮಿಷಕ್ಕಿಂತ ಹೆಚ್ಚು ಶವರ್ ಬಳಸದಂತೆ ಸೂಚಿಸಲಾಗಿತ್ತು" ಎಂದು ನೆನಪಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಎರಡು ಟೆಸ್ಟ್‌ಗಳನ್ನು ಗೆದ್ದ ಭಾರತ 2-0 ಮುನ್ನಡೆಯಲ್ಲಿದೆ. ಅಂತಿಮ ಟೆಸ್ಟ್ ಪಂದ್ಯ ರಾಂಚಿಯಲ್ಲಿ ನಡೆಯುತ್ತಿದೆ.

ಡೀನ್ ಎಲ್ಗರ್ ಅವರು ಈಗ ಹೋಟೆಲ್ ಹಾಗೂ ಆಹಾರದ ಬಗ್ಗೆ ದೂರುತ್ತಿದ್ದಾರೆ. ಇಡೀ ತಂಡದ ಸಂಸ್ಕೃತಿಯೇ ಅಧೋಗತಿಗೆ ಇಳಿದಿದೆ ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಹೇಳಿದ್ದಾರೆ. ಆಹಾರ ಮತ್ತು ಹೋಟೆಲ್ ಬಗ್ಗೆ ಎಲ್ಗರ್ ದೂರುತ್ತಿದ್ದಾರೆ. ಎಂಥ ನೆಪ; ಈ ಕ್ರೀಡಾ ಕ್ರೈಬೇಬಿಗೆ ನಾಚಿಕೆಯಾಗಬೇಕು ಎಂದು ಮತ್ತೊಬ್ಬರು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News