ಪ್ರಧಾನಿ ಮೋದಿ ಟರ್ಕಿ ಪ್ರವಾಸ ಹಠಾತ್ ರದ್ದು

Update: 2019-10-20 04:16 GMT

ಹೊಸದಿಲ್ಲಿ: ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಅವರು ವಿಶ್ವಸಂಸ್ಥೆ ಮಹಾ ಅಧಿವೇಶನದಲ್ಲಿ ಕಾಶ್ಮೀರ ಸ್ಥಿತಿಗತಿ ಬಗ್ಗೆ ಆತಂಕ ವ್ಯಕ್ತಪಡಿಸಿದ ಕಾರಣಕ್ಕೆ ಮತ್ತು ಪ್ಯಾರೀಸ್‌ನಲ್ಲಿ ಇತ್ತೀಚೆಗೆ ನಡೆದ ಹಣಕಾಸು ಕ್ರಮ ಕಾರ್ಯಪಡೆ (ಎಫ್‌ಎಟಿಎಫ್) ಅಧಿವೇಶನದಲ್ಲಿ ಪಾಕಿಸ್ತಾವನ್ನು ಬೆಂಬಲಿಸಿದ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮಾಸಾಂತ್ಯದಲ್ಲಿ ಆ ದೇಶಕ್ಕೆ ನೀಡಲು ಉದ್ದೇಶಿಸಿದ್ದ ಭೇಟಿಯನ್ನು ಹಠಾತ್ ರದ್ದುಪಡಿಸಿದ್ದಾರೆ.

ಅಂಕಾರಕ್ಕೆ ಮೋದಿಯವರು ಈ ತಿಂಗಳು ಭೇಟಿ ನೀಡಲು ನಿರ್ಧರಿಸಿದ್ದರು. ಅ. 27-28ರಂದು ಸೌದಿ ಅರೇಬಿಯಾದಲ್ಲಿ ನಡೆಯುವ ಹೂಡಿಕೆದಾರರ ಶೃಂಗದಲ್ಲಿ ಪಾಲ್ಗೊಂಡ ಬಳಿಕ ಟರ್ಕಿಗೆ ಪ್ರವಾಸ ಕೈಗೊಳ್ಳುವುದು ನಿಗದಿಯಾಗಿತ್ತು.

ಈಗಾಗಲೇ ಉಭಯ ದೇಶಗಳ ನಡುವಿನ ಬಾಂಧವ್ಯ ಅಷ್ಟೇನೂ ಉತ್ತಮವಾಗಿಲ್ಲ; ಮೋದಿ ಪ್ರವಾಸ ರದ್ದುಗೊಂಡಿರುವುದು ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಡಲು ಕಾರಣವಾಗಲಿದೆ. ಅಂಕಾರ ಪ್ರವಾಸದ ವೇಳೆ ವ್ಯಾಪಾರ ಮತ್ತು ರಕ್ಷಣಾ ಸಹಕಾರ ವಿಚಾರಗಳ ಬಗ್ಗೆ ಎರ್ದೊಗಾನ್ ಜತೆ ಮೋದಿ ಚರ್ಚಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಇದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ದೃಢಪಡಿಸಿಲ್ಲ. "ಅಂಕಾರ ಭೇಟಿ ಅಂತಿಮವಾಗಿರಲಿಲ್ಲ; ಆದ್ದರಿಂದ ರದ್ದತಿ ಪ್ರಶ್ನೆಯೇ ಉದ್ಭವಿಸುವುದಿಲ್ಲ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳು ಹೇಳಿವೆ.

ಅಂತಾಲ್ಯದಲ್ಲಿ 2015ರಲ್ಲಿ ನಡೆದ ಜಿ20 ಶೃಂಗದ ವೇಳೆ ಪ್ರಧಾನಿ ಮೋದಿ ಟರ್ಕಿಗೆ ಭೇಟಿ ನೀಡಿದ್ದರು. ಎರ್ದೊಗಾನ್  2018ರ ಜುಲೈನಲ್ಲಿ ಭಾರತಕ್ಕೆ ಎರಡು ದಿನಗಳ ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News