ಮಂಗನ ಬಾವು ಅಥವಾ ಕೆಪ್ಪಟ ಎಂದರೆ ಏನು?

Update: 2019-10-20 14:30 GMT

ಮಂಗನ ಬಾವು ಅಥವಾ ಕೆಪ್ಪಟ ಮಮ್ಸ್ ಎಂಬ ವೈರಾಣುಗಳಿಂದ ಉಂಟಾಗುವ ರೋಗವಾಗಿದ್ದು,ಪ್ಯಾರೊಟಿಡ್ ಗ್ರಂಥಿಗಳನ್ನು ದೊಡ್ಡದಾಗಿಸುವ ಮೂಲಕ ತೀವ್ರ ನೋವನ್ನುಂಟು ಮಾಡುತ್ತದೆ. ಕಿವಿಯ ಮುಂಭಾಗದಲ್ಲಿ ಕೆಳಗಡೆ ಇರುವ ಈ ಗ್ರಂಥಿಗಳು ಜೊಲ್ಲನ್ನು ಉತ್ಪಾದಿಸುತ್ತವೆ.

► ಕಾರಣಗಳು

ಕೆಪ್ಪಟ ಸಾಂಕ್ರಾಮಿಕ ರೋಗವಾಗಿದ್ದು,ಇದನ್ನುಂಟು ಮಾಡುವ ವೈರಾಣು ಸೋಂಕುಪೀಡಿತ ವ್ಯಕ್ತಿಯ ಸಂಪರ್ಕದಿಂದಾಗಿ (ದೈಹಿಕ ಸ್ಪರ್ಶ,ಎಂಜಲು,ಉಸಿರಾಟ) ಇನ್ನೊಬ್ಬ ವ್ಯಕ್ತಿಗೆ ಹರಡುತ್ತದೆ. 2ರಿಂದ 12 ವರ್ಷ ಪ್ರಾಯದ ಮಕ್ಕಳು ಈ ಸೋಂಕಿಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ವಯಸ್ಸಾದವರಲ್ಲಿ ಪ್ಯಾರೊಟಿಡ್ ಗ್ರಂಥಿಗಳ ಜೊತೆಗೆ ವೃಷಣಗಳು, ಮೇದೋಜ್ಜೀರಕ ಗ್ರಂಥಿ ಮತ್ತು ನರಮಂಡಲದಂತಹ ಇತರ ಅಂಗಾಂಗಗಳೂ ಈ ಸೋಂಕಿಗೊಳಗಾಗಬಹುದು. ಸಾಮಾನ್ಯವಾಗಿ ವೈರಾಣು ಸೋಂಕು ಉಂಟಾದ 12ರಿಂದ 14 ದಿನಗಳಲ್ಲಿ ರೋಗದ ಲಕ್ಷಣಗಳು ಪ್ರಕಟವಾಗುತ್ತವೆ.

► ಲಕ್ಷಣಗಳು

ಆರಂಭದಲ್ಲಿ ಒಂದು ಪಾರ್ಶ್ವದಲ್ಲಿ ಪ್ಯಾರೊಟಿಡ್ ಗ್ರಂಥಿಗಳು ಊದಿಕೊಂಡು ತೀವ್ರ ನೋವನ್ನುಂಟು ಮಾಡುತ್ತದೆ ಮತ್ತು 3ರಿಂದ 5 ದಿನಗಳಲ್ಲಿ ಎರಡೂ ಪಾರ್ಶ್ವಗಳಿಗೆ ಹರಡುತ್ತದೆ. ಆಹಾರವನ್ನು ಅಗಿಯುವಾಗ ಮತ್ತು ನುಂಗುವಾಗ ನೋವು ಹೆಚ್ಚಾಗುತ್ತದೆ. ಜೊಲ್ಲಿನ ಉತ್ಪಾದನೆಯನ್ನು ಹೆಚ್ಚಿಸುವ ಹುಳಿ ಆಹಾರಗಳು ಮತ್ತು ರಸಗಳೂ ನೋವನ್ನು ಹೆಚ್ಚಿಸುತ್ತವೆ.

ರೋಗಿಗಳಲ್ಲಿ ಅತಿಯಾದ ಜ್ವರ ಮತ್ತು ತಲೆನೋವು ಕಾಣಿಸಿಕೊಳ್ಳುವುದರ ಜೊತೆಗೆ ಹಸಿವು ಕುಂಠಿತಗೊಳ್ಳುತ್ತದೆ. ಸಾಮಾನ್ಯವಾಗಿ 3ರಿಂದ 4 ದಿನಗಳಲ್ಲಿ ಜ್ವರವು ಕಡಿಮೆಯಾಗುತ್ತದೆ ಮತ್ತು 7ರಿಂದ 10 ದಿನಗಳಲ್ಲಿ ಪ್ಯಾರೊಟಿಡ್ ಗ್ರಂಥಿಗಳ ಊತವು ಇಳಿಯತೊಡಗುತ್ತದೆ. ಈ ಅವಧಿಯಲ್ಲಿ ರೋಗಿಯನ್ನು ಇತರ ಮಕ್ಕಳಿಂದ ದೂರವಿಡಬೇಕು ಮತ್ತು ಶಾಲೆಗೆ ಕಳುಹಿಸಬಾರದು. ವಯಸ್ಸಾದವರಲ್ಲಿ ವೃಷಣಗಳಲ್ಲಿ ಊತ ಮತ್ತು ನೋವು ಕಾಣಿಸಿಕೊಳ್ಳಬಹುದು (ಆರ್ಕೈಟಿಸ್).

ಕೆಪ್ಪಟವು ಮಿದುಳಿನ ಉರಿಯೂತಕ್ಕೂ (ಎನ್ಸಿಫಾಲಿಟಿಸ್) ಕಾರಣವಾಗಬಹುದು. ತೀವ್ರ ತಲೆನೋವು,ಕುತ್ತಿಗೆಯ ಭಾಗವು ಸೆಟೆದುಕೊಳ್ಳುವುದು, ಅರೆ ನಿದ್ರಾವಸ್ಥೆ,ಫಿಟ್ಸ್,ಅತಿಯಾದ ವಾಂತಿ,ಅತಿಯಾದ ಜ್ವರ,ಹೊಟ್ಟೆನೋವು ಮತ್ತು ವೃಷಣಗಳಲ್ಲಿ ಊತದಂತಹ ಲಕ್ಷಣಗಳಿದ್ದರೆ ವೈದ್ಯರನ್ನು ತಕ್ಷಣ ಸಂಪರ್ಕಿಸಬೇಕು.

► ಕೆಪ್ಪಟಕ್ಕೆ ಚಿಕಿತ್ಸೆ ಏನು?

ಕೆಪ್ಪಟ ಅಥವಾ ಮಮ್ಸ್ಸ್‌ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯಿಲ್ಲವಾದರೂ ಔಷಧಿಗಳ ಮೂಲಕ ವಿವಿಧ ಲಕ್ಷಣಗಳನ್ನು ಶಮನಗೊಳಿಸಬಹುದು. ಸಾಮಾನ್ಯವಾಗಿ ಆ್ಯಂಟಿಬಯಾಟಿಕ್‌ಗಳನ್ನು ವೈದ್ಯರು ಶಿಫಾರಸು ಮಾಡುವುದಿಲ್ಲ. ಪ್ಯಾರಾಸಿಟಮಲ್‌ನಂತಹ ಔಷಧಿಗಳ ಮೂಲಕ ಜ್ವರವನ್ನು ನಿಯಂತ್ರಿಸಲಾಗುತ್ತದೆ ಮತ್ತು ಇದು ನೋವನ್ನೂ ಶಮನಗೊಳಿಸುತ್ತದೆ. ಮಕ್ಕಳಿಗೆ ಆ್ಯಸ್ಪಿರಿನ್ ಅನ್ನು ನೀಡಕೂಡದು. ರೋಗಿಗೆ ಸೇವಿಸಲು ಸುಲಭವಾದ ದ್ರವಾಹಾರಗಳನ್ನೇ ಹೆಚ್ಚಾಗಿ ನೀಡಬೇಕು. ಜೊಲ್ಲಿನ ಉತ್ಪಾದನೆಯನ್ನು ಹೆಚ್ಚಿಸುವ ಹುಳಿ ಆಹಾರಗಳು ಮತ್ತು ಜ್ಯೂಸ್‌ಗಳಿಂದ ರೋಗಿಯನ್ನು ದೂರವಿರಿಸಬೇಕು. ಕೆಪ್ಪಟ ಪೀಡಿತ ಮಕ್ಕಳು ಇಡೀ ದಿನ ಹಾಸಿಗೆಯಲ್ಲಿಯೇ ಬಿದ್ದುಕೊಳ್ಳುವ ಅಗತ್ಯವಿಲ್ಲ.

► ರೋಗವನ್ನು ತಡೆಯುವುದು ಹೇಗೆ?

ಒಮ್ಮೆ ಕೆಪ್ಪಟವುಂಟಾಗಿ ಗುಣಮುಖವಾದ ಮೇಲೆ ಮತ್ತೆ ಉಂಟಾಗುವುದಿಲ್ಲ ಮತ್ತು ಶರೀರವು ಅದರ ವಿರುದ್ಧ ಆಜೀವ ಪ್ರತಿರೋಧಕ ಶಕ್ತಿಯನ್ನು ಗಳಿಸಿಕೊಂಡಿರುತ್ತದೆ. ಕೆಪ್ಪಟಕ್ಕೆ ಗುರಿಯಾಗಿರದ ಮಕ್ಕಳಿಗಾಗಿ ಅದರ ವಿರುದ್ಧ ರಕ್ಷಣೆ ನೀಡಲು ಲಸಿಕೆಗಳು ಲಭ್ಯವಿವೆ. ಎಂಎಂಆರ್ ಎಂಬ ಲಸಿಕೆಯು ಮೀಸಲ್ಸ್ (ದಡಾರ),ಮಮ್ಸ್ (ಕೆಪ್ಪಟ) ಮತ್ತು ರುಬೆಲ್ಲಾ (ಜರ್ಮನ್ ದಡಾರ) ಈ ಮೂರೂ ವೈರಾಣು ಸೋಂಕುಗಳ ವಿರುದ್ಧ ರಕ್ಷಣೆ ನೀಡುತ್ತದೆ. ಈ ಲಸಿಕೆಯನ್ನು ಮಕ್ಕಳಿಗೆ 15 ತಿಂಗಳ ಪ್ರಾಯದಲ್ಲಿ ಕೊಡಿಸಬೇಕಾಗುತ್ತದೆ. ಒಂದು ವರ್ಷಕ್ಕಿಂತ ಕಡಿಮೆ ಪ್ರಾಯದ ಹಸುಳೆಗಳಿಗೆ,ಜ್ವರದಿಂದ ಬಳುತ್ತಿರುವ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಈ ಲಸಿಕೆಯನ್ನು ನೀಡಬಾರದು.

► ಅಪಾಯಗಳು

ಕೆಪ್ಪಟವು ಕೆಲವೊಮ್ಮೆ ಮಿದುಳಿನ ಸೋಂಕನ್ನುಂಟು ಮಾಡಬಹುದು ಮತ್ತು ಮಿದುಳಿನ ಉರಿಯೂತ (ಎನ್ಸಿಫಾಲಿಟಿಸ್)ಕ್ಕೆ ಕಾರಣವಾಗಬಹುದು ಮತ್ತು ಇದು ಗಂಭೀರ ರೋಗವಾಗಿದ್ದು,ಮಾರಣಾಂತಿಕವೂ ಆಗಬಹುದು. ಪುರುಷರಲ್ಲಿ ವೃಷಣಗಳು ಮಮ್ಸ್ ಸೋಂಕಿಗೊಳಗಾದರೆ ಸಂತಾನ ಶಕ್ತಿ ನಷ್ಟವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News