ಪ್ರಿಯಾಂಕಾ ಎರಡನೇ ಇಂದಿರಾ ಗಾಂಧಿ: ಕಾಂಗ್ರೆಸ್ ನಾಯಕ ಅಜಯ್ ಕುಮಾರ್

Update: 2019-10-20 15:53 GMT

ಲಕ್ನೊ, ಅ.20: ಪ್ರಿಯಾಂಕಾ ಗಾಂಧಿ ಎರಡನೇ ಇಂದಿರಾಗಾಂಧಿಯಾಗಿದ್ದು ಅವರು ಬಿರುಗಾಳಿಯ ರೀತಿಯ ಬದಲಾವಣೆ ತರಬಲ್ಲರು ಎಂದು ಉತ್ತರಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಬಣ್ಣಿಸಿದ್ದಾರೆ.

    2022ರಲ್ಲಿ ನಡೆಯುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ನಾಯಕತ್ವದಲ್ಲಿ ಕಾಂಗ್ರೆಸ್‌ಗೆ ಗೆಲುವು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು, ಆದಿತ್ಯನಾಥ್ ಸರಕಾರಕ್ಕೆ ರಾಹುಲ್ ಮತ್ತು ಪ್ರಿಯಾಂಕಾರ ಬಗ್ಗೆ ಭಯವಿದೆ . ಅಣ್ಣ ತಂಗಿಯರ ಜೋಡಿ ಪ್ರಚಾರಕ್ಕೆ ಇಳಿದರೆ ತಮಗೆ ಉಳಿಗಾಲವಿಲ್ಲ ಎಂದು ಬಿಜೆಪಿ ಭಯಪಟ್ಟು ಬೆವರತೊಡಗುತ್ತದೆ ಎಂದು ಅಜಯ್ ಕುಮಾರ್ ಹೇಳಿದ್ದಾರೆ.

2022ರ ಚುನಾವಣೆಯಲ್ಲಿ ತಾನು ಮುಖ್ಯಮಂತ್ರಿ ಅಭ್ಯರ್ಥಿಯಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ತಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿದ್ದು ಪಕ್ಷದ ಸಿದ್ಧಾಂತಕ್ಕೆ ದುಡಿಯುವುದು ತನ್ನ ಧರ್ಮವಾಗಿದೆ. ಇತಿಹಾಸದಲ್ಲಿ ಹಲವು ಹೋರಾಟಗಳಲ್ಲಿ ಪಾಲ್ಗೊಂಡ ಅದ್ಭುತ ಇತಿಹಾಸವನ್ನು ಕಾಂಗ್ರೆಸ್ ಹೊಂದಿದೆ. ಈ ಹೋರಾಟಗಳ ಆಧಾರದಲ್ಲಿ ಇತಿಹಾಸವನ್ನು ಬದಲಿಸಬಹುದು ಎಂದರು. ಉಪಚುನಾವಣೆಯಲ್ಲಿ ಪಕ್ಷ ಉತ್ತಮ ಸಾಧನೆ ತೋರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಪಕ್ಷ ಮಹಾತ್ಮಾ ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ಪಾಲಿಸುತ್ತಿದೆ. ಆದರೆ ಬಿಜೆಪಿ ವಿಭಜನಾತ್ಮಕ ಕಾರ್ಯನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News