ಜಮ್ಮು ಕಾಶ್ಮೀರದ ಶಾಂತಿ ಪ್ರಕ್ರಿಯೆಗೆ ಅಡ್ಡಿಯಾದರೆ ಜೈಲಿಗೆ: ರಾಮಮಾಧವ್

Update: 2019-10-20 16:05 GMT

ಶ್ರೀನಗರ, ಅ.20: ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಬಳಿಕ ರಾಜ್ಯವು ಶಾಂತಿ ಮತ್ತು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಈ ದಾರಿಗೆ ಅಡ್ಡಿ ತರಲು ಯತ್ನಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮಮಾಧವ್ ಹೇಳಿದ್ದಾರೆ.

ಅಭಿವೃದ್ಧಿ ಮತ್ತು ಶಾಂತಿಯ ದಾರಿಯಲ್ಲಿ ಮುನ್ನಡೆಯುವ ಸಂಕಲ್ಪ ಈಡೇರಿಕೆಗೆ ಸುಮಾರು 300 ಜನರನ್ನು ಜೈಲಿನಲ್ಲಿರಿಸುವ ಅಗತ್ಯವಿದೆ ಎಂದಾದರೆ ನಾವು ಹಾಗೆಯೇ ಮಾಡುತ್ತೇವೆ ಎಂದವರು ಹೇಳಿದ್ದಾರೆ.

 ಜಮ್ಮು ಕಾಶ್ಮೀರದಲ್ಲಿ ಇದುವರೆಗೆ ಕೆಲವು ಮುಖಂಡರ ಕುಟುಂಬ ಮಾತ್ರ ಪ್ರಯೋಜನ ಪಡೆಯುತ್ತಿತ್ತು. ಆದರೆ ಇನ್ನು ಮುಂದೆ ರಾಜ್ಯದಲ್ಲಿ ಆಗುವ ಯಾವುದೇ ಕೆಲಸದ ಪ್ರಯೋಜನ ಜನಸಾಮಾನ್ಯರಿಗೂ ಲಭಿಸುವಂತಾಗಿದೆ. ಇನ್ನು ಮುಂದೆ ಈ ರಾಜ್ಯದಲ್ಲಿ ಶಾಂತಿ ಮತ್ತು ಅಭಿವೃದ್ಧಿ ಎಂಬ ಎರಡು ದಾರಿಗಳಿರುತ್ತವೆ. ಈ ದಾರಿಗೆ ಅಡ್ಡ ಬರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತವರಿಗಾಗಿ ಭಾರತದಲ್ಲಿ ಹಲವು ಜೈಲುಗಳಿವೆ ಎಂದವರು ಹೇಳಿದ್ದಾರೆ.

 ಶ್ರೀನಗರದ ಠಾಗೋರ್ ಸಭಾಂಗಣದಲ್ಲಿ ರವಿವಾರ ನಡೆದ ಬಿಜೆಪಿ ಯುವಘಟಕದ ಸಮಾವೇಶದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ 370ನೇ ವಿಧಿ ರದ್ದತಿಯ ಬಳಿಕ ನಡೆಯುವ ಪ್ರಪ್ರಥಮ ರಾಜಕೀಯ ಸಮಾವೇಶ ಇದಾಗಿದೆ.

 ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನಸಾಮಾನ್ಯರನ್ನು ಬಳಸಿಕೊಳ್ಳಬೇಡಿ. ಜಮ್ಮು ಕಾಶ್ಮೀರದಲ್ಲಿ ಶಾಂತಿಗೆ ಭಂಗವಾಗದ ರೀತಿಯಲ್ಲಿ ರಾಜಕಾರಣ ಮಾಡಿ ಎಂದು ರಾಜಕೀಯ ಪಕ್ಷಗಳಿಗೆ ಸೂಚಿಸಿದ ಅವರು, ಜನತೆ ಗನ್ ಕೈಗೆತ್ತಿಕೊಂಡು ಆತ್ಮಾಹುತಿ ಮಾಡಿಕೊಳ್ಳಲಿದ್ದಾರೆ ಎಂದು ಕೆಲವು ಮುಖಂಡರು ಜೈಲಿನೊಳಗೆ ಇದ್ದುಕೊಂಡೇ ಸಂದೇಶ ರವಾನಿಸುತ್ತಿದ್ದಾರೆ. ಇಂತಹ ಮುಖಂಡರು ಮೊದಲು ಮುಂದೆ ಬಂದು ಆತ್ಮಾಹುತಿ ಮಾಡಿಕೊಳ್ಳಲಿ ಎಂದು ಸವಾಲೆಸೆದರು.

  370ನೇ ವಿಧಿ ರದ್ದತಿಯಿಂದ ಕಾಶ್ಮೀರದ ಜನತೆಗೆ ಉದ್ಯೋಗ ನಷ್ಟ, ಜಮೀನು ನಷ್ಟವಾಗಲಿದೆ ಎಂದು ಕೆಲವರು ಅಸಂಬದ್ಧ ಮಾತನಾಡುತ್ತಿದ್ದಾರೆ. ಆದರೆ ರಾಜ್ಯದ ಜನತೆಯ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ಕ್ರಮವನ್ನು ಸರಕಾರ ಕೈಗೊಳ್ಳುವುದಿಲ್ಲ. ರಾಜ್ಯದಲ್ಲಿರುವ ಉದ್ಯೋಗವನ್ನು ಸ್ಥಳೀಯರಿಗೇ ಒದಗಿಸಲಾಗುವುದು. ಇಲ್ಲಿ ಹೊಸ ಉದ್ಯೋಗಾವಕಾಶ ಸೃಷ್ಟಿಸಲಾಗುವುದು. ಜಮ್ಮು ಮತ್ತು ಕಾಶ್ಮೀರದಲ್ಲಿ ಅಸ್ಮಿತೆ, ಸಂಸ್ಕೃತಿ, ಉದ್ಯೋಗ ಹಾಗೂ ಶಿಕ್ಷಣಕ್ಕೆ ಯಾವುದೇ ಹಾನಿಯಾಗದಂತೆ ಎಲ್ಲಾ ಮುಂಜಾಗರೂಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಳೆದ 70 ವರ್ಷಗಳಿಂದ ನಿಮ್ಮ ಕೈಕಾಲುಗಳನ್ನು ಸಂಕೋಲೆಯಿಂದ ಬಂಧಿಸಲಾಗಿತ್ತು. ಈಗ ಅದನ್ನು ಕಿತ್ತೆಸೆಯಲಾಗಿದೆ. ಯಾರ ಬಗ್ಗೆಯೂ ಭಯಪಡುವ ಅಗತ್ಯವಿಲ್ಲ. ನಿಮ್ಮ ಕೆಲಸ ಕಾರ್ಯಗಳನ್ನು ಮುಂದುವರಿಸಿ ಎಂದು ರಾಮಮಾಧವ್ ಹೇಳಿದ್ದಾರೆ.

“ಎಲ್ಲರೂ ಪ್ರಧಾನಿ ಮೋದಿಯನ್ನು ಕಂಡರೆ ಭಯಪಡುತ್ತಿರುವಾಗ ನೀವೇಕೆ ಇತರರ ಬಗ್ಗೆ ಹೆದರುತ್ತೀರಿ. ಅವರೆಲ್ಲಾ ಪೇಪರ್ ಹುಲಿಗಳು. ಒಂದು ಫೋನ್ ಕರೆ ಬಂದರೆ ಅವರಿಗೆ ನಡುಕ ಹುಟ್ಟುತ್ತದೆ” ಎಂದ ಅವರು, ಪಾಕ್ ಪ್ರಧಾನಿ ಇಮ್ರಾನ್‌ಖಾನ್‌ಗೆ ತಮ್ಮ ದೇಶವನ್ನೇ ನಿಭಾಯಿಸಲಾಗುತ್ತಿಲ್ಲ. ಆದರೂ ಕಾಶ್ಮೀರದ ಬಗ್ಗೆ ಮಾತನಾಡುತ್ತಾರೆ. ಗಡಿಯಾಚೆಗಿಂದ ಎದುರಾಗುವ ಯಾವುದೇ ಸವಾಲನ್ನೂ ಮೆಟ್ಟಿ ನಿಲ್ಲಲು ನಮ್ಮ ಪಡೆಗಳು ಸನ್ನದ್ಧವಾಗಿವೆ ಎಂದು ಹೇಳಿದರು.

ಕಾಶ್ಮೀರಕ್ಕೆ ಏನೆಲ್ಲಾ ಮಾಡಬೇಕಿತ್ತೋ ಅದನ್ನು ಮೋದಿ ಮಾಡಿದ್ದಾರೆ. ಈಗ ದೇಶದ ಜನತೆ ಕಾಶ್ಮೀರಿ ಜನತೆಯನ್ನು ಅಪ್ಪಿಕೊಳ್ಳಲು ಸಿದ್ಧರಿದ್ದಾರೆ . ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸಿದರೆ ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಪ್ರಮಾಣ ಹೆಚ್ಚುತ್ತದೆ. ಇದೀಗ ಕಾಶ್ಮೀರದಲ್ಲಿ ಶಾಂತಿ ನೆಲೆಸುವ ಕುರಿತು ಮತ್ತು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರನ್ನು ಸ್ವಾಗತಿಸುವ ಬಗ್ಗೆ ಕಾಶ್ಮೀರಿ ಜನತೆ ನಿರ್ಧರಿಸಬೇಕಿದೆ ಎಂದು ರಾಮಮಾಧವ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News