ಭಾರತದ ಆರ್ಥಿಕತೆಯ ಬಗ್ಗೆ ಐಎಂಎಫ್ ಗಿದ್ದ ಆಶಾವಾದ ಕಡಿಮೆಯಾಗಿದೆ: ಆರ್ಥಿಕ ತಜ್ಞೆ ಗೀತಾ ಗೋಪಿನಾಥ್

Update: 2019-10-20 17:47 GMT

ಹೊಸದಿಲ್ಲಿ, ಅ.20: ಭಾರತದ ಆರ್ಥಿಕತೆಯ ಕುರಿತು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯು ಕೆಲವು ತಿಂಗಳ ಹಿಂದಿಗಿಂತ ಕಡಿಮೆ ಆಶಾವಾದಿಯಾಗಿದೆ ಎಂದು ಸಂಸ್ಥೆಯ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಅವರು ಹೇಳಿದ್ದಾರೆ.

ಐಎಂಎಫ್ ಕಳೆದ ವಾರ ಭಾರತದ ಜಿಡಿಪಿ ಪ್ರಗತಿಯ ಪ್ರಸಕ್ತ ಹಣಕಾಸು ಸಾಲಿನ ಮುನ್ನಂದಾಜನ್ನು ಶೇ.6.1ಕ್ಕೆ ಇಳಿಸಿತ್ತು, ಆದರೆ 2020-21ನೇ ಹಣಕಾಸು ಸಾಲಿನಲ್ಲಿ ಅದು ಶೇ.7ಕ್ಕೆ ಪುಟಿದೇಳಲಿದೆ ಎಂದು ಹೇಳಿತ್ತು.

ಆಂಗ್ಲ ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಿದ್ದ ಗೀತಾ ಗೋಪಿನಾಥ,ಭಾರತವು ಈ ವರ್ಷ ಹಲವಾರು ಕ್ಷೇತ್ರಗಳಲ್ಲಿ ಹಿನ್ನಡೆಯನ್ನು ಅನುಭವಿಸಿದೆ. ಈ ಹಿಂಜರಿತ ಆವರ್ತನೀಯ ಮಂದಗತಿಯಾಗಿದೆ ಎಂದು ನಾವು ಭಾವಿಸಿದ್ದೇವೆ ಎಂದರು. ಕುಸಿದಿರುವ ಗ್ರಾಮೀಣ ಬೇಡಿಕೆ, ಬ್ಯಾಂಕೇತರ ಹಣಕಾಸು ಕ್ಷೇತ್ರದಲ್ಲಿಯ ಸಮಸ್ಯೆಗಳು ಮತ್ತು ವಾಹನ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿ ‘ನಿಯಂತ್ರಕ ಅನಿಶ್ಚಿತತೆ’ಗಳನ್ನು ಅವರು ಪ್ರಮುಖವಾಗಿ ಬಿಂಬಿಸಿದರು. ಈ ಅಂಶಗಳು ದೇಶಿಯ ಆರ್ಥಿಕತೆಯನ್ನು ದುರ್ಬಲಗೊಳಿಸಿವೆ ಎಂದರು.

ಕಾರ್ಪೊರೇಟ್ ತೆರಿಗೆ ದರಗಳನ್ನು ಕಡಿತಗೊಳಿಸುವ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರ ನಿರ್ಧಾರವು ಹೂಡಿಕೆಯ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಲಿದೆ. ಜೊತೆಗೆ ಗ್ರಾಮೀಣ ಆದಾಯ ವೃದ್ಧಿಗೆ ನೆರವಾಗಲು ಇತ್ತೀಚಿನ ನೀತಿಗಳು ಆರ್ಥಿಕತೆಯ ಚೇತರಿಕೆಗೆ ನೆರವಾಗಲಿವೆ ಎಂದು ಗೀತಾ ಗೋಪಿನಾಥ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News