ಮಾಧ್ಯಮ ಸ್ವಾತಂತ್ರ್ಯಕ್ಕೆ ನಿರ್ಬಂಧದ ವಿರುದ್ಧದ ಆಸ್ಟ್ರೇಲಿಯಾದ ಪತ್ರಿಕೆಗಳು ಪ್ರತಿಭಟಿಸಿದ್ದು ಹೀಗೆ..

Update: 2019-10-21 09:33 GMT

ಸಿಡ್ನಿ, ಅ.21: ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವ ಆಸ್ಟ್ರೇಲಿಯಾ ಸರ್ಕಾರದ ನಿರಂತರ ಪ್ರಯತ್ನವನ್ನು ಖಂಡಿಸಿ ಪ್ರತಿಭಟನಾರ್ಥವಾಗಿ ದೇಶದ ಎಲ್ಲ ಪತ್ರಿಕೆಗಳು ಮುಖಪುಟಗಳಲ್ಲಿ ಸುದ್ದಿಗಳನ್ನು ಅಳಿಸಿ ಹಾಕುವ ಮೂಲಕ ವಿಶಿಷ್ಟ ಪ್ರತಿಭಟನೆ ನಡೆಸಿದೆ. ಪತ್ರಿಕೋದ್ಯಮವನ್ನು ಅಪರಾಧೀಕರಣಗೊಳಿಸುವ ಹುನ್ನಾರದ ವಿರುದ್ಧ ದೇಶಾದ್ಯಂತ ಮಾಧ್ಯಮಗಳು ಹೀಗೆ ಧ್ವನಿಯೆತ್ತಿದವು.

ಆಸ್ಟ್ರೇಲಿಯಾದ ಸಂಸ್ಥೆಯೊಂದರ ಅಭಿಯಾನ, ಬಳಿಕ ಎಬಿಸಿಯ ಸಿಡ್ನಿ ಕೇಂದ್ರ ಕಚೇರಿ ಮೇಲೆ ದಾಳಿ ಹಾಗೂ ಸುದ್ದಿಸಂಸ್ಥೆಯೊಂದರ ಪತ್ರಕರ್ತರ ಮನೆ ಮೇಲೆ ಜೂನ್‍ ನಲ್ಲಿ ನಡೆದ ದಾಳಿಯ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆಸಲಾಗಿದೆ. ಸರ್ಕಾರದ ಕ್ರಮದ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಹೈಕೋರ್ಟ್‍ ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

2004ರಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಡಾಲರ್ ಮೊತ್ತದ ಒಪ್ಪಂದದ ಪ್ರಕರಣವನ್ನುಆಸ್ಟ್ರೇಲಿಯಾದ ರಹಸ್ಯ ಗುಪ್ತಚರ ಸೇವೆಗಳ ಇಲಾಖೆ ಭೇದಿಸಿದೆ ಎಂಬ ವರದಿ ಮಾಡಿದ್ದಕ್ಕಾಗಿ ಪತ್ರಕರ್ತ ಹಾಗೂ ಅವರ ವಕೀಲ ಬರ್ನಾರ್ಡ್ ಕೊಲಾರಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆದಿದೆ. ಇದರ ಜತೆಗೆ ಇಂಥದ್ದೇ ಇನ್ನೊಂದು ಪ್ರಕರಣದಲ್ಲಿ ಆಸ್ಟ್ರೇಲಿಯಾದ ತೆರಿಗೆ ಇಲಾಖೆಯ ರಹಸ್ಯ ಬೇಧಿಸಿದ ರಿಚರ್ಡ್ ಬೊಯಿಲೆ ಎಂಬವರು ಗರಿಷ್ಠ 161 ವರ್ಷಗಳ ಜೈಲು ಶಿಕ್ಷೆ ಎದುರಿಸುತ್ತಿದ್ದಾರೆ. ಆಸ್ಟ್ರೇಲಿಯಾ ತೆರಿಗೆ ಇಲಾಖೆ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡದ್ದನ್ನು ಬಹಿರಂಗಗೊಳಿಸಿದ್ದು ಇವರು ಮಾಡಿದ ಅಪರಾಧ!

'ಗಾರ್ಡಿಯನ್ ಆಸ್ಟ್ರೇಲಿಯಾ' ಕೂಡಾ ಈ ಅಭಿಯಾನದಲ್ಲಿ ಭಾಗವಹಿಸಿದೆ. ಪತ್ರಕರ್ತರ ವಿರುದ್ಧ ಸರ್ಕಾರ ಹೊರಡಿಸುವ ವಾರಂಟ್ ಅರ್ಜಿಯನ್ನು ಪ್ರಶ್ನಿಸುವಂತೆ ಅದು ಕರೆ ನೀಡಿದೆ. ಪತ್ರಕರ್ತರು ತಮ್ಮ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಅವರನ್ನು ಜೈಲಿಗೆ ಅಟ್ಟುವುದರಿಂದ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಲಾಗಿದೆ. ಅಂತೆಯೇ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ರಹಸ್ಯ ಭೇದಿಸುವವವರಿಗೆ ಕಾನೂನಾತ್ಮಕ ರಕ್ಷಣೆ ನೀಡಬೇಕು ಎಂದೂ ಪತ್ರಿಕೆ ಆಗ್ರಹಿಸಿದೆ. ದಾಖಲೆಗಳನ್ನು ರಹಸ್ಯ ಎಂದು ಪರಿಗಣಿಸುವುದನ್ನು ನಿರ್ಬಂಧಿಸುವ ವ್ಯವಸ್ಥೆ ಜಾರಿಗೆ ತರುವಂತೆಯೂ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News