ರೇಬಿಸ್ ಅಪಾಯ: ನಾಯಿ ಕಚ್ಚಿದರೆ ನೀಡಬೇಕಾದ ಪ್ರಥಮ ಚಿಕಿತ್ಸೆಗಳೇನು?

Update: 2019-10-21 14:47 GMT

ರೇಬಿಸ್ ಉಷ್ಣ ರಕ್ತದ ಪ್ರಾಣಿಗಳ ಗಂಭೀರ ಸೋಂಕು ಆಗಿದೆ. ನರಮಂಡಲಕ್ಕೆ ದಾಳಿಯಿಡುವ ವೈರಸ್‌ ನಿಂದ ರೇಬಿಸ್ ಉಂಟಾಗುತ್ತದೆ. ಇದೊಂದು ಮಾರಣಾಂತಿಕ ರೋಗವಾಗಿದೆ. ರೋಗಿ ರೇಬಿಸ್‌ಗೆ ತುತ್ತಾದರೆ ಯಾವುದೇ ಚಿಕಿತ್ಸೆ ಫಲಕಾರಿಯಾಗುವುದಿಲ್ಲ.

ಸೋಂಕಿತ ಪ್ರಾಣಿಯೊಂದು ಇನ್ನೊಂದು ಪ್ರಾಣಿಯನ್ನು ಕಚ್ಚಿದಾಗ ಸೋಂಕಿತ ಪ್ರಾಣಿಯ ಜೊಲ್ಲಿನಲ್ಲಿರುವ ವೈರಸ್ ವರ್ಗಾವಣೆಗೊಳ್ಳುತ್ತದೆ. ಪ್ರಾಣಿಗಳು ತಮ್ಮ ಪಂಜ ಅಥವಾ ಉಗುರುಗಳನ್ನು ನೆಕ್ಕುತ್ತಿರುವುದರಿಂದ ಅವುಗಳು ಪರಚಿದರೂ ಅಪಾಯಕಾರಿಯಾಗುತ್ತದೆ. ಗಾಯ ಅಥವಾ ಗೀರು ಅಥವಾ ಬಾಯಿ ಮತ್ತು ಕಣ್ಣುಗಳ ಲೋಳೆಯ ಪದರಗಳ ಮೂಲಕ ರೇಬಿಸ್ ವೈರಸ್ ಶರೀರವನ್ನು ಪ್ರವೇಶಿಸುತ್ತದೆ. ಅಲ್ಲಿಂದ ಅದು ಮಿದುಳು ಮತ್ತು ಮಿದುಳು ಬಳ್ಳಿ ಅಥವಾ ಬೆನ್ನುಹುರಿಗೆ ಸಾಗುತ್ತದೆ. ಸೋಂಕು ಮಿದುಳಿಗೆ ಹರಡಿದಾಗ ಅದು ಮಿದುಳಿನ ನರಗಳ ಮೂಲಕ ಶರೀರದಲ್ಲಿ ಇಳಿಯುತ್ತದೆ ಮತ್ತು ವಿವಿಧ ಅಂಗಾಂಗಗಳಿಗೆ ದಾಳಿಯಿಡುತ್ತದೆ. ಬಾವಲಿಗಳು ತಮ್ಮ ಮಲದ ಮೂಲಕ ರೇಬಿಸ್ ವೈರಸ್‌ನ್ನು ಹರಡುತ್ತವೆ. ಹೀಗಾಗಿ ಬಾವಲಿಗಳು ವಾಸವಿರುವ ಗುಹೆಗಳನ್ನು ಪ್ರವೇಶಿಸುವವರು ಅವು ಸೃಷ್ಟಿಸಿರುವ ವಾಯುದ್ರವವನ್ನು ಉಸಿರಾಡಿಸುವ ಮೂಲಕ ರೇಬಿಸ್‌ಗೆ ತುತ್ತಾಗುತ್ತಾರೆ.

►ರೇಬಿಸ್‌ನ ಲಕ್ಷಣಗಳು

 ರೇಬಿಸ್ ಸೋಂಕು ಹೊಂದಿರುವ ನಾಯಿ,ಬೆಕ್ಕು ಇತ್ಯಾದಿ ಪ್ರಾಣಿಗಳು ವ್ಯಕ್ತಿಯನ್ನು ಕಚ್ಚುವುದರಿಂದ ರೇಬಿಸ್ ಉಂಟಾಗುತ್ತದೆ. ರೇಬಿಸ್ ವೈರಸ್ ಮಾನವ ಶರೀರವನ್ನು ಪ್ರವೇಶಿಸಿದ ಐದು ದಿನಗಳ ಬಳಿಕ ಯಾವಾಗ ಬೇಕಾದರೂ ರೋಗ ಲಕ್ಷಣಗಳು ಪ್ರಕಟಗೊಳ್ಳಬಹುದು ಅಥವಾ ಒಂದು ವರ್ಷಕ್ಕೂ ಹೆಚ್ಚಿನ ಸಮಯದ ಬಳಿಕ ಕಾಣಿಸಿಕೊಳ್ಳಬಹುದು.

ಆರಂಭದಲ್ಲಿ ಲಕ್ಷಣಗಳು ಅಸ್ಪಷ್ಟವಾಗಿರುತ್ತವೆ. ರೋಗಿಯಲ್ಲಿ ಜ್ವರ,ತಲೆನೋವು,ದೇಹಾಲಸ್ಯ,ಹಸಿವು ಕ್ಷೀಣ ಮತ್ತು ವಾಂತಿಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಗಾಯವಾದ ಜಾಗದಲ್ಲಿ ನೋವು,ತುರಿಕೆ,ಮರಗಟ್ಟುವಿಕೆ ಅಥವಾ ಜುಮುಗುಡುವಿಕೆಯೂ ಉಂಟಾಗಬಹುದು. ಮುಂದಿನ ಹಂತದಲ್ಲಿ ರೋಗಿಗೆ ಎಂಜಲು ನುಂಗಲೂ ಕಷ್ಟವಾಗುತ್ತದೆ ಹೀಗಾಗಿ ಬಾಯಿಯಲ್ಲಿ ನೊರೆ ಉಂಟಾಗುತ್ತದೆ. ನೀರನ್ನೂ ನುಂಗುವುದು ಕಷ್ಟವಾಗುವುದರಿಂದ ರೋಗಿಗೆ ನೀರನ್ನು ಕಂಡರೆ ಭಯವಾಗುತ್ತದೆ (ಹೈಡ್ರೋಫೋಬಿಯಾ). ಕೆಲವು ರೋಗಿಗಳು ಹತಾಶ ಮತ್ತು ದಿಗ್ಭ್ರಮೆಗೊಂಡ ಸ್ಥಿತಿಯಲ್ಲಿದ್ದರೆ,ಇತರರ ಶರೀರ ನಿಷ್ಕ್ರಿಯ ಗೊಳ್ಳುತ್ತದೆ ಮತ್ತು ಕೋಮಾಸ್ಥಿತಿಗೆ ಜಾರುವ ಮೂಲಕ ವ್ಯಕ್ತಿಯ ಸಾವು ಸಂಭವಿಸುತ್ತದೆ.

►ರೇಬಿಸ್‌ಗೆ ಚಿಕಿತ್ಸೆ ಏನು?

ರೇಬಿಸ್ ವೈರಸ್ ಮಾನವ ಶರೀರವನ್ನು ಪ್ರವೇಶಿಸಿ ಲಕ್ಷಣಗಳು ಬೆಳವಣಿಗೆಯಾದರೆ ಯಾವುದೇ ಪರಿಣಾಮಕಾರಿಯಾದ ನಿರ್ದಿಷ್ಟ ಚಿಕಿತ್ಸೆಯಿಲ್ಲ.

►ಇದನ್ನು ತಡೆಯುವುದು ಹೇಗೆ?

   ರೇಬಿಸ್‌ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ ಅದನ್ನು ತಡೆಯಲು ಎಲ್ಲ ಪ್ರಯತ್ನಗಳು ಅಗತ್ಯ. ಸಾಕುನಾಯಿ ಮತ್ತು ಬೆಕ್ಕುಗಳಿಗೆ ನಿಯಮಿತವಾಗಿ ರೇಬಿಸ್ ನಿರೋಧಕ ಚುಚ್ಚುಮದ್ದನ್ನು ಕೊಡಿಸಬೇಕು. ಅವುಗಳ ಆರೋಗ್ಯದ ಬಗ್ಗೆ ಪಶುವೈದ್ಯರಿಂದ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಬೇಕು. ಬೀದಿನಾಯಿಗಳೊಂದಿಗೆ ಆಟವಾಡಲು ಮಕ್ಕಳಿಗೆ ಅವಕಾಶ ನೀಡಬಾರದು.

►ನೀಡಬೇಕಾದ ಪ್ರಥಮ ಚಿಕಿತ್ಸೆ ಏನು?

ನಾಯಿಯ ಕಡಿತ ಚರ್ಮಕ್ಕೆ ಮಾತ್ರ ಸೀಮಿತವಾಗಿದ್ದರೆ ಅದನ್ನು ಸಣ್ಣಗಾಯವೆಂದು ಪರಿಗಣಿಸಬಹುದು. ಗಾಯವನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆದು,ಆ್ಯಂಟಿಬಯಾಟಿಕ್ ಕ್ರೀಮ್‌ನ್ನು ಲೇಪಿಸಿ ಬ್ಯಾಂಡೇಜ್ ಬಟ್ಟೆಯನ್ನು ಸುತ್ತಬೇಕು. ಗಾಯವು ಆಳವಾಗಿದ್ದರೆ ಅಥವಾ ಅಂಗಾಂಶಗಳಿಗೆ ಘಾಸಿಯಾಗಿದ್ದರೆ ಮತ್ತು ರಕ್ತಸ್ರಾವವಾಗುತ್ತಿದ್ದರೆ ಒತ್ತಡವನ್ನು ಹೇರಿ ರಕ್ತಸ್ರಾವವನ್ನು ನಿಲ್ಲಿಸಲು ಪ್ರಯತ್ನಿಸಬೇಕು ಹಾಗೂ ತಕ್ಷಣ ವೈದ್ಯಕೀಯ ನೆರವು ಪಡೆದುಕೊಳ್ಳಬೇಕು. ಗಾಯವಾದ ಜಾಗದಲ್ಲಿ ಊತ,ಕೆಂಪಾಗುವಿಕೆ ಅಥವಾ ದ್ರವ ಸೋರಿಕೆಯಂತಹ ಸೋಂಕಿನ ಲಕ್ಷಣಗಳು ಕಂಡು ಬಂದರಂತೂ ವೈದ್ಯರ ಭೇಟಿಯನ್ನು ವಿಳಂಬಿಸಲೇಬಾರದು.

 ವ್ಯಕ್ತಿಯನ್ನು ಕಚ್ಚಿದ ನಾಯಿ ವಿಲಕ್ಷಣವಾಗಿ ವರ್ತಿಸುತ್ತಿದ್ದರೆ,ಬಾಯಿಯಿಂದ ನೊರೆ ಸುರಿಯುತ್ತಿದ್ದರೆ ಅಥವಾ ಯಾವುದೇ ಪ್ರಚೋದನೆ ಇಲ್ಲದಿದ್ದಾಗಲೂ ಕಚ್ಚಿದ್ದರೂ ವೈದ್ಯರನ್ನು ತಕ್ಷಣ ಭೇಟಿಯಾಗಬೇಕು. ಅವರು ರೇಬಿಸ್ ನಿರೋಧಕ ಲಸಿಕೆಯನ್ನು ತೆಗೆದುಕೊಳ್ಳುವಂತೆ ಸೂಚಿಸಬಹುದು.

 ಈ ಹಿಂದಿನ ಚುಚ್ಚುಮದ್ದುಗಳಿಗಿಂತ ಆಧುನಿಕ ಲಸಿಕೆಗಳು ಹೆಚ್ಚು ಸುರಕ್ಷಿತವಾಗಿವೆ. ಕೇವಲ ಐದು ಚುಚ್ಚುಮದ್ದುಗಳು ಅಗತ್ಯವಾಗುತ್ತವೆ. ಹಿಂದಿನ 10 ವರ್ಷಗಳಲ್ಲಿ ಟೆಟಾನಸ್ ವಿರುದ್ಧ ರಕ್ಷಣೆಯನ್ನು ಪಡೆದುಕೊಂಡಿರದಿದ್ದರೆ ಟೆಟಾನಸ್ ಬೂಸ್ಟರ್‌ನ್ನು ಸಹ ತೆಗೆದುಕೊಳ್ಳಬೇಕು. ರೇಬಿಸ್ ನಿರೋಧಕ ಔಷಧಿಗಳ ಕುರಿತು ವೈದ್ಯರ ಸಲಹೆ ಪಡೆದುಕೊಳ್ಳುವುದು ಸದಾ ಸುರಕ್ಷಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News