ಬ್ಯಾಂಕ್‌ಗಳ ವಿಲೀನ ವಿರೋಧಿಸಿ ದೇಶಾದ್ಯಂತ ಉದ್ಯೋಗಿಗಳ ಮುಷ್ಕರ

Update: 2019-10-22 16:03 GMT

ಹೊಸದಿಲ್ಲಿ, ಅ. 22: ಬ್ಯಾಂಕ್ ಉದ್ಯೋಗಿಗಳ ಎರಡು ಒಕ್ಕೂಟ ಮಂಗಳವಾರ ಬೆಳಗ್ಗಿನಿಂದ 24 ಗಂಟೆಗಳ ಕಾಲ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದ್ದು, ಬ್ಯಾಂಕ್ ಅಧಿಕಾರಿಗಳ ಇನ್ನೊಂದು ಒಕ್ಕೂಟ ಇವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಇದರಿಂದ ದೇಶಾದ್ಯಂತ ಬ್ಯಾಂಕಿಂಗ್ ಕಾರ್ಯಾಚರಣೆಗೆ ಭಾಗಶಃ ಅಡ್ಡಿ ಉಂಟಾಗಿದೆ. 10 ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ನಾಲ್ಕು ಅತಿದೊಡ್ಡ ಬ್ಯಾಂಕ್‌ಗಳಲ್ಲಿ ವಿಲೀನಗೊಳಿಸುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಈ ಒಕ್ಕೂಟಗಳು ಪ್ರತಿಭಟನೆ ನಡೆಸುತ್ತಿವೆ.

ಬೆಂಗಳೂರು, ಚೆನ್ನೈ, ಪಾಟ್ನಾ, ಮಧ್ಯಪ್ರದೇಶ ಹಾಗೂ ಕೋಲ್ಕತಾ ಸಹಿತ ಭಾರತದ ವಿವಿಧ ಭಾಗಗಳಲ್ಲಿ ನಗದು ಹಿಂದೆ ತೆಗೆಯುವುದು, ಖಾತೆಗೆ ಹಣ ಜಮೆ ಮಾಡುವುದು ಹಾಗೂ ಚೆಕ್ ಕ್ಲಿಯರೆನ್ಸ್ ಸಹಿತ ಬ್ಯಾಂಕಿಂಗ್ ಸೇವೆಗಳಿಗೆ ಅಡ್ಡಿ ಉಂಟಾಯಿತು. ಮುಷ್ಕರದಲ್ಲಿ ಸುಮಾರು 20 ಸಾವಿರ ಉದ್ಯೋಗಿಗಳು ಪಾಲ್ಗೊಂಡಿರುವುದರಿಂದ 7,416 ಬ್ಯಾಂಕ್ ಶಾಖೆಗಳ ಪೈಕಿ 4,800 ಬ್ಯಾಂಕ್ ಶಾಖೆಗಳಲ್ಲಿ ಕಾರ್ಯಾಚರಣೆಗೆ ಅಡ್ಡಿ ಉಂಟಾಯಿತು ಎಂದು ಮಧ್ಯಪ್ರದೇಶದಿಂದ ವರದಿಯಾಗಿದೆ. ಮುಷ್ಕರದಲ್ಲಿ ಪಾಲ್ಗೊಂಡ ಎರಡು ಬ್ಯಾಂಕ್ ಒಕ್ಕೂಟಗಳಾದ ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಶನ್ ಹಾಗೂ ಬ್ಯಾಂಕ್ ಎಂಪ್ಲಾಯಿಸ್ ಫೆಡರೇಶನ್ ಆಫ್ ಇಂಡಿಯಾದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಗಳು ಸದಸ್ಯರಾಗಿ ತುಂಬಾ ಕಡಿಮೆ ಸಂಖ್ಯೆಯಲ್ಲಿ ಇದ್ದುದರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಗಳಲ್ಲಿ ಕಾರ್ಯಾಚರಣೆಗೆ ಯಾವುದೇ ಅಡ್ಡಿ ಉಂಟಾಗಿಲ್ಲ. ಎಟಿಎಂಗಳನ್ನು ಕೂಡ ಬಂದ್ ಮಾಡಲಾಗುವುದು ಎಂದು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ ನಾಯಕರು ಎಚ್ಚರಿಸಿದ್ದಾರೆ. ದೇಶದಾದ್ಯಂತ ಸುಮಾರು 3 ಲಕ್ಷ ಉದ್ಯೋಗಿಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.

ಬ್ಯಾಂಕ್‌ಗಳು ಚೆಕ್ ಸಂಗ್ರಹಿಸಲು ಹಾಗೂ ನ್ಯಾಶನಲ್ ಪೇಮೆಂಟ್ ಕಾರ್ಪೋರೇಶನ್‌ಗೆ ಕ್ಲಿಯರೆನ್ಸ್‌ಗೆ ಕಳುಹಿಸಲು ಸಾಧ್ಯವಾಗದೇ ಇರುವುದರಿಂದ ಚೆಕ್‌ಗಳ ಕ್ಲಿಯರಿಂಗ್‌ಗೆ ಅಡ್ಡಿ ಉಂಟಾಯಿತು. ಬ್ಯಾಂಕ್ ಮುಷ್ಕರಿಂದ ತಮ್ಮ ಕಾರ್ಯಾಚರಣೆಗೆ ಅಡ್ಡಿ ಉಂಟಾಗಲಿದೆ ಎಂದು ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸಿಂಡಿಕೇಟ್ ಬ್ಯಾಂಕ್ ಹಾಗೂ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನಂತಹ ಸಾರ್ವಜನಿಕ ವಲಯದ ಹಲವು ಬ್ಯಾಂಕ್‌ಗಳು ಈ ಮೊದಲೇ ಘೋಷಿಸಿದ್ದವು. ಹಲವು ಕೇಂದ್ರ ವ್ಯಾಪಾರ ಒಕ್ಕೂಟಗಳು ಅಲ್ಲದೆ, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಶಿಯೇಶನ್ (ಎಐಬಿಒಎ) ಮುಷ್ಕರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದವು. ಎಐಬಿಒಎ ತನ್ನ ಸದಸ್ಯರಲ್ಲಿ ಕಾರ್ಯ ನಿರ್ವಹಿಸದಂತೆ ಮನವಿ ಮಾಡಿತ್ತು. ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್, ಬ್ಯಾಂಕ್ ವಿಲೀನ ‘ಅಕಾಲದ ಹಾಗೂ ದುಷ್ಪ್ರೇರಿತ’ ಎಂದು ವ್ಯಾಖ್ಯಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News