ಬಿಸಿಸಿಐನ ಸಿಒಎ ಸದಸ್ಯರಾಗಿದ್ದಕ್ಕೆ ಸಂಭಾವನೆ ನಿರಾಕರಿಸಿದ ರಾಮಚಂದ್ರ ಗುಹಾ

Update: 2019-10-23 06:09 GMT

ಮುಂಬೈ: ಸುಮಾರು ಮೂರು ವರ್ಷಗಳ ಕಾಲ ಬಿಸಿಸಿಐನ ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ ಭಾಗವಾಗಿದ್ದ ಇತಿಹಾಸಕಾರ ಹಾಗೂ ಲೇಖಕ ರಾಮಚಂದ್ರ ಗುಹಾ ಮತ್ತು ಬ್ಯಾಂಕರ್ ವಿಕ್ರಮ್ ಲಿಮಯೇ ತಮಗೆ ಲಭಿಸಬೇಕಾಗಿರುವ ಸಂಭಾವನೆಯ ಬಿಡುಗಡೆಗೆ ಸುಪ್ರೀಂ ಕೋರ್ಟ್ ಮಂಗಳವಾರ ಹಸಿರು ನಿಶಾನೆ ನೀಡಿದ್ದರೂ ಅದನ್ನು ಪಡೆಯಲು ನಿರಾಕರಿಸಿದ್ದಾರೆ.

ಗುಹಾ ಅವರಿಗೆ 40 ಲಕ್ಷ ರೂ.  ಹಾಗೂ ಲಿಮಯೇ ಅವರಿಗೆ 50.5 ರೂ. ಲಕ್ಷ ಲಭಿಸಬೇಕಿತ್ತು. ಇಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆ ಹಾಗೂ ಚುನಾವಣೆಗಳ ನಂತರ ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ ಅನ್ನು ವಿಸರ್ಜಿಸಲಾಗುವುದು.

ಗುಹಾ ಅವರು ಬಿಸಿಸಿಐಗೆ ಇಮೇಲ್ ಬರೆದು ಈ ಸಂಭಾವನೆಯನ್ನು ಸ್ವೀಕರಿಸದೇ ಇರುವ ನಿರ್ಧಾರದ ಕುರಿತು ತಿಳಿಸಿದ್ದರೆ, ಲಿಮಯೇ ತಮ್ಮ ನಿರ್ಧಾರವನ್ನು ಮುಂದಿನ ದಿನಗಳಲ್ಲಿ ತಿಳಿಸುವ ಸಾಧ್ಯತೆಯಿದೆ. ಮೂಲ ನಾಲ್ಕು ಮಂದಿ ಸದಸ್ಯರ ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ ಭಾಗವಾಗಿದ್ದ ಈ ಇಬ್ಬರ ಸಹಿತ ಮಾಜಿ ಸಿಎಜಿ ವಿನೋದ್ ರೈ ಹಾಗೂ ಭಾರತೀಯ ತಂಡದ ಮಾಜಿ ನಾಯಕಿ ಡಯಾನ ಎಡುಲ್ಕಿ ಅವರನ್ನು ಸುಪ್ರೀಂ ಕೋರ್ಟ್ ಜನವರಿ 2017ರಲ್ಲಿ ನೇಮಿಸಿತ್ತು.

ನೇಮಕಗೊಂಡ ನಾಲ್ಕು ತಿಂಗಳಲ್ಲಿಯೇ ಗುಹಾ ತಮ್ಮ ಹುದ್ದೆ ತೊರೆದಿದ್ದರಲ್ಲದೆ ಹಲವಾರು ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸುವ ಯತ್ನ ನಡೆದಿಲ್ಲ ಎಂದು ದೂರಿದ್ದರು. ಲಿಮಯೆ ಅವರು ಐದು ತಿಂಗಳಿಗೂ ಹೆಚ್ಚು ಕಾಲ ಸಮಿತಿಯಲ್ಲಿದ್ದು ನಂತರ ಎನ್‍ಎಸ್‍ಇ ಮುಖ್ಯಸ್ಥರಾಗಿದ್ದರು.

ಸುಪ್ರೀಂ ಕೋರ್ಟ್ ನೇಮಿತ ಇತರ ಇಬ್ಬರು ಕಮಿಟಿ ಸದಸ್ಯರಾದ  ವಿನೋದ್ ರೈ ಹಾಗೂ ಡಯಾನ ತಲಾ 3.5 ಕೋಟಿ ರೂ. ಸಂಭಾವನೆ ಪಡೆಯಲಿದ್ದರೆ ಇನ್ನೊಬ್ಬ ಸದಸ್ಯ ರವಿ ತೊಡ್ಗೆ 60 ಲಕ್ಷ ರೂ. ಗಳಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News