ಪಿಎಂಸಿ ಬ್ಯಾಂಕ್ ಗ್ರಾಹಕರಿಗೆ ಹೆಚ್ಚುವರಿ 50,000 ರೂ. ಹಿಂಪಡೆಯಲು ಅವಕಾಶ

Update: 2019-10-23 13:39 GMT

ಮುಂಬೈ, ಅ.23: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್(ಪಿಎಂಸಿ)ನ ಗ್ರಾಹಕರಿಗೆ ವೈದ್ಯಕೀಯ ಮತ್ತು ಶೈಕ್ಷಣಿಕ ತುರ್ತು ವೆಚ್ಚ ಭರಿಸಲು ಹೆಚ್ಚುವರಿ 50,000 ರೂ. ಹಿಂಪಡೆಯಲು ಅವಕಾಶ ನೀಡಲಾಗಿದೆ. ಪಿಎಂಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ವೈದ್ಯಕೀಯ, ಶೈಕ್ಷಣಿಕ ತುರ್ತು ವೆಚ್ಚ ಪಾವತಿಸಲು ಹೆಚ್ಚುವರಿ 50,000 ರೂ. ಹಿಂಪಡೆಯಲು ಅವಕಾಶ ನೀಡಿದೆ. (ಈಗಾಗಲೇ 40,000 ರೂ. ಹಿಂಪಡೆಯಲು ಅವಕಾಶವಿದೆ). ಅಗತ್ಯವಿರುವ ಗ್ರಾಹಕರು ಸಂಬಂಧಿಸಿದ ಶಾಖೆಯನ್ನು ಸಂಪರ್ಕಿಸಬಹುದು ಎಂದು ಮಹಾರಾಷ್ಟ್ರ ಬಿಜೆಪಿ ಉಪಾಧ್ಯಕ್ಷ ಕಿರಿತ್ ಸೋಮಯ ಬುಧವಾರ ಟ್ವೀಟ್ ಮಾಡಿದ್ದಾರೆ.

ಬ್ಯಾಂಕ್‌ನಲ್ಲಿ ಆರ್ಥಿಕ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಗ್ರಾಹಕರು ಬ್ಯಾಂಕ್‌ನಿಂದ 10,000 ರೂ. ಮಾತ್ರ ಹಣ ಹಿಂಪಡೆಯಬಹುದು ಎಂದು ಆರ್‌ಬಿಐ ಸೂಚಿಸಿತ್ತು. ಇದಕ್ಕೆ ತೀವ್ರ ವಿರೋಧ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಮಿತಿಯನ್ನು 25,000 ರೂ.ಗೆ ಹೆಚ್ಚಿಸಿತ್ತು. ಇದನ್ನು ವಿರೋಧಿಸಿ ಬ್ಯಾಂಕ್‌ನ ಗ್ರಾಹಕರು ಬ್ಯಾಂಕ್‌ನ ಕೇಂದ್ರ ಕಚೇರಿ ಹಾಗೂ ಆರ್‌ಬಿಐ ಎದುರು ಪ್ರತಿಭಟಿಸಿದ್ದರು. ಇತ್ತೀಚೆಗೆ 40,000 ರೂ.ಗೆ ಹೆಚ್ಚಿಸಲಾಗಿತ್ತು. ಈ ಮಧ್ಯೆ, ಮುಂಬೈಯ ಆಝಾದ್ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಪಿಎಂಸಿ ಬ್ಯಾಂಕ್‌ನ ಗ್ರಾಹಕರ ನಿಯೋಗವು ಆರ್‌ಬಿಐ ಅಧಿಕಾರಿಗಳನ್ನು ಭೇಟಿಯಾಗಿ, ಹಗರಣ ಬೆಳಕಿಗೆ ಬಂದ ಬಳಿಕ ಬ್ಯಾಂಕ್‌ನಲ್ಲಿಟ್ಟಿರುವ ಠೇವಣಿಯ ಸುರಕ್ಷತೆಯ ಕುರಿತ ಆತಂಕದಿಂದ ಅಸ್ವಸ್ಥರಾಗಿ ಮೃತಪಟ್ಟಿರುವ ಗ್ರಾಹಕರ ಕುಟುಂಬದವರಿಗೆ 25 ಲಕ್ಷ ರೂ. ಪರಿಹಾರ ಒದಗಿಸುವಂತೆ ಕೋರಿಕೆ ಸಲ್ಲಿಸಿತು.

ಹಗರಣ ಬೆಳಕಿಗೆ ಬಂದ ಬಳಿಕ ಬ್ಯಾಂಕ್‌ನ ನಾಲ್ವರು ಗ್ರಾಹಕರು ಮೃತಪಟ್ಟಿದ್ದಾರೆ. ಗ್ರಾಹಕರು ಬ್ಯಾಂಕ್‌ನಲ್ಲಿಟ್ಟಿರುವ ಹಣ ಸುರಕ್ಷಿತವಾಗಿದೆ ಎಂದು ಭರವಸೆ ನೀಡಿದ ಆರ್‌ಬಿಐ ಅಧಿಕಾರಿಗಳು, ಈ ವಾರಾಂತ್ಯ ಆಂತರಿಕ ತನಿಖಾ ಸಮಿತಿ ವರದಿ ಸಲ್ಲಿಸಿದ ಬಳಿಕ ಅದನ್ನು ಪರಿಶೀಲಿಸಿ, ಪರಿಹಾರ ಧನದ ಬಗ್ಗೆ ನಿರ್ಧರಿಸಲಾಗುವುದು ಎಂದಿದ್ದಾರೆ.

ಬ್ಯಾಂಕ್‌ನಿಂದ ಹಣ ಹಿಂಪಡೆಯಲು ನಿಷೇಧ ವಿಧಿಸಿರುವುದನ್ನು ಪ್ರಶ್ನಿಸಿ ಪಿಎಂಸಿ ಬ್ಯಾಂಕ್‌ನ ಗ್ರಾಹಕರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಕಳೆದ ಶುಕ್ರವಾರ ಸುಪ್ರೀಂಕೋರ್ಟ್ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News