ಇವಿಎಂ ವಿರುದ್ಧ ಆಂದೋಲನ ಅನಿವಾರ್ಯ

Update: 2019-10-24 05:14 GMT

ಎರಡು ವಿಧಾನಸಭೆ ಮತ್ತು ಹಲವೆಡೆ ನಡೆದ ಉಪಚುನಾವಣೆಗಳ ಫಲಿತಾಂಶಗಳು ಗುರುವಾರ ಹೊರಬೀಳಲಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಫಲಿತಾಂಶಗಳ ಕುರಿತಂತೆ ಯಾರೂ ವಿಶೇಷ ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಿಲ್ಲ. ಫಲಿತಾಂಶ ಈ ದೇಶದ ಭವಿಷ್ಯವನ್ನು ಮೇಲೆತ್ತಬಹುದು ಎನ್ನುವ ಭರವಸೆ ಕೂಡ ಅವರಲ್ಲಿ ಕಾಣುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಫಲಿತಾಂಶಕ್ಕೆ ಮುನ್ನ ಟಿವಿ ಮತ್ತು ಪತ್ರಿಕೆಗಳ ಮೂಲಕ ಚುನಾವಣೋತ್ತರ ಸಮೀಕ್ಷೆ ಎನ್ನುವ ಹೆಸರಿನಲ್ಲಿ ಫಲಿತಾಂಶವನ್ನು ಮೊದಲೇ ಘೋಷಿಸಿ ಜನರನ್ನು ಮಾನಸಿಕವಾಗಿ ಸಿದ್ಧಗೊಳಿಸಲಾಗುತ್ತದೆ. ಆ ಬಳಿಕ ಅಧಿಕೃತ ಫಲಿತಾಂಶಗಳನ್ನು ಘೋಷಣೆ ಮಾಡಲಾಗುತ್ತದೆ. ಕಳೆದ ಲೋಕಸಭೆಯ ಚುನಾವಣೆಯಲ್ಲೂ ಇದೇ ನಡೆಯಿತು. ಇದೀಗ ನಾಳೆ ಘೋಷಿಸಲಿರುವ ಫಲಿತಾಂಶಗಳ ಗತಿಯೂ ಇದೇ ಆಗಿದೆ. ಕೆಲವೊಮ್ಮೆ ವಿಧಾನಸಭೆ ಮತ್ತು ಉಪಚುನಾವಣೆಗಳ ಫಲಿತಾಂಶಗಳು ಮಾತ್ರ ಸಮೀಕ್ಷೆಗೆ ವಿರುದ್ಧವಾಗಿರುತ್ತದೆ. ಆದರೆ ದೇಶದ ಪಾಲಿಗೆ ನಿರ್ಣಾಯಕವಾಗುವ ಎಲ್ಲ ಚುನಾವಣೆಗಳ ಫಲಿತಾಂಶಗಳು ಮಾಧ್ಯಮಗಳ ಚುನಾವಣೋತ್ತರ ಸಮೀಕ್ಷೆಗಳ ಜೊತೆ ತಾಳೆಯಾಗುತ್ತವೆ.

ಒಂದು ವಾದದಂತೆ , ಇವಿಎಂ ಅಕ್ರಮಗಳ ಮೂಲಕ ನಡೆಯುವ ಫಲಿತಾಂಶಗಳನ್ನು ಪ್ರಶ್ನಿಸದಂತೆ ಜನರನ್ನು ಮಾನಸಿಕವಾಗಿ ಸಿದ್ಧಗೊಳಿಸಲು ಈ ಸಮೀಕ್ಷೆಗಳನ್ನು ಬಳಸಲಾಗುತ್ತದೆ. ಈ ಸಮೀಕ್ಷೆಯ ಹಿಂದೆ ಒಂದು ನಿರ್ದಿಷ್ಟ ತಂಡವಿದೆ ಎನ್ನುವ ಆರೋಪಗಳಿವೆ. ಅಕ್ರಮ ನಡೆಯಲಿ, ನಡೆಯದಿರಲಿ ಇವಿಎಂ ಕುರಿತಂತೆ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳನ್ನು ಹೊರತು ಪಡಿಸಿ, ಎಲ್ಲ ಪಕ್ಷಗಳು ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿವೆ. ಪ್ರಜಾಪ್ರಭುತ್ವದ ಯಶಸ್ವಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಶೇ. 50ರಷ್ಟು ಪಕ್ಷಗಳು ಒಕ್ಕೊರಲಿನಲ್ಲಿ ಇವಿಎಂನ್ನು ನಿಷೇಧಿಸಿ ಎಂದು ಕೇಳುತ್ತಿರುವಾಗ ಅದಕ್ಕೆ ಕಿವಿಯಾಗುವುದು ಚುನಾವಣಾ ಆಯೋಗದ ಕರ್ತವ್ಯ. ಯಾಕೆಂದರೆ ಇವಿಎಂ ಮೂಲಕ ಒಂದು ರಾಜ್ಯ ಅಥವಾ ಒಂದು ದೇಶವನ್ನು ಆಳುವವರು ಯಾರು ಎಂದು ನಿರ್ಧಾರವಾಗುವುದು ಅಂತಿಮವಾಗಿ ಪ್ರಜಾಸತ್ತೆಯ ಉದ್ದೇಶವನ್ನೇ ಬುಡಮೇಲುಗೊಳಿಸುತ್ತದೆ. ಆದುದರಿಂದ, ಇಂದು ದೇಶದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷ ನಿಜಕ್ಕೂ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಪಕ್ಷವೋ ಅಲ್ಲವೋ ಎನ್ನುವುದು ಸ್ಪಷ್ಟವಾಗುವುದು ಅತ್ಯಗತ್ಯವಾಗಿದೆ. ಇಂದು ಚುನಾವಣಾ ಫಲಿತಾಂಶದ ಕುರಿತಂತೆ ಎಲ್ಲ ಪಕ್ಷಗಳೂ ಅನುಮಾನ ವ್ಯಕ್ತಪಡಿಸುತ್ತವೆ. ಗೆದ್ದರೆ ಸುಮ್ಮಗಿದ್ದು, ಸೋತಾಗ ಇವಿಎಂ ಬಗ್ಗೆ ತಮ್ಮ ಆಕ್ಷೇಪಗಳನ್ನು ಎತ್ತುತ್ತಿವೆ. ಆದರೆ ಸದ್ಯಕ್ಕೆ ಬಿಜೆಪಿ ಏಕಮೇವ ಪಕ್ಷವಾಗಿ ಪದೇ ಪದೇ ಆಯ್ಕೆಗೊಳ್ಳುತ್ತಿರುವುರಿಂದಾಗಿ ಇವಿಎಂ ತಿರುಚುವಿಕೆಯ ಕುರಿತಂತೆ ಅನುಮಾನಗಳು ಗಟ್ಟಿಯಾಗುತ್ತಿವೆ. ಇನ್ನೊಂದು 25 ವರ್ಷಗಳ ಬಳಿಕ ಈ ಅಕ್ರಮಗಳು ನಡೆದಿರುವುದು ನಿಜ ಎನ್ನುವುದು ಬಯಲಾಯಿತು ಎಂದಿಟ್ಟುಕೊಳ್ಳೋಣ. ಆಗ ಏನೆಲ್ಲ ಅನಾಹುತಗಳು ನಡೆಯಬೇಕೋ ಅವೆಲ್ಲ ನಡೆದು ಮುಗಿದಿರುತ್ತದೆ.

ಮುಖ್ಯವಾಗಿ, ಸದ್ಯದ ಸರಕಾರ ಇಡೀ ದೇಶವನ್ನು ಕಾರ್ಪೊರೇಟ್ ಶಕ್ತಿಗಳಿಗೆ ಒತ್ತೆಯಿಟ್ಟಿದೆ. ಸಾರ್ವಜನಿಕ ಸಂಸ್ಥೆಗಳೆಲ್ಲವೂ ಅವರ ಜೇಬು ಸೇರುತ್ತಿವೆ. ಶ್ರೀಸಾಮಾನ್ಯನಿಗೆ ವಿರೋಧಿಯಾದ ನೀತಿಯನ್ನು ಅನುಸರಿಸಿಯೂ ಸರಕಾರ ಪದೇ ಪದೇ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸುತ್ತದೆ ಎಂದರೆ, ಅದರ ಅರ್ಥ, ಶ್ರೀಸಾಮಾನ್ಯ ಈ ಬದಲಾವಣೆಯನ್ನು ಒಪ್ಪುತ್ತಿದ್ದಾನೆ ಎಂದಾಗಿದೆ. ಅಂದರೆ ಶ್ರೀಸಾಮಾನ್ಯನ ಮೂಲಕವೇ ಅವನಿಗೆ ವಿರುದ್ಧವಾದ ಆರ್ಥಿಕ ನೀತಿಯನ್ನು ಜಾರಿಗೊಳಿಸುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಈ ಸರಕಾರ ಇವಿಎಂ ತಿರುಚಿವಿಕೆಯ ಮೂಲಕ ರಚನೆಯಾಗಿದೆಯೆಂದಾದರೆ, ಸರಕಾರದ ನಿಲುವುಗಳ ಹೊಣೆಯನ್ನು ಶ್ರೀಸಾಮಾನ್ಯ ಹೊರಬೇಕಾಗಿಲ್ಲ. ಸದ್ಯ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಸರಕಾರ ತೆಗೆದುಕೊಳ್ಳುವ ನಿಲುವುಗಳೆಲ್ಲ ಬಡವರಿಗೆ ವಿರುದ್ಧವಾಗಿದೆ. ದೇಶದಲ್ಲಿ ನಿರುದ್ಯೋಗಗಳು ಹೆಚ್ಚಿವೆ. ದಂಗೆ, ಗುಂಪು ಥಳಿತಗಳೂ ಅಧಿಕವಾಗುತ್ತಿವೆ. ಅಪೌಷ್ಟಿಕತೆಯಲ್ಲಿ ದೇಶ ವಿಶ್ವದಲ್ಲೇ ಪ್ರಥಮ ಸ್ಥಾನವನ್ನು ಪಡೆದಿದೆ. ಹೀಗಿದ್ದರೂ ಜನರು ಮತ್ತೆ ಮತ್ತೆ ಅದೇ ಸರಕಾರದ ಕಡೆಗೆ ಒಲವು ತೋರಿಸುತ್ತಿದ್ದಾರೆ ಎಂದಾದರೆ, ಅದಕ್ಕೆ ಮೂರು ಕಾರಣಗಳನ್ನು ನೀಡಬಹುದು. ಒಂದು, ಇವಿಎಂನ್ನು ತಿರುಚಲಾಗುತ್ತಿದೆ. ಎರಡನೆಯದು, ದೇಶಾದ್ಯಂತ ಜನರು ಕೋಮುಮನಸ್ಥಿತಿಯ ಕಡೆಗೆ ಜಾರುತ್ತಿದ್ದು ಒಂದು ನಿರ್ದಿಷ್ಟ ಪಕ್ಷಕ್ಕೇ ಮತಗಳನ್ನು ನೀಡುತ್ತಿದ್ದಾರೆ. ಮೂರನೆಯ ಕಾರಣ, ಮೋದಿ ಹೇಳಿದಂತೆ ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ.

ಇವಿಎಂ ತಿರುಚಿದ ಕಾರಣದಿಂದ ಫಲಿತಾಂಶ ಹೊರಬಿದ್ದಿದೆ ಎಂದಾದರೆ ಅದು ಅಪಾಯಕಾರಿ ಹೌದು. ಆದರೆ, ಒಂದು ವೇಳೆ ಇವಿಎಂ ಬದಲಿಗೆ ಜನರ ಮನಸನ್ನೇ ತಿರುಚಿ ಅವರೊಳಗೆ ದ್ವೇಷವನ್ನು ಬಿತ್ತಿ ಬೆಳೆಸಿ ಅಂತಹ ಫಲಿತಾಂಶಗಳ ಕೊಯ್ಲನ್ನು ಕೊಯ್ಯಲಾಗಿದೆ ಎಂದಾದರೆ ಅದು ಅದಕ್ಕಿಂತಲೂ ಅಪಾಯಕಾರಿ. ಅದು ಈ ದೇಶವನ್ನು ಖಂಡಿತವಾಗಿಯೂ ದುರಂತದೆಡೆಗೆ ತಳ್ಳುತ್ತದೆ. ಇದೇ ಸಂದರ್ಭದಲ್ಲಿ ಇವಿಎಂ ತಿರುಚಿ ಗೆದ್ದು ಬಂದ ಸರಕಾರವು ತನ್ನ ನೀತಿಗಳ ಮೂಲಕ ಸಂಘಪರಿವಾರ ಮತ್ತು ಕಾರ್ಪೊರೇಟ್ ಶಕ್ತಿಗಳಿಗೆ ದೇಶವನ್ನು ಬಲಿಕೊಟ್ಟು ಎಲ್ಲವನ್ನೂ ನಾಶ ಪಡಿಸುವ ಸಾಧ್ಯತೆಗಳಿವೆ. ಆದರೆ ಆಳುವ ಸರಕಾರ ನಡೆಸುವ ದಬ್ಬಾಳಿಕೆಗಳನ್ನು ಜನರು ಒಂದಾಗಿ ಪ್ರತಿರೋಧಿಸಬಹುದು. ಆದರೆ, ಜನರೇ ಅಂತಹ ಮನಸ್ಥಿತಿಗೆ ಬಲಿಯಾಗಿದ್ದರೆ, ಸರಕಾರವನ್ನು ಪ್ರತಿರೋಧಿಸುವುದಿರಲಿ, ಸರಕಾರದ ಜೊತೆಗೇ ಅವರು ಕೈ ಜೋಡಿಸಿ ದೇಶವನ್ನು ನಾಶದೆಡೆಗೆ ತಳ್ಳಬಹುದು. ಆದುದರಿಂದಲೇ, ಇವಿಎಂ ತಿರುಚುವಿಕೆಯ ಕುರಿತಂತೆ ದೇಶ ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವುದು ಅತ್ಯಗತ್ಯ. ಅಂದರೆ ಸದ್ಯ ದೇಶ ಎಲ್ಲಿ ನಿಂತಿದೆ ಎನ್ನುವುದನ್ನು ಸ್ಪಷ್ಟಪಡಿಸಿ ಕಾರ್ಯಯೋಜನೆಗಳನ್ನು ರೂಪಿಸಬೇಕಾದರೆ ಈ ದೇಶದಲ್ಲಿ ನಿಜಕ್ಕೂ ಪ್ರಜೆಗಳು ಆರಿಸಿದ ಸರಕಾರವಿದೆಯೋ ಅಥವಾ ಪ್ರಜೆಗಳನ್ನು ಇವಿಎಂ ಮೂಲಕ ಯಮಾರಿಸಿದ ಪ್ರಜಾಸತ್ತೆಯ ಮುಖವಾಡ ಹೊತ್ತ ನಕಲಿ ಸರಕಾರವಿದೆಯೋ? ಇದು ಸ್ಪಷ್ಟವಾಗಬೇಕು. ಈ ಗೊಂದಲಗಳು ಎಲ್ಲಿಯವರೆಗೆ ಗೊಂದಲಗಳಾಗಿಯೇ ಉಳಿಯುತ್ತವೆೆಯೋ ಅಲ್ಲಿಯವರೆಗೆ ವಿರೋಧ ಪಕ್ಷಗಳು ಮತ್ತು ಜಾತ್ಯತೀತ ಶಕ್ತಿಗಳು ಗಾಳಿಯಲ್ಲಿ ಗುದ್ದಾಡಿದಂತಾಗುತ್ತದೆ.

ಈಗಾಗಲೇ ಕೆಲವು ಮಾಧ್ಯಮಗಳು ಬಹಿರಂಗಪಡಿಸಿದ ತನಿಖಾ ವರದಿಗಳು ‘ಇವಿಎಂನ್ನು ತಿರುಚಲು ಸಾಧ್ಯವಿದೆ’ ಎನ್ನುವುದನ್ನು ಸ್ಪಷ್ಟಪಡಿಸಿವೆ. ಜೊತೆಗೆ ಬಹುಸಂಖ್ಯಾತ ಪಕ್ಷಗಳು ಇವಿಎಂನ್ನು ನಿಷೇಧಿಸಬೇಕು ಎಂದು ಆಯೋಗವನ್ನು ಒತ್ತಾಯ ಮಾಡಿರುವಾಗ, ‘ಇವಿಎಂ ತಿರುಚಲು ಸಾಧ್ಯವಿಲ್ಲ’ ಎಂದು ತೀರ್ಪನ್ನು ಘೋಷಿಸಿ ಒತ್ತಾಯವನ್ನು ತಿರಸ್ಕರಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲ. ಪ್ರಜಾಸತ್ತೆಯನ್ನು ಯಶಸ್ವಿಗೊಳಿಸುವ ಹಿನ್ನೆಲೆಯಲ್ಲಿ ಚುನಾವಣೆಯನ್ನು ‘ಪಾರದರ್ಶಕವಾಗಿ’ ನಡೆಸುವುದು ಅದರ ಹೊಣೆಗಾರಿಕೆಯಾಗಿದೆ. ಮತ ಎಣಿಕೆ, ಫಲಿತಾಂಶ ಘೋಷಣೆ ಇತ್ಯಾದಿಗಳು ತಡವಾಗಬಹುದು ಎನ್ನುವ ಕಾರಣವೇ ಒಂದು ಬಾಲಿಶ. ಅಕ್ರಮವಾಗಿ ನಡೆದ ಚುನಾವಣೆಯ ಫಲಿತಾಂಶ ಅದೆಷ್ಟು ಬೇಗ ಘೋಷಣೆಯಾದರೂ ಅದರಿಂದ ಪ್ರಜಾಸತ್ತೆಗೆ ಲಾಭವಿಲ್ಲ. ಇವಿಎಂ ನಿಷೇಧವಾಗಬೇಕು. ಒಂದು ವೇಳೆ, ಆಗಲೂ ಸಂಘಪರಿವಾರ ಬೆಂಬಲಿತ ಪಕ್ಷಗಳು ಭರ್ಜರಿಗೆಲುವನ್ನು ಪಡೆಯಿತು ಎಂದಾದರೆ ಅದನ್ನು ನಾವು ಒಪ್ಪಲೇಬೇಕು. ಮತ್ತು ಈ ದೇಶದಲ್ಲಿ ಸಂವಿಧಾನ ವಿರೋಧಿ ಶಕ್ತಿಗಳು ಎಷ್ಟು ಆಳಕ್ಕೆ ಇಳಿದಿವೆ, ವಿಸ್ತಾರವಾಗಿ ಹರಡಿವೆ ಎನ್ನುವುದು ಸಂವಿಧಾನಪರರು ತಿಳಿದುಕೊಳ್ಳುವುದಕ್ಕೆ, ಅದರ ವಿರುದ್ಧ ಅಷ್ಟೇ ಬಲವಾಗಿ ಕಾರ್ಯಯೋಜನೆಗಳನ್ನು ರೂಪಿಸುವುದಕ್ಕೆ ಅದು ಸಹಾಯ ಮಾಡುತ್ತದೆ. ಆದುದರಿಂದ ಇವಿಎಂ ವಿರುದ್ಧ ಬೃಹತ್ ಆಂದೋಲನವು ಭವಿಷ್ಯದ ಲೋಕಸಭಾ ಚುನಾವಣೆಗೆ ಮುನ್ನ ಆರಂಭವಾಗಬೇಕಾಗಿದೆ. ಇದು ಪ್ರಜಾಸತ್ತೆಯ ಉಳಿವಿಗಾಗಿ ಮಾಡುವ ಆಂದೋಲನವಾಗಿದೆ ಎನ್ನುವುದನ್ನು ಎಲ್ಲ ಸಂಘಟನೆಗಳು, ಪಕ್ಷಗಳು ನೆನಪಿನಲ್ಲಿರಿಸಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News