ಕರ್ತಾರ್‌ಪುರ ಕಾರಿಡಾರ್ ಒಪ್ಪಂದಕ್ಕೆ ಭಾರತ-ಪಾಕ್ ಸಹಿ

Update: 2019-10-24 17:58 GMT

ಹೊಸದಿಲ್ಲಿ, ಅ.24: ಕರ್ತಾರ್‌ ಪುರ ಕಾರಿಡಾರ್‌ನ ಕಾರ್ಯನಿರ್ವಹಣೆಯ ಕುರಿತ ಒಪ್ಪಂದಕ್ಕೆ ಭಾರತ ಮತ್ತು ಪಾಕಿಸ್ತಾನ ಗುರುವಾರ ಸಹಿ ಹಾಕಿವೆ. ಉಭಯ ದೇಶಗಳ ಗಡಿಭಾಗದಲ್ಲಿರುವ ಶೂನ್ಯರೇಖೆಯಲ್ಲಿ ಎರಡೂ ರಾಷ್ಟ್ರಗಳ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಕಾರಿಡಾರ್ ಕಾರ್ಯನಿರ್ವಹಣೆ ಕುರಿತ ಒಪ್ಪಂದಕ್ಕೆ ಅಕ್ಟೋಬರ್ 23ರಂದೇ ಸಹಿ ಹಾಕಬೇಕೆಂದು ಭಾರತ ಪ್ರಸ್ತಾಪಿಸಿತ್ತು. ಆದರೆ ಪಾಕಿಸ್ತಾನದ ಕಡೆಯಿಂದ ಕೆಲವು ಆಡಳಿತಾತ್ಮಕ ವಿಷಯಗಳು ಅಂತಿಮವಾಗದ ಕಾರಣ ಒಂದು ದಿನ ತಡವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕರ್ತಾರ್‌ಪುರ ಕಾರಿಡಾರ್ ಆರಂಭದ ಕುರಿತ ಪಾಕಿಸ್ತಾನ-ಭಾರತ ಚಾರಿತ್ರಿಕ ಒಪ್ಪಂದಕ್ಕೆ ಸಹಿ ಹಾಕಲಾಗುತ್ತಿದೆ. ಪಾಕಿಸ್ತಾನದ ನೊರೊವಲ್‌ನಲ್ಲಿ ಪ್ರಧಾನಿ ಇಮ್ರಾನ್ ಖಾನ್ ನವೆಂಬರ್ 9ರಂದು ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಅನ್ನು ಉದ್ಘಾಟಿಸಲಿದ್ದಾರೆ ಎಂದು ಪಾಕಿಸ್ತಾನದ ವಿದೇಶ ವ್ಯವಹಾರ ಸಚಿವಾಲಯದ ವಕ್ತಾರ ಮುಹಮ್ಮದ್ ಫೈಝಲ್ ಟ್ವೀಟ್ ಮಾಡಿದ್ದಾರೆ. ಅವರು ಪಾಕ್ ನಿಯೋಗದ ನೇತೃತ್ವ ವಹಿಸಿದ್ದರು.

ಗುರುನಾನಕರು ತಮ್ಮ ಬದುಕಿನ ಅಂತಿಮ ದಿನಗಳಲ್ಲಿ ಪಾಕಿಸ್ತಾನದ ಕರ್ತಾರ್‌ಪುರದಲ್ಲಿರುವ ದರ್ಬಾರಾ ಸಾಹಿಬ್‌ನಲ್ಲಿ ನೆಲೆಸಿದ್ದರು ಎಂಬ ನಂಬಿಕೆಯಿದೆ.

ಕರ್ತಾರ್‌ಪುರದ ದರ್ಬಾರಾ ಸಾಹಿಬ್‌ಗೆ ಪಾಸ್‌ಪೋರ್ಟ್ ಹೊಂದಿರುವ ಭಾರತೀಯ ಯಾತ್ರಿಗಳು ವೀಸಾದ ಅಗತ್ಯವಿಲ್ಲದೆ ಭೇಟಿ ನೀಡಬಹುದು ಎಂದು ಭಾರತದ ಆಂತರಿಕ ಭದ್ರತಾ ವಿಭಾಗದ ಜಂಟಿ ಕಾರ್ಯದರ್ಶಿ ಸಿಎಲ್ ದಾಸ್ ಹೇಳಿದ್ದಾರೆ. ದಾಸ್ ಭಾರತದ ನಿಯೋಗದಲ್ಲಿದ್ದರು. ಗುರುದ್ವಾರದ ಆವರಣದಲ್ಲಿ ಪ್ರಾರ್ಥನೆ ಸಲ್ಲಿಸಲು ಹಾಗೂ ಪ್ರಸಾದ ವಿತರಿಸಲು ಅಗತ್ಯವಿರುವ ವ್ಯವಸ್ಥೆ ಮಾಡುವುದಾಗಿ ಪಾಕಿಸ್ತಾನ ಒಪ್ಪಿಕೊಂಡಿದೆ. ನಾವು ಮೂಲಭೂತ ವ್ಯವಸ್ಥೆಗಳಾದ ಹೆದ್ದಾರಿ ನಿರ್ಮಾಣ, ಪ್ರಯಾಣಿಕರ ನಿಲ್ದಾಣ ಮುಂತಾದ ವ್ಯವಸ್ಥೆ ಮಾಡುತ್ತೇವೆ ಎಂದು ದಾಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News