ಕರ್ತಾರ್‌ಪುರ ಯಾತ್ರಿಕರಿಗೆ ಪಾಕ್ ಹೇರಿರುವ ‘ಜೆಝಿಯಾ’ ತೆರಿಗೆಯನ್ನು ಮೋದಿ ಸರಕಾರ ಪಾವತಿಸಲಿ

Update: 2019-10-25 16:06 GMT

  ಹೊಸದಿಲ್ಲಿ,ಅ.25: ಪಾಕಿಸ್ತಾನದ ಪ್ರಸಿದ್ಧ ಸಿಖ್ಖ್ ಯಾತ್ರಾಸ್ಥಳ ಕರ್ತಾರ್‌ಪುರ ಸಾಹಿಬ್‌ಗೆ ಭೇಟಿ ನೀಡುವ ಪ್ರತಿಯೊಬ್ಬ ಭಾರತೀಯನಿಗೂ 20 ಅಮೆರಿಕನ್ ಡಾಲರ್ ಮೊತ್ತದ ಶುಲ್ಕವನ್ನು ವಿಧಿಸುವ ಪಾಕಿಸ್ತಾನದ ನಿರ್ಧಾರಕ್ಕೆ ಸಮ್ಮತಿ ವ್ಯಕ್ತಪಡಿಸಿರುವುದಕ್ಕಾಗಿ ಮೋದಿ ಸರಕಾರವನ್ನು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಕ್ ಸರಕಾರವು ಯಾತ್ರಿಕರ ಮೇಲೆ ಹೇರಿರುವ ದುಬಾರಿ ಶುಲ್ಕವನ್ನು ಜೆಝಿಯಾ ತೆರಿಗೆಗೆ ಅವರು ಹೋಲಿಸಿದ್ದಾರೆ. ಈ ದುಬಾರಿ ತೆರಿಗೆಯ ಜಾರಿಯನ್ನು ತಡೆಯಲು ವಿಫಲವಾಗಿದ್ದಕ್ಕಾಗಿ ಕೇಂದ್ರ ಸರಕಾರವೇ ಈ ತೆರಿಗೆಯನ್ನು ಪಾವತಿಸಬೇಕೆಂದು ಅವರು ಹೇಳಿದ್ದಾರೆ.

 ಕರ್ತಾರ್‌ಪುರ ಗುರುದ್ವಾರಕ್ಕೆ ಭೇಟಿ ನೀಡುವ ಯಾತ್ರಿಕರಿಗೆ ವಿಧಿಸುವ ಸೇವಾಶುಲ್ಕದಿಂದ ವಾರ್ಷಿಕವಾಗಿ 259 ಕೋಟಿ ರೂ. ಆದಾಯ ಸಂಗ್ರಹವಾಗುವ ನಿರೀಕ್ಷೆಯಿದೆ. ಈಗಾಗಲೇ ತೀವ್ರವಾದ ಹಣಕಾಸು ಬಿಕ್ಕಟ್ಟಿನಿಂದ ಬಳಲುತ್ತಿರುವ ಪಾಕ್ ಸರಕಾರಕ್ಕೆ ವಿದೇಶಿ ನಗದು ಸೃಷ್ಟಿಗೆ ಇದೊಂದು ಉತ್ತಮ ಆದಾಯ ಮೂಲವಾಗಲಿದೆ.

 ನೂತನವಾಗಿ ಆರಂಭಗೊಂಡಿರುವ ಕರ್ತಾರ್‌ಪುರ ಕಾರಿಡಾರ್ ಮೂಲಕ ಭಾರತದಿಂದ ದಿನಂಪ್ರತಿ 5 ಸಾವಿರ ಯಾತ್ರಿಕರು ಪಾಕಿಸ್ತಾನಕ್ಕೆ ಪ್ರಯಾಣಿಸಲಿದ್ದಾರೆ. ಪ್ರತಿ ಯಾತ್ರಿಕನಿಗೆ 1,400 ರೂ. ಶುಲ್ಕವನ್ನು ವಿಧಿಸುವುದರಿಂದ ಪಾಕ್‌ಗೆ ಪ್ರತಿದಿನ 70 ಲಕ್ಷ ರೂ. ಮತ್ತು ವಾರ್ಷಿಕವಾಗಿ ಸುಮಾರು 265 ಕೋಟಿ ರೂ. ಆದಾಯ ದೊರೆಯಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಯಾಕೆ ಪಾಕ್ ವಿಧಿಸುವ ಜೆಝಿಯಾ ತೆರಿಗೆಯನ್ನು ತಡೆಯಬಾರದು ಎಂದು ತಿವಾರಿ ಟ್ವೀಟ್ ಮಾಡಿದ್ದಾರೆ. ಮೊಗಲ್ ದೊರೆ ಔರಂಗಜೇಬನ ಕಾಲದಲ್ಲಿ ಮುಸ್ಲಿಮೇತರರಿಗೆ ವಿಧಿಸಲಾಗುತ್ತಿತ್ತೆನ್ನಲಾದ ತೆರಿಗೆಯನ್ನು ಜೆಝಿಯಾ ಎಂದು ಕರೆಯಲಾಗುತ್ತಿದೆ.

ಕರ್ತಾರ್‌ಪುರ ಸಾಹಿಬ್ ಸಂದರ್ಶಿಸುವ ಪ್ರತಿ ಯಾತ್ರಿಕನಿಗೆ 20 ಡಾಲರ್ ವಿಧಿಸುವ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಭಾರತವು ಪಾಕಿಸ್ತಾನವನ್ನು ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News